ಸ್ವದೇಶಿ ಹಕ್ಕಿಗಳು ಎಲ್ಲ ಕೆರೆಯಲ್ಲಿ ಕಾಣಸುತ್ತವೆ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ರಾಮಸರ್ ಸೈಟ್‌ಗೆ ಜಾಗತಿಕ ಮಟ್ಟದಲ್ಲಿ ಸೇರ್ಪಡೆಗೊಂಡಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಪಕ್ಷಿಧಾಮ ಈಗ ಗಮನ ಸೆಳೆಯುತ್ತಿದೆ. ಇಲ್ಲಿಗೆ ಲಕ್ಷಗಟ್ಟಲೇ ಹಕ್ಕಿಗಳು ಬೇರೆ ಬೇರೆ ದೇಶಗಳಿಂದ ಚಳಿಗಾಲಕ್ಕೆ ಆಗಮಿಸುತ್ತಿವೆ. ಇವೇ ವಲಸೆ ಹಕ್ಕಿಗಳು ಅಗ್ರಹಾರದ ಪುಟ್ಟ ಕೆರೆಗೂ ಆಗಮಿಸುತ್ತಿವೆ.

ಸ್ವದೇಶಿ ಹಕ್ಕಿಗಳು ಎಲ್ಲ ಕೆರೆಯಲ್ಲಿ ಕಾಣಸುತ್ತವೆ. ಆದರೆ ಅಗ್ರಹಾರದ ಪಕ್ಕದಲ್ಲಿರುವ ಈ ಪುಟ್ಟ ಕೆರೆ ಜೌಗು ಪ್ರದೇಶವಾಗಿದೆ. ಇತ್ತೀಚೆಗೆ ಇಲ್ಲಿಯೂ ಭಾರೀ ನೀರು ತುಂಬುತ್ತಿದೆ. ಅಂಕಸಮುದ್ರಕ್ಕೆ ಬರುವ ವಲಸೆ ಹಕ್ಕಿಗಳು ಇಲ್ಲಿಗೂ ಬರುತ್ತಿವೆ. ಬೆಳಿಗ್ಗೆ ಮತ್ತು ಸಂಜೆ ಹಕ್ಕಿಗಳ ಕಲರವ ಇರುತ್ತದೆ. ಆದರೆ ಯಾವ ದೇಶದಿಂದ ಬರುತ್ತವೆ, ಯಾವ ಜಾತಿಯ ಹಕ್ಕಿಗಳು ಇವು ಎಂಬುವುದನ್ನು ಪಕ್ಷಿತಜ್ಞರು ದೃಢಪಡಿಸಬೇಕಿದೆ.

ಅಗ್ರಹಾರದ ಹಳ್ಳಿಯ ಜನತೆ ತಮ್ಮೂರ ಕೆರೆಯ ಸುತ್ತಮುತ್ತ ಪಕ್ಷಿಗಳ ತಂಡಗಳನ್ನು ನೋಡಿ ವಾವ್‌! ಎನ್ನುತ್ತಿದ್ದಾರೆ. ಪುಟ್ಟ ಕೆರೆಯಾಗಿದ್ದರೂ ಕೆರೆಯಲ್ಲಿ ಜಾಲಿಮುಳ್ಳುಗಳ ಗಿಡಗಳು ಒಣಗಿರುವುದರಿಂದ ಅದರ ಮೇಲೆಯೇ ಕುಳಿತು ರಾತ್ರಿ ಕಾಲ ಕಳೆಯುತ್ತಿವೆ. ಬೆಳಿಗ್ಗೆ 7 ಗಂಟೆಯೊಳಗೆ ಆಹಾರಕ್ಕಾಗಿ ದೂರದ ಹಿನ್ನೀರು ಪ್ರದೇಶಗಳಿಗೆ ಹೋಗುತ್ತಿವೆ.

