ಸಾರಾಂಶ
ಜಿಲ್ಲಾಧಿಕಾರಿ ಸೂಚನೆ, ಮೇಲ್ವಿಚಾರಣೆ, ಉಸ್ತುವಾರಿ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ ಕೊಪ್ಪಳಜಿಲ್ಲೆಯ ರೈತ ಉತ್ಪಾದಕರ ಸಂಸ್ಥೆಗಳಿಗೆ ಡಿಜಿಟಲ್ ಮಾರುಕಟ್ಟೆ ಮೂಲಕ ವ್ಯವಹರಿಸುವಂತೆ ಉತ್ತೇಜಿಸಬೇಕು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ ರಚಿತವಾದ ರೈತ ಉತ್ಪಾದಕ ಸಂಸ್ಥೆಗಳಿಗೆ 3 ತಿಂಗಳ ಸ್ಯಾಚುರೇಷನ್ ಡ್ರೈವ್ ಕುರಿತು ಕೃಷಿ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರನ್ನು ಗುರುತಿಸಿ ಸಂಘಟನೆ ಮೂಲಕ ಅಗತ್ಯ ಮಾರುಕಟ್ಟೆ ಸೌಲಭ್ಯ, ಕೃಷಿ ಪರಿಕರಗಳ ಸ್ಥಳೀಯ ಲಭ್ಯತೆ, ಕೃಷಿ ಉತ್ಪನ್ನ ಸಂಸ್ಕರಣೆ, ಬೆಳೆಗಳ ಮೌಲ್ಯವರ್ಧನೆ, ಉಪ ಉತ್ಪನ್ನಗಳ ತಯಾರಿಕೆ ಮೂಲಕ ಮತ್ತಷ್ಟು ಲಾಭ ತಂದುಕೊಡುವುದು. ಕೃಷಿಕರನ್ನು ಸ್ವಾವಲಂಬಿ ಹಾಗೂ ಆರ್ಥಿಕವಾಗಿ ಸದೃಢವಾಗಿಸುವ, ಉತ್ಪಾದನೆಯನ್ನು ವೃದ್ಧಿಗೊಳಿಸಿ ರೈತರ ಆದಾಯ ಹೆಚ್ಚಿಸುವ ಮುಖ್ಯ ಉದ್ದೇಶದಿಂದ ವಿವಿಧ ಯೋಜನೆಗಳಡಿ ರೈತ ಉತ್ಪಾದಕರ ಸಂಸ್ಥೆ ರಚಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ರಚಿಸಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ಮಿಷನ್ ಮಾದರಿಯಲ್ಲಿ (3 ತಿಂಗಳ ಸ್ಯಾಚುರೇಶನ್ ಡ್ರೈವ್) ಶಿಬಿರ ಕೈಗೊಂಡು ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಕೃಷಿ ಮಾರುಕಟ್ಟೆ, ಎಪಿಎಂಸಿ ಮಂಡಿ ಮತ್ತು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಘ (ಎಫ್.ಎಸ್.ಎಸ್.ಎ.ಐ.) ಪರವಾನಗಿ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ರಾಜ್ಯ ಸರ್ಕಾರವು ಒಟ್ಟು 5 ವರ್ಷಗಳ ಅವಧಿಯಲ್ಲಿ ಪ್ರತಿ ಹೋಬಳಿ ಮಟ್ಟದಲ್ಲಿ ಕನಿಷ್ಠ ಒಂದು ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸುವ ಮೂಲಕ ಸುಮಾರು 5 ಲಕ್ಷ ರೈತರನ್ನು ಸಂಘಟಿಸುವ ದೂರದೃಷ್ಟಿ ಹೊಂದಿದೆ. ಪ್ರತಿ ರೈತ ಸದಸ್ಯರಿಂದ ತಲಾ ₹1000ದಂತೆ ಷೇರು ಬಂಡವಾಳದ ಮೂಲಕ ಸಂಸ್ಥೆಯ ರಚನೆ, ಕಂಪನಿ ಕಾಯ್ದೆ 2013 ಅಡಿ ನೋಂದಣಿ, ಗ್ರಾಮ ಮಟ್ಟದಲ್ಲಿ 15ರಿಂದ 20 ಸದಸ್ಯರನ್ನೊಳಗೊಂಡಂತೆ ರೈತರ ಆಸಕ್ತ ಗುಂಪು ರಚಿಸಿ (ಎಫ್‌ಐಜಿ), 20 ರೈತ ಆಸಕ್ತ ಗುಂಪುಗಳನ್ನು ಒಗ್ಗೂಡಿಸಿ 300ರಿಂದ 500 ರೈತ ಸದಸ್ಯರನ್ನೊಳಗೊಂಡು ಒಂದು ಎಫ್‌ಪಿಒ ರಚಿಸಿ, 12ರಿಂದ 15 ಮಂದಿ ಸದಸ್ಯರನ್ನು ಸಂಸ್ಥೆ ನಿರ್ದೇಶಕರನ್ನಾಗಿ ಚುನಾಯಿಸಿ ಆಡಳಿತ ಮಂಡಳಿ ರಚಿಸಲಾಗುವುದು. ಜಲಾನಯನ ಅಭಿವೃದ್ಧಿ ಇಲಾಖೆ, ನಬಾರ್ಡ್, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆ, ಮೀನುಗಾರಿಕೆ ಇಲಾಖೆ, ಜೆ.ಎಸ್.ಡಬ್ಲ್ಯೂ. ಫೌಂಡೇಶನ್ ಹಾಗೂ ಇತರ ಸೇರಿ ಜಿಲ್ಲೆಯಲ್ಲಿ 44 ರೈತ ಉತ್ಪಾದಕರ ಸಂಸ್ಥೆಗಳು ರಚಿತವಾಗಿದ್ದು, ಇದರಲ್ಲಿ 31,658 ರೈತರು ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಮಾನೆ ಉಪಸ್ಥಿತರಿದ್ದರು.