2ನೇ ಹಂತದಲ್ಲಿ 101 ಕೆರೆ ತುಂಬಿಸುವ ಯೋಜನೆ: ವಿಜಯೇಂದ್ರ
KannadaprabhaNewsNetwork | Published : Oct 11 2023, 12:45 AM IST
2ನೇ ಹಂತದಲ್ಲಿ 101 ಕೆರೆ ತುಂಬಿಸುವ ಯೋಜನೆ: ವಿಜಯೇಂದ್ರ
ಸಾರಾಂಶ
180 ಕೆರೆಗಳ ಪೈಕಿ 114 ಕೆರೆಗಳು ಪೂರ್ತಿ
ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ ಈ ಬಾರಿ ವಾಡಿಕೆಗಿಂತ ತೀರಾ ಕಡಿಮೆ ಮಳೆಯಾಗಿ ಕೆರೆ-ಕಟ್ಟೆಗಳಲ್ಲಿ ನೀರಿಲ್ಲದಂತಾಗಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಪರಿಶ್ರಮದಿಂದ ತುಂಗಭದ್ರಾ ನದಿಯಿಂದ ಕೆರೆ ತುಂಬಿಸುವ ಮಹತ್ತರ ಯೋಜನೆ ಮಾಡಲಾಗಿತ್ತು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಪಟ್ಟಣಕ್ಕೆ ಸಮೀಪದ ತಾಳಗುಂದ ಹೋಬಳಿಯ ದೇವಿಕೊಪ್ಪದ ಇಂಗಿನಕೆರೆ ತುಂಬಿದ ಹಿನ್ನೆಲೆ ಮಂಗಳವಾರ ಬೆಳಗ್ಗೆ ಬಾಗಿಣ ಅರ್ಪಿಸಿದ ಶಾಸಕರು, ಈಗ ತಾಲೂಕಿನ ಮೊದಲ ಹಂತದಲ್ಲಿ ಉಡಗಣಿ, ತಾಳಗುಂದ ಹಾಗೂ ಹೊಸೂರು ಹೋಬಳಿಯ 180 ಕೆರೆಗಳ ಪೈಕಿ 114 ಕೆರೆಗಳು ಪೂರ್ತಿ ತುಂಬಿಸಲಾಗಿದೆ. 38 ಕೆರೆಗಳು ಅರ್ಧದಷ್ಟು ತುಂಬಿವೆ. ಮೊದಲ ಹಂತದಲ್ಲಿ ಇನ್ನು 28 ಕೆರೆಗಳು ತುಂಬುವುದು ಬಾಕಿ ಇದೆ. ಇನ್ನು ಎರಡನೇ ಹಂತದಲ್ಲಿ 101 ಕೆರೆಗಳ ತುಂಬಿಸುವ ಯೋಜನೆ ಕೈಗೊಂಡಿದ್ದು, ಅಕ್ಟೋಬರ್ ಕೊನೆಯಲ್ಲಿ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ತಿಳಿಸಿದರು. ಪ್ರಸ್ತುತ ವಿದ್ಯುತ್ ಅಭಾವದಿಂದಾಗಿ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಸಂಸದ ರಾಘವೇಂದ್ರ ಮತ್ತು ಶಾಸಕ ವಿಜಯೇಂದ್ರ ಅವರು ಇಂದಿನ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲು ಸೂಚಿಸಿದ್ದಾಗಿ ಹೇಳಿದರು. ನವಂಬರ್ ಅಂತ್ಯದೊಳಗೆ ತಾಲೂಕಿನ ಎಲ್ಲ ಕೆರೆಗಳಿಗೆ ಸಂಪೂರ್ಣ ನೀರು ತುಂಬಿಸುವ ಕಾಯರ್ವನ್ನು ಯಶಸ್ವಿಯಾಗಿ ಮಾಡಲಿದ್ದೇವೆ. ಆ ಮೂಲಕ ಶಿಕಾರಿಪುರ ತಾಲೂಕು ಎಂದಿನಂತೆ ಸಮೃದ್ಧಿಯ ಬೀಡಾಗಿಸುವ ಗುರಿ ಹೊಂದಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಗುರುಮೂರ್ತಿ, ಕೊಳಗಿ ರೇವಣಪ್ಪ, ಸಣ್ಣ ಹನುಮಂತಪ್ಪ, ಕೌಲಿ ಸುಬ್ರಮಣ್ಯ ಪರಮೇಶ್ವರಪ್ಪ, ಮುತ್ತುಗೌಡ, ಶಿವಯೋಗಿ ಗೌಡ ಗ್ರಾಪಂ ಸದಸ್ಯ ಜಗದೀಶ್, ಗಿರೀಶ್ ಗೌಡ, ಮಂಜಪ್ಪ ಹಲವಾರು ಪ್ರಮುಖರು ಹಾಜರಿದ್ದರು. - - - -10ಕೆ.ಎಸ್.ಎಚ್ಆರ್1: ಶಿರಾಳಕೊಪ್ಪ ಹತ್ತಿರದ ದೇವಿಕೊಪ್ಪ ಇಂಗಿನಕೆರೆಗೆ ಶಾಸಕ ವಿಜಯೇಂದ್ರ ಬಾಗಿಣ ಅರ್ಪಿಸಿದರು. ಗುರುಮೂರ್ತಿ, ರೇವಣಪ್ಪ, ಮುತ್ತುಗೌಡ ಮತ್ತಿತರ ಪ್ರಮುಖರು ಹಾಜರಿದ್ದರು.