ಸಾರಾಂಶ
- ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿದ ಗುರಿಕಾರ
ಕನ್ನಡಪ್ರಭ ವಾರ್ತೆ ಧಾರವಾಡರಾಜ್ಯ ಸರ್ಕಾರ ದೈಹಿಕ ಶಿಕ್ಷಕರಿಗೆ ಸಹ ಶಿಕ್ಷಕರೆಂದು ಪರಿಗಣಿಸಿ ಪದೋನ್ನತಿ ನೀಡಬೇಕು ಎಂದು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಒತ್ತಾಯಿಸಿದರು.
ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಶಹರ ಘಟಕ ಇಲ್ಲಿಯ ಸರ್ಕಾರಿ ನೌಕರರ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದರೂ ದೈಹಿಕ ಶಿಕ್ಷಕರಿಗೆ ಪದೋನ್ನತಿ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿಗಳನ್ನು ಬದಲಾವಣೆ ಮಾಡಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಹ ಶಿಕ್ಷಕರೆಂದು ಪರಿಣಿಸಿ ಪದೋನ್ನತಿ ಅವಕಾಶ ಮಾಡಿಕೊಡಬೇಕು. ಈ ಕಾರ್ಯಕ್ಕಾಗಿ ದೈಹಿಕ ಶಿಕ್ಷಕರು ರಾಜ್ಯ ಮಟ್ಟದಲ್ಲಿ ಸಂಘಟನೆ ಮಾಡಿಕೊಂಡು ಹೋರಾಟ ಮಾಡುವ ಮೂಲಕ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದರು.ಅನುದಾನ ರಹಿತ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದೈಹಿಕ ಶಿಕ್ಷಕರಿಗೆ ಸೇವಾ ಭದ್ರತೆ ಹಾಗೂ ಮೂಲವೇತನ ನಿಗದಿಪಡಿಸಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಿದ್ದಾಗ ಹಂತ ಹಂತವಾಗಿ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿತ್ತು. ಇನ್ನೂ ಹಲವು ಸಮಸ್ಯೆಗಳಿದ್ದು ಸರ್ಕಾರದ ಹಂತದಲ್ಲಿ ಚರ್ಚೆ ಮಾಡಿ ಪರಿಹಾರ ಒದಗಿಸಿಕೊಡಲಾಗುವುದು ಎಂಬ ಭರವಸೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಮಾತನಾಡಿ, ಯಾವ ಶಾಲೆಯ ದೈಹಿಕ ಶಿಕ್ಷಕರು ಕ್ರಿಯಾಶೀಲರಿರುತ್ತಾರೋ ಆ ಶಾಲೆಯ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುತ್ತದೆ. ಆದ್ದರಿಂದ ದೈಹಿಕ ಶಿಕ್ಷಕರು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವ ಕಾರ್ಯ ಶಿಕ್ಷಣ ಇಲಾಖೆದ್ದಾಗಲಿ ಎಂದರು.ಡಿಡಿಪಿಐ ಎಸ್.ಎಸ್. ಕೆಳದಿಮಠ, ಯಾವುದೇ ಮಗು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ದೈಹಿಕ ಶಿಕ್ಷಕರ ಪಾತ್ರ ಸಾಕಷ್ಟಿದೆ. ಈ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಕರು ಮಕ್ಕಳ ಕ್ರೀಡಾ ಪ್ರತಿಭೆ ಹೊರತರಲು ವಿಶೇಷ ಪ್ರಯತ್ನ ಮಾಡಬೇಕು ಎಂದರು. ಶಿಕ್ಷಣ ಇಲಾಖೆ ಉಪ ಸಮನ್ವಯ ಅಧಿಕಾರಿ ಎಸ್.ಎಂ. ಹುಡೇದಮನಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಶಹರ ಅಧ್ಯಕ್ಷ ಬಸವರಾಜ ಪಟ್ಟಣದವರ, ಮಕ್ಕಳ ಕ್ರೀಡಾ ಪ್ರತಿಭೆ ಹೊರ ತರುವ ನಿಟ್ಟಿನಲ್ಲಿ ದೈಹಿಕ ಶಿಕ್ಷಕರ ಶ್ರಮ ಸಾಕಷ್ಟಿದೆ. ಸರ್ಕಾರ ನಮ್ಮ ಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ನಮಗೆ ಪ್ರೋತ್ಸಾಹ ದೊರೆತರೆ ಮಕ್ಕಳನ್ನು ರಾಜ್ಯ, ರಾಷ್ಟ್ರ ಮಟ್ಟಕ್ಕೆ ಕರೆದೊಯ್ಯಲು ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಾದ ಎಸ್.ಎಂ. ಹುಡೇದಮನಿ ಹಾಗೂ ಎಸ್.ಬಿ. ಬಸಾಪೂರ ಅವರು ದೈಹಿಕ ಶಿಕ್ಷಕರಿಗೆ ಸಹಕಾರ ನೀಡಿ ಜಿಲ್ಲಾ, ರಾಜ್ಯ ಮಟ್ಟದ ಕ್ರೀಡಾಕೂಟಗಳನ್ನು ಸಂಘಟಿಸಿದ್ದು ಹೆಮ್ಮೆ ತಂದಿದೆ ಎಂದರು.ಶಿಕ್ಷಣ ಇಲಾಖೆ ಅಧಿಕಾರಿ ಮಂಜುನಾಥ ಅಡಿವೇರ, ರಾಜ್ಯ ಉಪಾಧ್ಯಕ್ಷ ಪ್ರಮೋದ ರೋಣದ, ಜಿಲ್ಲಾಧ್ಯಕ್ಷ ಆರ್.ಎಚ್. ನೇಗಲಿ, ಪಿ.ಎಸ್. ಅಂಕಲಿ, ಸಂಪನ್ಮೂಲ ವ್ಯಕ್ತಿಯಾಗಿ ಆರ್.ಕೆ. ಪಡತಾರೆ, ಪರಶುರಾಮ ಸಾಳುಂಕೆ, ಶಾಂತಪ್ಪ ತಲಬಟ್ಟಿ ಇದ್ದರು. ಇದೇ ಸಂದರ್ಭದಲ್ಲಿ ಎಸ್.ಬಿ. ಕೇಸರಿ, ಅಶೋಕ ಮುತ್ತಗಿ, ಬಿ.ಕೆ. ಗದ್ದಿಕೇರಿ, ಎಂ.ಬಿ. ಬಿರಾದಾರ ಅವರನ್ನು ಗೌರವಿಸಲಾಯಿತು. ಬಸವರಾಜ ನವಲಗುಂದ ನಿರೂಪಿಸಿದರು. ಬಿ.ಎಲ್. ಮಲ್ಲಿಗವಾಡ ವಂದಿಸಿದರು. ಪಿ.ಐ. ಮರ್ಜಿಡೆ ಸ್ವಾಗತಿಸಿದರು. ಶಿವು ಬೋಂಗಾಳೆ, ಪಿ.ಎಸ್. ಸಜ್ಜನರ, ಜಾಯೀದಾ ನದಾಫ್ ಮತ್ತಿತರರು ಇದ್ದರು.