ಶಿರಸಿ: ಜಿಲ್ಲಾ ಪತ್ರಿಕಾ ಮಂಡಳಿಗೆ ಅನುದಾನದ ಭರವಸೆ

| Published : Jan 10 2024, 01:45 AM IST / Updated: Jan 10 2024, 12:41 PM IST

ಸಾರಾಂಶ

ಜಿಲ್ಲಾ ಪತ್ರಿಕಾ ಮಂಡಳಿ ಉತ್ತಮ ಕಾರ್ಯ ಮಾಡುತ್ತಿದೆ. ಎಲ್ಲಾ ತಾಲೂಕಿನಲ್ಲಿ ಮಂಡಳಿಯ ಅಭಿವೃದ್ಧಿಗೆ ಅಗತ್ಯವಿರುವ ಸಹಾಯ ಒದಗಿಸಲಾಗುವುದು.

ಶಿರಸಿ: ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಂಗಳವಾರ ಬಿಡುಗಡೆಗೊಳಿಸಿದರು.ನಗರದ ಜಿಲ್ಲಾ ಪತ್ರಿಕಾ ಭವನಕ್ಕೆ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಭೇಟಿ ನೀಡಿದ ವೈದ್ಯ, ಸುವರ್ಣ ಮಹೋತ್ಸವ ರೂಪುರೇಷೆ ಒಳಗೊಂಡ ಪತ್ರಿಕೆ ಬಿಡುಗಡೆ ಮಾಡಿದರು. ಬಳಿಕ ಪತ್ರಿಕಾ ಭವನದ ಕಟ್ಟಡ, ಮುಂದಾಗಬೇಕಾದ ಕಾಮಗಾರಿಯ ವೀಕ್ಷಣೆ ಮಾಡಿದರು. 

ಮಂಡಳಿಯ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿ, ೧೯೭೪ರಲ್ಲಿ ದಿ. ಜಿ.ಎಸ್. ಹೆಗಡೆ ಅಜ್ಜೀಬಳ ಅವರಿಂದ ಆರಂಭವಾದ ಜಿಲ್ಲಾ ಪತ್ರಿಕಾ ಮಂಡಳಿ ಈಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸಾವಿರಾರು ಪತ್ರಕರ್ತರಿಗೆ ಮಂಡಳಿ ಸಹಕಾರ ನೀಡಿದೆ. 

ಉತ್ತಮ ಕೆಲಸ ಮಾಡಿಕೊಂಡು ಬಂದಿರುವ ಸಂಸ್ಥೆಯ ಕಟ್ಟಡದ ಅಭಿವೃದ್ಧಿಗೆ ₹ ೭೫ ಲಕ್ಷ ಅನುದಾನ ಅಗತ್ಯವಿದ್ದು, ಅದನ್ನು ಒದಗಿಸಿಕೊಡಬೇಕು ಎಂದು ವಿನಂತಿಸಿದರು. 

ಈ ಕುರಿತು ಸಚಿವರಿಗೆ ಲಿಖಿತ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ವೈದ್ಯ, ಜಿಲ್ಲಾ ಪತ್ರಿಕಾ ಮಂಡಳಿ ಉತ್ತಮ ಕಾರ್ಯ ಮಾಡುತ್ತಿದೆ. ಎಲ್ಲಾ ತಾಲೂಕಿನಲ್ಲಿ ಮಂಡಳಿಯ ಅಭಿವೃದ್ಧಿಗೆ ಅಗತ್ಯವಿರುವ ಸಹಾಯಕ್ಕೆ ನಾವು ಬದ್ಧರಿದ್ದೇವೆ ಎಂದರು. 

ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ಅವರ ಸಹಕಾರ ಪಡೆದು ಸರ್ಕಾರ ಮಟ್ಟದಲ್ಲಿ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.‌ಈ ವೇಳೆ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾ ಪತ್ರಿಕಾ ಮಂಡಳಿ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ, ಖಜಾಂಚಿ ರಾಜೇಂದ್ರ ಹೆಗಡೆ, ಕಾರ್ಯದರ್ಶಿ ನರಸಿಂಹ ಸಾತೊಡ್ಡಿ, ಮಂಡಳಿಯ ಕಾಯಂ ಸದಸ್ಯ ಪ್ರದೀಪ ಶೆಟ್ಟಿ, ಶಿರಸಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ಟ ಬೆಳಖಂಡ ಇದ್ದರು.

ಶಿರಸಿ ಪತ್ರಕರ್ತರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಸಹ ಹೇಳಿದ್ದಾರೆ. ಇಲ್ಲಿನ ಭವನಕ್ಕೆ ಅಗತ್ಯವಿರುವ ಅನುದಾನ ನೀಡುವ ಪ್ರಯತ್ನ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.