ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು/ ಮಳವಳ್ಳಿ/ ಶ್ರೀರಂಗಪಟ್ಟಣ
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಪ್ರವಾಸಿಗರಿಲ್ಲದೇ ಬೀಕೋ ಎನ್ನುತ್ತಿದ್ದವು.ವರ್ಷದ ಕೊನೆ ದಿನ ಭಾನುವಾರವಾಗಿದ್ದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಪ್ರವಾಸಿ ತಾಣಕ್ಕೆ ಬಂದಿದ್ದರು. ಆದರೆ, ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರಿಂದ ನಿರಾಸೆಯಿಂದ ಹಿಂದಿರುಗುತ್ತಿದ್ದರು ಎಂದು ಹೇಳಲಾಗಿದೆ.
ಹಲಗೂರಿನ ಮುತ್ತತ್ತಿ, ಶ್ರೀರಂಗಪಟ್ಟಣದ ಬಲಮುರಿ, ಕಾವೇರಿ ನದಿ ತೀರಾ, ಕೆಆರ್‌ಎಸ್ ಹಿನ್ನೀರಿನ ಪ್ರದೇಶ, ಕರೀಘಟ್ಟ, ಘೋಸಾಯಿ ಘಾಟ್, ವೇಣುಗೋಪಾಲಸ್ವಾಮಿ ದೇವಾಲಯ, ಪಶ್ಚಿಮವಾಹಿನಿ, ಮಂಡ್ಯ ಕೊಪ್ಪಲು, ಕಾವೇರಿ ಬೋರೇದೇವರ ದೇವಸ್ಥಾನ, ಮಹದೇವಪುರ, ಪಾಂಡವಪುರ ತಾಲೂಕಿನ ಎಣ್ಣೆಹೊಳೆಕೊಪ್ಪಲು ಸೇರಿದಂತೆ ವಿವಿಧೆಡೆ ನಿಷೇಧಾಜ್ಞೆ ಜಾರಿಗೊಳಿಸಿರುವುದರಿಂದ ಈಗಾಗಲೇ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.ಡಿ.31 ಸಂಜೆಯಿಂದ ಜನವರಿ 1 ಸಂಜೆ 6 ಗಂಟೆವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹಾಕಿರುವುದರಿಂದ ಬಹುತೇಕ ಪ್ರದೇಶಗಳಲ್ಲಿ ಪ್ರವಾಸಿಗರಿಲ್ಲದೇ ಬೀಕೋ ಎನ್ನುವ ವಾತಾವರಣ ನಿರ್ಮಾಣವಾಗಲಿದೆ ಎಂದು ಹೇಳಲಾಗಿದೆ.
ಹಲಗೂರು ವರದಿ:ಹಲಗೂರು ಮುತ್ತತ್ತಿ ಪ್ರವಾಸಿ ತಾಣಕ್ಕೆ ಪ್ರವಾಸಿಗರಿಗೆ ಜಿಲ್ಲಾಡಳಿತ ನಿಷೇಧಿಸಿರುವುದರಿಂದ ವೀಕ್ಷಿಸಲು ಅವಕಾಶವಿಲ್ಲದ ಕಾರಣ ಮುತ್ತತ್ತಿಗೆ ಹೋಗಲು ಬಂದಿದ್ದ ಪ್ರವಾಸಿಗರು ನಿರಾಸೆಯಿಂದ ಹಿಂದಿರುಗಿದ್ದಾರೆ.
ಜಿಲ್ಲಾಡಳಿತ ಭಾನುವಾರ ಮತ್ತು ಸೋಮವಾರ ಮುತ್ತತ್ತಿ ಗೆ ಬರುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಮುತ್ತತ್ತಿ ಪ್ರವೇಶವನ್ನು ನಿಷೇಧಿಸಿದ್ದರಿಂದ ಮುತ್ತತ್ತಿಯ ತಾಳವಾಡಿ ಅರಣ್ಯ ಇಲಾಖೆ ಚೆಕ್ ಪೋಸ್ಟಿನ 100 ಮೀಟರ್ ದೂರದಲ್ಲಿ ಪೊಲೀಸರು ಮತ್ತು ಅರಣ್ಯ ಇಲಾಖೆಯವರು ಬ್ಯಾರಿಕೇಟ್ ಹಾಕಿ ಪ್ರವಾಸಿಗರಿಗೆ ಮನವರಿಕೆ ಮಾಡಿ ವಾಪಸ್ ಕಳುಹಿಸುತ್ತಿದ್ದರು.ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಸಿಬ್ಬಂದಿಗಳೊಂದಿಗೆ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶನಿವಾರ ದೇವರ ದರ್ಶನಕ್ಕೆ ಬಂದಿದ್ದ ಭಕ್ತರನ್ನು ಹಾಗೂ ಪ್ರವಾಸಿಗರನ್ನು ಅದೇ ವಾಪಸ್ ಕಳುಹಿಸಿದ್ದಾರೆ.
