ಮುತ್ತತ್ತಿ ಚೆಕ್ ಪೋಸ್ಟ್ ಬಳಿ ಗುರುವಾರ ಬೆಳಗ್ಗೆ ಸೇರಿದ ನೂರಾರು ಪ್ರವಾಸಿಗರು ಮತ್ತು ಭಕ್ತಾದಿಗಳು ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲು ಬಂದಿದ್ದು, ಮುತ್ತತ್ತಿಗೆ ಪ್ರವೇಶ ನೀಡಬೇಕೆಂದು ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಮಾತಿನ ಚಕಮಕಿ ನಡೆಸಿದರು.
ಕನ್ನಡಪ್ರಭ ವಾರ್ತೆ ಹಲಗೂರು
ಪ್ರವಾಸಿಗರ ಪ್ರಸಿದ್ದ ಪ್ರೇಕ್ಷಣೀಯ ಸ್ಥಳವಾದ ಮುತ್ತತ್ತಿ ಅಂಜನೇಯಸ್ವಾಮಿ ದೇವಾಲಯಕ್ಕೆ ತೆರಳಲು ಅವಕಾಶ ನೀಡಬೇಕೆಂದು ಆಗ್ರಹಿಸಿ ನೂರಾರು ಭಕ್ತರು ಅರಣ್ಯ ಇಲಾಖೆ ಚೆಕ್ ಪೋಸ್ಟ್ ಎದುರು ಗುರುವಾರ ಮಧ್ಯಾಹ್ನ ಪ್ರತಿಭಟಿಸಿದರು.ಮುತ್ತತ್ತಿ ಚೆಕ್ ಪೋಸ್ಟ್ ಬಳಿ ಗುರುವಾರ ಬೆಳಗ್ಗೆ ಸೇರಿದ ನೂರಾರು ಪ್ರವಾಸಿಗರು ಮತ್ತು ಭಕ್ತಾದಿಗಳು ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲು ಬಂದಿದ್ದು, ಮುತ್ತತ್ತಿಗೆ ಪ್ರವೇಶ ನೀಡಬೇಕೆಂದು ಅರಣ್ಯ ಇಲಾಖೆ ಸಿಬ್ಬಂದಿ ಜೊತೆಗೆ ಮಾತಿನ ಚಕಮಕಿ ನಡೆಸಿದರು.
ಧನುರ್ಮಾಸದ ಪ್ರಯುಕ್ತ ದೇವರಿಗೆ ಪೂಜೆ ಸಲ್ಲಿಸಲು ದೂರದ ಪಟ್ಟಣ, ನಗರ ವ್ಯಾಪ್ತಿಯಿಂದ ಕುಟುಂಬದ ಜೊತೆಗೆ ಆಗಮಿಸಿದ್ದೇವೆ. ಹೂವಿನ ಹಾರ ಮತ್ತಿತರ ಪೂಜಾ ಸಾಮಗ್ರಿಗಳನ್ನು ತಂದಿದ್ದು, ಈಗ ಏನು ಮಾಡುವುದು ಎಂದು ಮಹಿಳೆಯೊಬ್ಬರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಪ್ರಶ್ನಿಸಿದರು.ಈಗಾಗಲೇ ದಿನಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ನಿಷೇಧಾಜ್ಞೆ ಕುರಿತು ವರದಿಯಾಗಿದೆ. ತಾಲೂಕು ಆಡಳಿತದ ಅದೇಶಕ್ಕೆ ಎಲ್ಲರೂ ಗೌರವಿಸಿ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದ ನಂತರ ಭಕ್ತಾದಿಗಳು ಹಿಂತಿರುಗಿದರು.
ಹಲಗೂರು ಸಮೀಪದ ಮುತ್ತತ್ತಿ ಗ್ರಾಮ ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ. ಮುತ್ತತ್ತಿ, ಕಾವೇರಿ ನದಿ ದಂಡೆ, ಭೀಮೇಶ್ವರಿ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಡಿ.31 ಬುಧವಾರ ಮತ್ತು ಜ.1 ರ ಗುರುವಾರ ಸೇರಿದಂತೆ ಪ್ರವಾಸಿಗರಿಗೆ ಎರಡು ದಿನಗಳ ಕಾಲ ಮುತ್ತತ್ತಿಗೆ ಪ್ರವೇಶ ನೀಷೇಧಿಸಿ, ಮಳವಳ್ಳಿ ತಾಲೂಕು ದಂಡಾಧಿಕಾರಿ ಎಸ್.ವಿ.ಲೋಕೇಶ್ ನಿಷೇಧಾಜ್ಞೆ ಜಾರಿ ಮಾಡಿದ್ದರು. ಪರಿಣಾಮವಾಗಿ ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಮುತ್ತತ್ತಿ ಪ್ರವಾಸಿ ತಾಣ ಜನರಿಲ್ಲದೇ ಬಣಗುಡುತ್ತಿತ್ತು.ಹೊಸ ವರ್ಷದ ಪ್ರಯುಕ್ತ ವಿವಿಧೆಡೆ ಪೂಜೆ:
ಗುರುವಾರ ಬೆಳಿಗ್ಗೆ ಹಲಗೂರಿನ ಗಣಪತಿ ದೇವಾಲಯ, ಪಟ್ಟಲದಮ್ಮ ದೇವಾಲಯ, ಕಾಳಿಕಾಂಬ ದೇವಾಲಯ, ಕೊನ್ನಾಪುರ ಶಂಭುಲಿಂಗೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆದವು.ಹಲಗೂರು ಸಮೀಪದ ಅಂತರವಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ಯಿಂದ ಸಂಜೆಯವರೆಗೂ ವಿಶೇಷ ಪೂಜಾ ಕಾರ್ಯಕ್ರಮ ನಡೆದವು. ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತಾಧಿಗಳು ಮತ್ತು ಪ್ರವಾಸಿಗರು ಭಾಗವಹಿಸಿ ದೇವರ ದರ್ಶನ ಪಡೆದರು.