ಸಿರಿಧಾನ್ಯ ಆಹಾರ ಉತ್ಪನ್ನಗಳ ರಫ್ತಿಗೆ ಉತ್ತೇಜನ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

| Published : Jan 03 2024, 01:45 AM IST

ಸಿರಿಧಾನ್ಯ ಆಹಾರ ಉತ್ಪನ್ನಗಳ ರಫ್ತಿಗೆ ಉತ್ತೇಜನ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯುವ ಆಸಕ್ತಿ ಇದೆ. ಅದೇ ರೀತಿ ಅದನ್ನು ಕೊಂಡುಕೊಳ್ಳುವ ಶಕ್ತಿ ಜನರಲ್ಲೂ ಇದೆ. ಅದಕ್ಕಾಗಿ ಸಿರಿಧಾನ್ಯ ಬೆಳೆಗಳು ಹಾಗೂ ಉತ್ಪನ್ನಗಳಿಗೆ ಪ್ರೋತ್ಸಾಹ, ಉತ್ತೇಜನ ನೀಡುವ ಅಗತ್ಯವಿದೆ. ರೈತರು ಬೆಳೆಯುವ ಬೆಳೆಗಳಿಗೆ ಉತ್ತಮ ಬೆಲೆಯೂ ಸಿಗಲಿದೆ. ಅವರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದಕ್ಕೆ ನೆರವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಿರಿಧಾನ್ಯಗಳು ಹಾಗೂ ಸಿರಿಧಾನ್ಯಗಳ ಆಹಾರ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಿರಿಧಾನ್ಯ ಹಬ್ಬ, ಆಹಾರ ಮೇಳ, ಸಿರಿಧಾನ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯುವ ಆಸಕ್ತಿ ಇದೆ. ಅದೇ ರೀತಿ ಅದನ್ನು ಕೊಂಡುಕೊಳ್ಳುವ ಶಕ್ತಿ ಜನರಲ್ಲೂ ಇದೆ. ಅದಕ್ಕಾಗಿ ಸಿರಿಧಾನ್ಯ ಬೆಳೆಗಳು ಹಾಗೂ ಉತ್ಪನ್ನಗಳಿಗೆ ಪ್ರೋತ್ಸಾಹ, ಉತ್ತೇಜನ ನೀಡುವ ಅಗತ್ಯವಿದೆ ಎಂದರು.

ಕೃಷಿ ಇಲಾಖೆಯಿಂದ ಸಿರಿಧಾನ್ಯಗಳಿಗೆ ಸೂಕ್ತ ಮಾರುಕಟ್ಟೆ ಮತ್ತು ಆಹಾರೋತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯಸರ್ಕಾರ ಸಾವಯವ ಪದ್ಧತಿಯಲ್ಲಿ ಸಿರಿಧಾನ್ಯ ಬೆಳೆಯುವವರಿಗೆ ಒಂದು ಎಕರೆಗೆ ೧೦ ಸಾವಿರ ರು. ಪ್ರೋತ್ಸಾಹಧನ ನೀಡಲಾಗುತ್ತದೆ ಎಂದರು.

ಸಿರಿಧಾನ್ಯಗಳು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಹಾಗಾಗಿ ಶ್ರೀಮಂತರು ಸೇರಿದಂತೆ ಮಧ್ಯಮವರ್ಗದ ಜನರು ಸಿರಿಧಾನ್ಯಗಳಿಂದ ತಯಾರಾದ ಆಹಾರವನ್ನು ಅವಲಂಬಿಸುವುದು ಹೆಚ್ಚಾಗಿದೆ. ಇದರಿಂದ ಸಿರಿಧಾನ್ಯಗಳಿಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ರೈತರು ಸಿರಿಧಾನ್ಯಗಳನ್ನು ಹೆಚ್ಚು ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಬೇಕಿದೆ. ಇದರಿಂದ ರೈತರು ಬೆಳೆಯುವ ಬೆಳೆಗಳಿಗೆ ಉತ್ತಮ ಬೆಲೆಯೂ ಸಿಗಲಿದೆ. ಅವರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದಕ್ಕೆ ನೆರವಾಗಲಿದೆ ಎಂದರು.

