ಸಾರಾಂಶ
ಹುಬ್ಬಳ್ಳಿ:
ಪೌರ ಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ಪತ್ರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮೇಯರ್ ಹಾಗೂ ಸಭಾ ನಾಯಕರು ಮಂಗಳವಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ 27 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿಯ ಆಹೋರಾತ್ರಿ ಧರಣಿಯನ್ನು ಪೌರ ಕಾರ್ಮಿಕರು ವಾಪಸ್ ಪಡೆದರು. ಪಾಲಿಕೆಯ ಈ ನಿರ್ಧಾರ ಹೋರಾಟಕ್ಕೆ ಸಂದ ಜಯ ಎಂದ ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು.ಧರಣಿನಿರತ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ರಾಮಪ್ಪ ಬಡಿಗೇರ ಹಾಗೂ ಸಭಾನಾಯಕ ವೀರಣ್ಣ ಸವಡಿ, 127 ಪೌರ ಕಾರ್ಮಿಕರ ಪೈಕಿ ಆರಂಭಿಕವಾಗಿ ಐವರಿಗೆ ನೇರ ನೇಮಕಾತಿ ಆದೇಶ ಪತ್ರ ನೀಡಿದರು. 252 ಪೌರಕಾರ್ಮಿಕರ ನೇರ ನೇಮಕಾತಿಗೆ ಎರಡ್ಮೂರು ದಿನಗಳಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸುವುದಾಗಿ ಭರವಸೆ ನೀಡಿದರು. 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸುವ ಕುರಿತು 1 ತಿಂಗಳೊಳಗೆ ಸರ್ಕಾರದಿಂದ ಅನುಮೋದನೆ ಪಡೆದು ಅನುಷ್ಠಾನಕ್ಕೆ ತರಲಾಗುವುದು ಎಂದು ಮೇಯರ್ ಭರವಸೆ ನೀಡಿದರು.
ಕೊಠಡಿಗೆ ಒಪ್ಪಿಗೆ:ಧಾರವಾಡ ಜಿಲ್ಲಾ ಪಜಾ, ಪಪಂ ಪೌರಕಾರ್ಮಿಕರ ಮತ್ತು ನೌಕರರ ಸಂಘಕ್ಕೆ ಪಾಲಿಕೆ ಆವರಣದಲ್ಲಿ ಕೊಠಡಿ ನೀಡಲು ಪಾಲಿಕೆ ಒಪ್ಪಿಗೆ ಸೂಚಿಸಿದೆ. ಪೌರಕಾರ್ಮಿಕರಿಗೆ 5 ತಿಂಗಳ ಸಂಕಷ್ಟ ಭತ್ಯೆಯಾಗಿ ₹ 10 ಸಾವಿರ ಪಾವತಿಸಿದೆ. 868 ಮಹಿಳಾ ಪೌರಕಾರ್ಮಿಕರಿಗೆ ₹ 2500ದಂತೆ ಒಟ್ಟು ₹21.70 ಲಕ್ಷ ಮೆಡಿಕಲ್ ಬೋನಸ್ ಶೀಘ್ರ ಪಾವತಿಸಲಾಗುವುದು. ಇನ್ನಿತರ ಬೇಡಿಕೆಗಳ ಬಗ್ಗೆ ಜಂಟಿ ಸಭೆ ನಡೆಸಿ ಲಿಖಿತ ನಡಾವಳಿ ಮೂಲಕ ನಿಗದಿತ ಸಮಯದಲ್ಲಿ ಈಡೇರಿಸುವುದಾಗಿ ಮೇಯರ್ ರಾಮಪ್ಪ ಬಡಿಗೇರ ತಿಳಿಸಿದರು.
ಉಪಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಸೇರಿದಂತೆ ಅನೇಕರು ಮೇಯರ್‌ಗೆ ಸಾಥ್ ನೀಡಿದರು.ವಿಜಯೋತ್ಸವದಲ್ಲಿ ಪೌರಕಾರ್ಮಿಕರ ಸಂಘದ ಧಾರವಾಡ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಬಸಪ್ಪ ಮಾದರ, ಆನಂದ ಬೆನಸಮಟ್ಟಿ, ಗುರುಶಾಂತಪ್ಪ ಚಂದಾಪುರ, ಮರಿಯಪ್ಪ ರಾಮಯ್ಯನವರ, ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ ಸೇರಿದಂತೆ ಹಲವರಿದ್ದರು.ಬೃಹತ್ ಮೆರವಣಿಗೆ
ಪೌರಕಾರ್ಮಿಕರು 27 ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿಗೆ ಸ್ಪಂದಿಸಿದ ಮೇಯರ್ ರಾಮಪ್ಪ ಬಡಿಗೇರ, ಕೆಲವು ಬೇಡಿಕೆ ಈಡೇರಿಸಿದ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಪಾಲಿಕೆ ಕಚೇರಿಯಿಂದ ಕರ್ಕಿ ಬಸವೇಶ್ವರ ನಗರದ ವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ನೂರಾರು ಪೌರಕಾರ್ಮಿಕರು ಪಟಾಕಿ ಸಿಡಿಸಿ, ಪರಸ್ಪರ ಬಣ್ಣಹಚ್ಚಿ, ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.