ಸಾರಾಂಶ
ಫವತಿ ಖಾತೆ ಆಂದೋಲನದ ಅರ್ಜಿಗಳು ಮತ್ತು ನಡೆಯಬೇಕಿರುವ ಆಂದೋಲನದ ಪ್ರಚಾರದ ಕುರಿತು ಸಮಾಲೋಚನೆ ನಡೆಸಿ, ಮುಂದೆ ನಡೆಯಲಿರುವಂತಹ ಫವತಿ ಖಾತೆ ಆಂದೋಲನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಸೂಕ್ತ ಪ್ರಚಾರ ಮಾಡಬೇಕು
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಇಲ್ಲಿಯ ತಾಲೂಕು ಕಚೇರಿಗೆ ಜಿಲ್ಲಾಧಿಕಾರಿ ಅಕ್ರಂಪಾಷ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಯಾವುದೇ ಮಾಹಿತಿ ನೀಡದೆ ನೇರವಾಗಿ ಬೂದಿಕೋಟೆ ನಾಡ ಕಚೇರಿಗೆ ಭೇಟಿ ನೀಡಿ ಸಿಬ್ಬಂದಿಗೆ ಶಾಕ್ ನೀಡಿದರು.ಸಿಬ್ಬಂದಿಯ ಹಾಜರಾತಿ ಪುಸ್ತಕ ಸೇರಿದಂತೆ ಇತರೆ ದಾಖಲೆಗಳನ್ನು ಪರಿಶೀಲನೆ ನಡೆಸಿ, ಸಮಯಕ್ಕೆ ಸರಿಯಾಗಿ ಎಲ್ಲ ಸಿಬ್ಬಂದಿ ಕಚೇರಿ ಮತ್ತು ನಿಗದಿ ಮಾಡಿರುವಂತಹ ಗ್ರಾಮಕ್ಕೆ ಹಾಜರಾಗಬೇಕು. ಸಾರ್ವಜನಿಕರು ನೀಡುವಂತಹ ಅರ್ಜಿಯನ್ನು ಶೀಘ್ರವಾಗಿ ನಿಗದಿ ಮಾಡಿದ ದಿನದ ಒಳಗಾಗಿ ವಿಲೇವಾರು ಮಾಡಿಕೊಡಬೇಕು. ಸಾರ್ವಜನಿಕರಿಂದ ಯಾವುದೇ ದೂರು ಬಂದರೆ ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಫವತಿ ಖಾತೆ ಪ್ರಚಾರ ಮಾಡಿ
ಈಗಾಗಲೇ ಹೋಬಳಿ ವ್ಯಾಪ್ತಿಯಲ್ಲಿ ನಡೆದಿರುವ ಫವತಿ ಖಾತೆ ಆಂದೋಲನದ ಅರ್ಜಿಗಳು ಮತ್ತು ನಡೆಯಬೇಕಿರುವ ಆಂದೋಲನದ ಪ್ರಚಾರದ ಕುರಿತು ಸಮಾಲೋಚನೆ ನಡೆಸಿ, ಮುಂದೆ ನಡೆಯಲಿರುವಂತಹ ಫವತಿ ಖಾತೆ ಆಂದೋಲನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಲು ಸೂಕ್ತ ಪ್ರಚಾರ ಮಾಡಬೇಕು ಎಂದರು.ಮೃತಪಟ್ಟವರ ಖಾತೆಗಳು ಬೇರೆಯವರಿಗೆ ವರ್ಗಾವಣೆ ಆದರೆ ಮಾತ್ರ ಬಾಕಿ ಇರುವಂತಹ ಖಾತೆಗೆ ಆಧಾರ್ ಜೋಡನೆ ಮಾಡಲು ಸಾಧ್ಯ ಇದನ್ನು ಮನದಲ್ಲಿ ಇಟ್ಟುಕೊಂಡು ಪ್ರಚಾರ ಮಾಡಿ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದರು. ನಾಡ ಕಚೇರಿಗೆ ಭೇಟಿ ನಂತರ ಜಿಲ್ಲಾಧಿಕಾರಿ ಅವರು ಮಾರ್ಕಂಡೇಯ ಡ್ಯಾಂ ವೀಕ್ಷಣೆ ಮಾಡಿದರು. ಈ ವೇಳೆ ರಾಜಸ್ವ ನಿರೀಕ್ಷಕ ಪವನ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿ ವಿನೋದ್ ಮುಂತಾದವರು ಹಾಜರಿದ್ದರು.