ಅರಣ್ಯಾಧಿಕಾರಿ ಆರ್ ಎಫ್ ರವಿ ಬುರ್ಜಿ ಮಾತನಾಡಿ, ಕಳೆದ ಬಾರಿಯೂ ನಿಷೇಧ ಹೇರಲಾಗಿತ್ತು. ಈ ಬಾರಿಯೂ ಮುತ್ತತ್ತಿ, ಭೀಮೇಶ್ವರಿ ಮುಂತಾದ ಪ್ರವಾಸಿ ತಾಣಗಳ ಸುತ್ತಮುತ್ತ ಬ್ಯಾನರ್ ಗಳನ್ನು ಕಟ್ಟಿ, ಟಿವಿ ಹಾಗೂ ಪತ್ರಿಕೆಗಳ ಮೂಲಕ ಸಾರ್ವಜನಿಕರಿಗೆ ಮುಂಜಾಗ್ರತಿ ಮೂಡಿಸಿದ್ದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿಲ್ಲ ಎಂದು ಮಾಹಿತಿ ನೀಡಿದರು.ಶ್ರೀರಂಗಪಟ್ಟಣ ವರದಿ:
ತಾಲೂಕಿನ ಕೆಲ ಪ್ರವಾಸಿ ತಾಣಗಳಿಗೆ ಭಾನುವಾರ ಹೆಚ್ಚಿನ ಪ್ರವಾಸಿಗರು ಆಗಮಿಸಿದ್ದರು.ನಿಷೇಧಾಜ್ಞೆ ಜಾರಿ ಮಾಡಿದ್ದ ಪ್ರದೇಶಗಳನ್ನು ಹೊರತು ಪಡಿಸಿ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಗಂಜಾಂ ನ ಶ್ರೀ ನಿಮಿಷಾಂಬ ದೇವಸ್ಥಾನ, ಬೇಸಿಗೆ ಅರಮನೆ, ತಾಲೂಕಿನ ಕೆಆರ್‌ಎಸ್, ರಂಗನತಿಟ್ಟು ಸೇರಿದಂತೆ ಇತರ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಕಂಡು ಬಂತು.
ತಾಲೂಕಿನ ಕೆಆರ್‌ಎಸ್ ಬೃಂದಾವನ ವೀಕ್ಷಣೆಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರ ಭೇಟಿ ನೀಡಿ ವೀಕ್ಷಣೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿ ಕಂಡುಬಂದಿದೆ.ಪಟ್ಟಣದ ಶ್ರೀ ರಂಗನಾಥ ಹಾಗೂ ನಿಮಿಷಾಂಬ ದೇವಾಲಯಗಳಿಗೆ ಸುಮಾರು 10 ರಿಂದ 15 ಸಾವಿರ ಭಕ್ತರು ಹಾಗೂ ಪ್ರವಾಸಿಗರ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ವಿದ್ಯಾರ್ಥಿಗಳು , ಓಂ ಶಕ್ತಿ ದೇವಾಲಯಕ್ಕೆ ತೇಳುವ ಭಕ್ತರ ಸಂಖ್ಯೆಯೂ ಸಹ ಹೆಚ್ಚಾಗಿ ಕಂಡುಬಂತು. ವರ್ಷದ ಕೊನೆ ದಿನ ಭಾನುವಾರವಾಗಿದ್ದರಿಂದ ತಾಲೂಕಿನ ಬಹುತೇಕ ಪ್ರವಾಸಿ ತಾಣಗಳು ಅತಿ ಹೆಚ್ಚು ಪ್ರವಾಸಿಗರಿಂದ ತುಂಬಿಹೋಗಿತ್ತು.
ಮಳವಳ್ಳಿ ವರದಿ:ತಾಲೂಕಿನ ಶಿವನಸಮುದ್ರಂನ ಬಳಿಯ ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ಭಾನುವಾರ ಭೇಟಿ ನೀಡಿದ್ದರು.
ಕಾವೇರಿ ನದಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಪ್ರವಾಸಿಗರು ಕೂಡ ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಬಂದಿರಲಿಲ್ಲ ಎಂದು ಹೇಳಳಾಗಿದೆ. ಕೆಲವೇ ಕೆಲವು ಮಂದಿಯಷ್ಟೆ ಮಾತ್ರ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದರು.ಗಗನಚುಕ್ಕಿ, ಕೊಳ್ಳೆಗಾಲದ ಭರಚುಕ್ಕಿ ಜಲಪಾತಗಳು ಮಳೆಗಾಲದಲ್ಲಿ ಮಾತ್ರ ತಮ್ಮ ವೈಭವವನ್ನು ತೋರುತ್ತವೆ. ಈ ಬಾರಿ ಮಳೆ ಪ್ರಮಾಣ ಇಳಿಕೆಯಾಗಿ ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ನೀರಿನ ವೈಭವವು ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಇದರಿಂದ ಪ್ರವಾಸಿಗರು ಕೂಡ ಇತ್ತ ತಲೆ ಹಾಕಿ ನೋಡಲಿಲ್ಲ. ಎರಡು ಜಲಪಾತಗಳು ಬಣಗುಡುತ್ತಿದ್ದವು.