ವಲಸೆ ಪಕ್ಷಿಗಳಿಗೆ ಆಸರೆಯಾಗುವ ಕೆರೆ ನೀರು ತುಂಬಿಸುವ ಯೋಜನೆ: ದೂರದ ದೇಶಗಳಿಂದ ಮತ್ತು ನಮ್ಮ ದೇಶದ ಹಕ್ಕಿಗಳಿಗೆ ಅಗ್ರಹಾರ ಕೆರೆ ತಾಣವಾಗುತ್ತಿರುವ ಬೆನ್ನಲ್ಲೇ ಈ ಕೆರೆಯ ಪಕ್ಕದಲ್ಲಿಯೇ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕೇಂದ್ರಸ್ಥಾನವಾದ ಪಾಲಯ್ಯನಕೋಟೆ ಕೆರೆಯಲ್ಲಿ ಸದಾ ನೀರು ಇರುತ್ತದೆ. ಇಲ್ಲಿಂದಲೇ ಬಹುತೇಕ ಕೂಡ್ಲಿಗಿ ಕ್ಷೇತ್ರದ ಕೆರೆಗಳಿಗೆ ನೀರು ಸರಬರಾಜು ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾದರೂ ಪಾಲಯ್ಯನಕೋಟೆ ಕೆರೆಯಲ್ಲಿ ಸದಾ ನೀರು ಇರುತ್ತದೆ. ಈ ವಲಸೆ ಹಕ್ಕಿಗಳಿಗೆ ಆಹಾರ ನೀರು ಸಮಸ್ಯೆ ಬರುವುದಿಲ್ಲ ಎಂಬುದು ಪಕ್ಷಿತಜ್ಞರ ಮಾತು. ಮುಂದಿನ ದಿನಗಳಲ್ಲಿ ಅಗ್ರಹಾರ ಕೆರೆ ಪಕ್ಷಿಗಳ ತಾಣವಾಗಬಹುದೇ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ನೂರಾರು ಸಂಖ್ಯೆಯಲ್ಲಿದ್ದ ಪಕ್ಷಿಗಳು ಈಗ ಸಾವಿರಾರು ಆಗುತ್ತಿವೆ. ಇಲ್ಲಿ ಕೆರೆ, ಕೆರೆಯ ಪಕ್ಕ ಜಾಗು ಪ್ರದೇಶ ಅದರ ಪಕ್ಕದಲ್ಲಿ ಕಾಡು ಇರುವುದರಿಂದ ಪಕ್ಷಿಗಳಿಗೆ ವಾಸಸ್ಥಾನಕ್ಕೆ ಹೇಳಿ ಮಾಡಿಸಿದಂತಿದೆ.

ನಮ್ಮೂರ ಪುಟ್ಟಕೆರೆಯಲ್ಲಿ ಮೊದಲು ಪಕ್ಷಿಗಳು ಅಷ್ಟಕ್ಕಷ್ಟೇ ಇರುತ್ತಿದ್ದವು. ಇತ್ತೀಚೆಗೆ ಸ್ವದೇಶಿ ಹಕ್ಕಿಗಳು ಅಲ್ಲದೇ ವಿದೇಶಿ ಹಕ್ಕಿಗಳೂ ಬರುತ್ತಿವೆ. ಅಂಕಸಮುದ್ರ ಪಕ್ಷಿಧಾಮಕ್ಕೆ ಜಾಗತಿಕ ಮನ್ನಣೆ ದೊರಕಿದೆ. ಆದರೆ ನಮ್ಮೂರ ಕೆರೆಗೆ ಬರುವ ಹಕ್ಕಿಗಳ ಪ್ರಮಾಣ ಬಹಳ ಕಡಿಮೆ ಇದ್ದರೂ ಇಲ್ಲಿಯೂ ಬೆಳಿಗ್ಗೆ, ಸಂಜೆ ಹಕ್ಕಿಗಳ ಕಲರವ ಕೇಳಬಹುದು, ನೋಡಬಹುದು ಎನ್ನುತ್ತಾರೆ ಅಗ್ರಹಾರ ಗ್ರಾಮದ ಪಕ್ಷಿಪ್ರೇಮಿ, ಛಾಯಾಗ್ರಾಹಕ ಉಜ್ಜಿನಿ ರವಿ.

ಅಂಕಸಮುದ್ರ ಪಕ್ಷಿಧಾಮಕ್ಕೆ ವಿದೇಶಗಳಿಂದ ಹಕ್ಕಿಗಳು ಪ್ರತಿವರ್ಷ ಚಳಿಗಾಲಕ್ಕೆ ವಲಸೆ ಬರುತ್ತಿವೆ. ವಿಜಯನಗರ ಜಿಲ್ಲೆಯ ಅಕ್ಕಪಕ್ಕದ ತಾಲೂಕುಗಳಿಗೂ ವಲಸೆ ಹಕ್ಕಿಗಳು ಬರುತ್ತಿವೆ. ಅಗ್ರಹಾರ ಕೆರೆಗೂ ವಲಸೆ ಹಕ್ಕಿಗಳು ಬಂದಿರಬಹುದು. ಈ ಬಗ್ಗೆ ಖುದ್ದಾಗಿ ಭೇಟಿ ನೀಡುವೆ. ಸ್ಥಳೀಯರು ವಲಸೆ ಹಕ್ಕಿಗಳನ್ನು ಬೇಟೆಯಾಡುವುದು, ಬಲೆ ಹಾಕುವುದನ್ನು ತಪ್ಪಿಸುವಲ್ಲಿ ಗ್ರಾಮದ ಪ್ರಜ್ಞಾವಂತರ ಪಾತ್ರ ಮಹತ್ವದ್ದು ಎನ್ನುತ್ತಾರೆ ಪಕ್ಷಿತಜ್ಞ ಹರಪಹನಳ್ಳಿಯ ಚಂದ್ರಪ್ಪ.