ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ದೀಪಾವಳಿ ಹಬ್ಬಕ್ಕೆ ಇನ್ನು ಎಂಟು ದಿನಗಳು ಮಾತ್ರ ಬಾಕಿ ಉಳಿದಿದ್ದು, ಅನುಮತಿ ಇಲ್ಲದೇ ಗೋದಾಮುಗಳಲ್ಲಿ ಪಟಾಕಿ ಸಂಗ್ರಹಿಸಿಟ್ಟು ಸಗಟು ದರದಲ್ಲಿ ಪಟಾಕಿ ಮಾರಾಟ ಮಾಡುವವರ ಬಗ್ಗೆ ಜಿಲ್ಲಾಡಳಿತ ಈ ಬಾರಿ ವಿಶೇಷ ನಿಗಾ ವಹಿಸಿದೆ.ಕಳೆದ ವರ್ಷ ಆನೇಕಲ್‌ನಲ್ಲಿ ಅಕ್ರಮ ಪಟಾಕಿ ಗೋದಾಮಿನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿ 14 ಜನ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಪಟಾಕಿ ಗೋದಾಮುಗಳಿಗೆ ಅನುಮತಿ ನಿರಾಕರಿಸಲಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಸಗಟು ಪಟಾಕಿ ಮಾರಾಟ ಮಾಡಲು ಪಡೆದುಕೊಂಡಿದ್ದ ಲೈಸನ್ಸ್ ತೋರಿಸಿ ಈ ವರ್ಷಕ್ಕೂ ಹೊಸ ಲೈಸನ್ಸ್ ಪಡೆಯಲು ವ್ಯಾಪಾರಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ.
ಆದರೆ, ಜಿಲ್ಲಾಡಳಿತ ರೂಪಿಸಿರುವ ನಿಯಮಗಳ ಪ್ರಕಾರ ಹಳೆಯ ಲೈಸನ್ಸ್ ಆಧಾರದ ಮೇಲೆ ಗೋದಾಮುಗಳಲ್ಲಿ ಪಟಾಕಿ ಸಂಗ್ರಹಿಸುವಂತಿಲ್ಲ. ಅರ್ಜಿ ಸಲ್ಲಿಸಿದ ಬಳಿಕ ಪೊಲೀಸರು, ಅಗ್ನಿಶಾಮಕ ಇಲಾಖೆ ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಸುರಕ್ಷಿತ ಎನಿಸಿದಲ್ಲಿ ಮಾತ್ರ ಅನುಮತಿ ನೀಡಲಿದ್ದಾರೆ.ಸುರಕ್ಷತೆಯ ದೃಷ್ಟಿಯಿಂದ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಅಸುರಕ್ಷಿತವಾಗಿ ಪಟಾಕಿಗಳ ಸಂಗ್ರಹದಿಂದ ಬೆಂಕಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ, ಸುರಕ್ಷತೆಗೆ ಅತಿ ಹೆಚ್ಚು ಆದ್ಯತೆ ನೀಡಲಾಗಿದೆ ಎಂದು ಬೆಂಗಳೂರು ನಗರ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ನಾಯ್ಕ್ ತಿಳಿಸಿದರು.
ಬಾಕ್ಸ್ಬೇರೆ ಬೇರೆ ಮಾರ್ಗದಲ್ಲಿ
ಪಟಾಕಿ ಕಳ್ಳ ಸಾಗಣೆ!ತಮಿಳುನಾಡಿನ ಶಿವಕಾಶಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರಾಜ್ಯಕ್ಕೆ ಪಟಾಕಿ ಸರಬರಾಜು ಆಗುತ್ತವೆ. ಈ ಹಿನ್ನೆಲೆಯಲ್ಲಿ ಅತ್ತಿಬೆಲೆಯಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ಪರವಾನಗಿ ಇಲ್ಲದೇ ಪಟಾಕಿ ಸಾಗಣೆ ಮಾಡುವ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಟಾಕಿ ಸಾಗಣೆದಾರರು ಮಾಲೂರು ಸೇರಿದಂತೆ ಪರ್ಯಾಯ ಮಾರ್ಗಗಳಲ್ಲಿ ಪಟಾಕಿಯನ್ನು ನಗರಕ್ಕೆ ಸಾಗಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋಟ್...ಅಗ್ನಿ ಅನಾಹುತದಂತಹ ಅಹಿತಕರ ಘಟನೆಗಳನ್ನು ತಡೆಯಲು ಗೋದಾಮುಗಳಲ್ಲಿ ಪಟಾಕಿ ಸಂಗ್ರಹಿಸುವವರ ಮೇಲೆ ವಿಶೇಷ ಕಣ್ಗಾವಲು ಇರಿಸಲಾಗಿದೆ. ಅನುಮತಿ ಇಲ್ಲದೇ ಜನವಸತಿ, ವಾಣಿಜ್ಯ ಪ್ರದೇಶಗಳಲ್ಲಿ ಪಟಾಕಿ ಸಂಗ್ರಹಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ.
- ಜಗದೀಶ್ ನಾಯ್ಕ್, ಹೆಚ್ಚುವರಿ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