ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಅಪಪ್ರಚಾರ: ರೆಡ್ಡಿ

| Published : Sep 01 2025, 01:04 AM IST

ಸಾರಾಂಶ

ಧರ್ಮಸ್ಥಳದಲ್ಲಿ ಧರ್ಮಯುದ್ಧದ ಮೂಲಕ ಹಿಂದೂ ಕಾರ್ಯಕರ್ತರು ಸೇರಿಸಿ ಮಂಜುನಾಥಸ್ವಾಮಿ ಜತೆ ಭಕ್ತರು ಇದ್ದೇವೆ ಎನ್ನುವುದನ್ನು ತೋರಿಸಿಕೊಡುತ್ತೇವೆ

ಗಂಗಾವತಿ: ದೇಶದಲ್ಲಿರುವ ಹಿಂದೂ ಧಾರ್ಮಿಕ ಕೇಂದ್ರಗಳು ಸೇರಿದಂತೆ ದೇವಾಲಯಗಳಿಗೆ ಅಪಪ್ರಚಾರ ನಿರಂತರವಾಗಿ ನಡೆಯುತ್ತಿದೆ ಎಂದು ಶಾಸಕ ಗಾಲಿ ಜಾನರ್ದನ ರೆಡ್ಡಿ ಹೇಳಿದರು.

ತಾಲೂಕಿನ ಆನೆಗೊಂದಿಯ ಚಿಂತಾಮಣಿ ಬಳಿ ತುಂಗಭದ್ರಾ ನದಿಯಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆಲ ವರ್ಷಗಳ ಹಿಂದೆ ತಿರುಪತಿ ಹಾಗೂ ಶಬರಿಮಲೈ ದೇವಾಲಯಗಳಲ್ಲಿ ಅಪಪ್ರಚಾರ ಮಾಡಿದ್ದರೂ ಭಗವಂತ ತನ್ನನ್ನು ತಾನೇ ರಕ್ಷಿಸಿಕೊಂಡಿದ್ದಾರೆ. ಇದೇ ರೀತಿ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದರು.

ಧರ್ಮಸ್ಥಳದಲ್ಲಿ ಧರ್ಮಯುದ್ಧದ ಮೂಲಕ ಹಿಂದೂ ಕಾರ್ಯಕರ್ತರು ಸೇರಿಸಿ ಮಂಜುನಾಥಸ್ವಾಮಿ ಜತೆ ಭಕ್ತರು ಇದ್ದೇವೆ ಎನ್ನುವುದನ್ನು ತೋರಿಸಿಕೊಡುತ್ತೇವೆ ಎಂದರು.

ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ವಿಚಾರ ಕುರಿತು ಮಾತನಾಡಿದ ಅವರು, ಹೂ ಮುಡಿದು, ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರೆ ಯಾರದೂ ಅಭ್ಯಂತರ ಇಲ್ಲ ಎಂದರು.

ಧರ್ಮಸ್ಥಳಕ್ಕೆ ತುಂಗಾ ಜಲ

ಧರ್ಮಸ್ಥಳ ಚಲೋ ಹಿನ್ನೆಲೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ತಾಲೂಕಿನ ಆನೆಗೊಂದಿಯ ಚಿಂತಾಮಣಿ ಬಳಿ ತುಂಗಭದ್ರಾ ನದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಧರ್ಮಸ್ಥಳದ ಸ್ವಾಮಿ ಮಂಜುನಾಥನಿಗೆ ಅಭಿಷೇಕ ನೆರವೇರಿಸಲು ಬಿಂದಿಗೆಯಲ್ಲಿ ನೀರನ್ನು ಸಂಗ್ರಹಿಸಿ ಕೊಂಡೊಯ್ದರು.

ಈ ವೇಳೆ ಮಾತನಾಡಿ, ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆದ ಘಟನೆಯಿಂದ ಭಕ್ತರಲ್ಲಿ ಅಶಾಂತಿ ಮೂಡಿದೆ. ಈ ಕಾರಣಕ್ಕೆ ತುಂಗಭದ್ರಾ ನದಿಯ ನೀರಿನಿಂದ ಮಂಜುನಾಥನಿಗೆ ಅಭಿಷೇಕ ನೆರವೇರಿಸಲಾಗುವುದು. ಮಂಜುನಾಥಸ್ವಾಮಿಯ ಆಶೀರ್ವಾದ ಎಲ್ಲರಿಗೂ ಸಿಗಲಿ ಎಂದು ಬೇಡಿಕೊಳ್ಳುತ್ತೇವೆ ಎಂದು ಹೇಳಿದರು. ಬಳಿಕ ಅಂಜನಾದ್ರಿ ಬೆಟ್ಟದ ಕೆಳಗೆ ಇರುವ ಆಂಜನೇಯಸ್ವಾಮಿ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಭಾಗವಹಿಸಿದ್ದರು.