ಸಾರಾಂಶ
ದೇಶದ ಹಲವು ರಾಜ್ಯಗಳಿಂದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕುಶಲಕರ್ಮಿಗಳು ಸೇರಿದಂತೆ ಸುಮಾರು 50 ರಿಂದ 60 ಕುಶಲಕರ್ಮಿಗಳು,
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ಹೊರ ವರ್ತುಲ ರಸ್ತೆಯಲ್ಲಿರುವ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಆ.2 ರಿಂದ 8 ರವರೆಗೆ ಗಾಂಧಿ ಶಿಲ್ಪ ಬಜಾರ್- ಕರಕುಶಲ, ಕೈಮಗ್ಗ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ ಎಂದು ಜೆಎಸ್ಎಸ್ ಮಹಾ ವಿದ್ಯಾಪೀಠ ಪ್ರಕಟಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ತಿಳಿಸಿದರು.ಈ ವಸ್ತುಪ್ರದರ್ಶನವನ್ನು ಆ.2ರ ಸಂಜೆ 4ಕ್ಕೆ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಉದ್ಘಾಟಿಸುವರು. ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್ ನಿರ್ದೇಶಕ ಬಿ.ಕೆ. ಶಿವಪ್ರಕಾಶ್, ಜವಳಿ ಮಂತ್ರಾಲಯದ ಪ್ರಾಂತೀಯ ನಿರ್ದೇಶಕ ಎಂ. ಪ್ರಭಾಕರನ್, ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ಕೆ.ಎಸ್. ಸುನಿಲ್ ಕುಮಾರ್, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಸಾಮಾನ್ಯ ಆಡಳಿತ ವಿಭಾಗದ ನಿರ್ದೇಶಕ ಶಂಕರಪ್ಪ ಅತಿಥಿಯಾಗುವರು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ದೇಶದ ಹಲವು ರಾಜ್ಯಗಳಿಂದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕುಶಲಕರ್ಮಿಗಳು ಸೇರಿದಂತೆ ಸುಮಾರು 50 ರಿಂದ 60 ಕುಶಲಕರ್ಮಿಗಳು, ಕೈಮಗ್ಗ ನೇಕಾರರು ತಮ್ಮ ಉತ್ಕೃಷ್ಟ ಕಲಾವಸ್ತುಗಳನ್ನು ಮೈಸೂರಿನಲ್ಲಿ ನಡೆಯುವ ಪ್ರದರ್ಶನದಲ್ಲಿ ಅನಾವರಣಗೊಳಿಸಲಿದ್ದಾರೆ ಎಂದರು.
ಮರದ ಕೆತ್ತನೆ, ಶಿಲಾ ಶಿಲ್ಪ, ಕಂಚಿನ ವಿಗ್ರಹಗಳು, ಮರದ ಕುಂದಣ ಕಲೆ, ಮಣ್ಣಿನ ಮಡಿಕೆಗಳು, ಪೇಪರ್, ರತ್ನಗಂಬಳಿ, ಹತ್ತಿ ಜಮಕಾನ, ಇಮಿಟೇಶನ್ ಆಭರಣಗಳು, ಮರದ ಅರಗಿನ ಕಲಾವಸ್ತುಗಳು, ಬಾಟಿಕ್, ಕಲಾಂಕಾರಿ ಚಿತ್ರಕಲೆ, ಚರ್ಮದ ಆಕರ್ಷಕ ವಸ್ತುಗಳು,ಕಲಾತ್ಮಕ ಚರ್ಮದ ಚಪ್ಪಲಿಗಳು, ಚನ್ನಪಟ್ಟಣದ ಗೊಂಬೆಗಳು, ಕಸೂತಿ ಕಲೆ, ಮಧ್ಯಪ್ರದೇಶ ರಾಜ್ಯದ ಮಹೇಶ್ವರಿ, ಚಂದೇರಿ ಸೀರೆಗಳು, ಒಡಿಶಾ ರಾಜ್ಯದ ಪಟ್ಟ ಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸ ವಸ್ತುಗಳು, ಬಿದಿರು- ಬೆತ್ತದ ವಸ್ತುಗಳು, ಚಿಕನ್ ಎಂಬ್ರಾಯ್ಡರಿ, ಕಲಾತ್ಮಕ ಕಲ್ಲಿನ ವಸ್ತುಗಳು, ಪಂಜಾಬ್ ರಾಜ್ಯದ ಫುಲ್ಕಾರಿ ಬಟ್ಟೆಗಳು ಈ ಮೇಳದಲ್ಲಿ ಒಂದೇ ಸೂರಿನಡಿ ಖರೀದಿಗೆ ಸಿಗಲಿದೆ ಎಂದು ಅವರು ವಿವರಿಸಿದರು.ಈ ಪ್ರದರ್ಶನ ಮತ್ತು ಮಾರಾಟ ನಿತ್ಯ ಬೆಳಗ್ಗೆ 10.30 ರಿಂದ ರಾತ್ರಿ 9 ರವರೆಗೆ ತೆರೆದಿರಲಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದರು.
ಜೆಎಸ್ಎಸ್ ಅರ್ಬನ್ ಹಾತ್ ಸಂಯೋಜಕ ಎಂ. ಶಿವನಂಜಸ್ವಾಮಿ, ಕೆ.ಎಸ್. ಸುನಿಲ್ ಕುಮಾರ್, ರಾಕೇಶ್ ರೈ ಇದ್ದರು.