ಸಿರಿಧಾನ್ಯ ಮೇಳದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಶಾಸಕರು ಸಿರಿಧಾನ್ಯಗಳಿಂದ ತಯಾರಿಸಲಾದ ಆಹಾರ ಪದಾರ್ಥಗಳ ರುಚಿಯನ್ನು ಸವಿದರು. ಇದೇ ಸಮಯದಲ್ಲಿ ವಾಸುಕಿ ವೈಭವ್ ವಿರಚಿತ ಸಿರಿಧಾನ್ಯ ಕುರಿತ ಹಾಡನ್ನು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ರವಿಕುಮಾರ್, ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ಮರಿತಿಬ್ಬೇಗೌಡ, ಎಚ್.ಟಿ.ಮಂಜು, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್, ಕೃಷಿ ಜಂಟಿ ನಿರ್ದೇಶಕ ಅಶೋಕ್ ಇತರರಿದ್ದರು.ಸಿರಿಧಾನ್ಯ ಆರೋಗ್ಯಕ್ಕೆ ಅಮೂಲ್ಯ ಆಹಾರ: ಡಾ:ಬಿ.ಎಸ್ .ಸೀತಾಲಕ್ಷ್ಮಿ

ಸಿರಿಧಾನ್ಯ ಆರೋಗ್ಯಕ್ಕೆ ಅತ್ಯಮೂಲ್ಯ ಹಾಗೂ ಅವಶ್ಯಕವಾದ ಆಹಾರವಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಸೀತಾಲಕ್ಷ್ಮಿ ತಿಳಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಿರಿಧಾನ್ಯ ಕುರಿತು ಉಪನ್ಯಾಸ ನೀಡಿ, ರಾಜ್ಯದಲ್ಲಿ 9 ರೀತಿ ಸಿರಿಧಾನ್ಯ ಹಾಗೂ ಪ್ರಪಾಂಚದಲ್ಲಿ 6 ಸಾವಿರದ ವಿವಿಧ ರೀತಿಯ ಸಿರಿಧಾನ್ಯಗಳಿವೆ. ಸಿರಿಧಾನ್ಯ ಬೆಳೆಯಲು ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಸೇವಿಸಿದರೆ ರೋಗ ನಿರೋಧಕ ಶಕ್ತಿ, ಉಷ್ಣತೆ ಹೆಚ್ಚಿಸುತ್ತದೆ‌. ಮಧುಮೇಹ ಇರುವವರಿಗೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ಎಂದರು.

ಎರಡು ಅಥವಾ ಮೂರು ರೀತಿಯ ಸಿರಿಧಾನ್ಯ ಒಟ್ಟಿಗೆ ಮಿಶ್ರಣವನ್ನು ಸೇವಿಸುವುದು ಉತ್ತಮ. ಇಂದು ಔಷಧಿಯನ್ನು ಆಹಾರಕ್ಕೆ ಸಮವಾಗಿ ಸೇವಿಸುತ್ತಿರುವುದು ಆತಂಕದ ವಿಷಯ. ರೋಗ ಬರುವ ಮೊದಲೇ ಅದನ್ನು ತಡೆಗಟ್ಟಬೇಕು. ನಾವು ಸೇವಿಸುವ ಆಹಾರ ಪೌಷ್ಟಿಕಾಂಶದಿಂದ ಕೂಡಿರಬೇಕು. ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಆಹಾರ ಸೇವಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದರು.

ಅಪಘಾತ ಹಾಗೂ ಯಾವುದೇ ರೀತಿಯ ತುರ್ತು ಸ್ಥಿತಿಯಲ್ಲಿ ಮಾತ್ರ ಆಸ್ಪತ್ರೆಯ ಅವಶ್ಯಕತೆ ಬರಬೇಕು. ಆಗ ನಾವು ಆರೋಗ್ಯವಾಗಿದ್ದೇವೆ ಎಂದು ಭಾವಿಸಬಹುದು ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ಮಾತನಾಡಿ, ಕೃಷಿ ಉದ್ದಿಮೆಯಾಗಿ ಬೆಳೆಯಬೇಕು. ರೈತರು ಬೆಳೆದ ಬೆಳೆಗೆ ಗರಿಷ್ಠ ಮಾರಾಟದ ಬೆಲೆ ಸಿಗಲು‌ ರೈತರು ವೈಜ್ಞಾನಿಕ ಹಾಗೂ ತಂತ್ರಜ್ಞಾನ ಅಳವಡಿಸಿಕೊಂಡು ನೇರವಾಗಿ ತಾವು ಬೆಳೆದ‌ ಬೆಳೆ ಗ್ರಾಹಕರ ಕೈ ಸೇರುವಂತೆ ಮಾಡಬೇಕು ಎಂದರು.

ಈ ವೇಳೆ ಪ್ರೊ.ಕೃಷ್ಣೇಗೌಡರು‌ ಉತ್ತಮ ಆರೋಗ್ಯ ಕುರಿತು‌ ಹಿಂದೆ‌ ಇದ್ದ ಆಹಾರ, ವ್ಯಾಯಮ, ಕೃಷಿ ಪದ್ಧತಿ ಹಾಗೂ‌ ಇಂದಿನ ಆಧುನಿಕ ಜೀವನ ಶೈಲಿ‌ ಕುರಿತು ವಿಚಾರ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸೌಮ್ಯಶ್ರೀ, ಬೆಲ್ಲದ ವ್ಯಾಪಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಗೌಡ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.