ಶಾಲೆಗಳಲ್ಲಿ ವಿಜ್ಞಾನ ಉಪಕರಣಗಳ ಸಮರ್ಪಕ ಬಳಕೆಯಾಗಲಿ: ಬಿಇಒ ವಿ.ವಿ. ಸಾಲಿಮಠ

| Published : Aug 04 2025, 12:15 AM IST

ಶಾಲೆಗಳಲ್ಲಿ ವಿಜ್ಞಾನ ಉಪಕರಣಗಳ ಸಮರ್ಪಕ ಬಳಕೆಯಾಗಲಿ: ಬಿಇಒ ವಿ.ವಿ. ಸಾಲಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ರಚನಾತ್ಮಕ ಕೆಲಸ ಹಾಗೂ ಕಲಿಕೆಯ ಮೂಲಕ ವಿಜ್ಞಾನದ ಅರಿವು ಮೂಡಿಸುವಲ್ಲಿ ಶಿಕ್ಷಕರು ಹೆಚ್ಚು ಶ್ರಮವಹಿಸುವ ಅಗತ್ಯವಿದೆ. ಈಗ ಎಲ್ಲ ಶಾಲೆಗಳಲ್ಲಿ ಅತ್ಯುತ್ತಮ ವಿಜ್ಞಾನ ಉಪಕರಣಗಳು ಲಭ್ಯವಾಗುತ್ತಿವೆ.

ಹಾನಗಲ್ಲ: ವಿಜ್ಞಾನದ ತರ್ಕಬದ್ಧ ಜ್ಞಾನ ಶೈಕ್ಷಣಿಕ ಅಗತ್ಯದಲ್ಲೊಂದಾಗಿದ್ದು, ಪ್ರೇರಣಾದಾಯಕವಾಗಿ ಮಕ್ಕಳಿಗೆ ಅರಿವು ಮೂಡಿಸುವ ಬಹುದೊಡ್ಡ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಚನಾತ್ಮಕ ಕೆಲಸ ಹಾಗೂ ಕಲಿಕೆಯ ಮೂಲಕ ವಿಜ್ಞಾನದ ಅರಿವು ಮೂಡಿಸುವಲ್ಲಿ ಶಿಕ್ಷಕರು ಹೆಚ್ಚು ಶ್ರಮವಹಿಸುವ ಅಗತ್ಯವಿದೆ. ಈಗ ಎಲ್ಲ ಶಾಲೆಗಳಲ್ಲಿ ಅತ್ಯುತ್ತಮ ವಿಜ್ಞಾನ ಉಪಕರಣಗಳು ಲಭ್ಯವಾಗುತ್ತಿವೆ. ಅವುಗಳ ಸಮರ್ಪಕ ಬಳಕೆ, ಆ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಅವಿಷ್ಕಾರಗಳನ್ನು ಪರಿಚಯಿಸುವ, ಹೊಸ ಚಿಂತನೆಗೆ ಇಂಬು ನೀಡುವ ಕಾರ್ಯ ನಡೆಯಬೇಕಾಗಿದೆ ಎಂದರು.ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಸಂಚಾಲಕಿ ರೇಣುಕಾ ಗುಡಿಮನಿ ಮಾತನಾಡಿ, ಸಮಾಜದಲ್ಲಿ ವೈಜ್ಞಾನಿಕ ಸತ್ಯಗಳನ್ನು ಬಿಚ್ಚಿಡುವ ಕೆಲಸ ಆಗಬೇಕು. ಎಲ್ಲ ಸಂದರ್ಭಗಳಲ್ಲಿ ಮಕ್ಕಳ ಪ್ರತಿಭೆಯನ್ನು ಒರೆಗೆ ಹಚ್ಚಲು ಸಾಧ್ಯ. ಇಂತಹ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಗಳು ಮೊಳೆತರೆ ಮಾತ್ರ ನಾಳೆಗಳು ಹೊಸ ಅವಿಷ್ಕಾರಕ್ಕೆ ಚಾಲನೆಯಾಗಬಲ್ಲವು. ನಮ್ಮ ಸಮಿತಿಯ ಟೀಚರ್ ಪತ್ರಿಕೆ ಅತಿ ಹೆಚ್ಚು ಉಪಯುಕ್ತ ಮಾಹಿತಿ ಒದಗಿಸುತ್ತದೆ. ಎಲ್ಲ ಶಾಲೆಗಳಲ್ಲಿ ಟೀಚರ್ ಪತ್ರಿಕೆ ಇರುವಂತೆ, ವಿದ್ಯಾರ್ಥಿಗಳು ಅದನ್ನು ಓದಿ ಅರ್ಥೈಸಿಕೊಳ್ಳುವಂತೆ ಕ್ರಮ ಜರುಗಿಸಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜಿವಿಎಸ್ ತಾಲೂಕು ಗೌರವಾಧ್ಯಕ್ಷ ಪ್ರಭು ಗುರಪ್ಪನವರ, ಮಕ್ಕಳಲ್ಲಿ ವಿಜ್ಞಾನನದ ಜ್ಞಾನ ಬಿತ್ತಿದರೆ ಅವರ ಭವಿಷ್ಯಕ್ಕೆ ಅಜ್ಞಾನ ದೂರ ಮಾಡಿದಂತಾಗುತ್ತದೆ. ವೈಜ್ಞಾನಿಕ ಸತ್ಯಗಳನ್ನು ತಿಳಿಸುವ ಮೂಲಕ ಬದಲಾದ ಕಾಲದಲ್ಲಿ ಮಕ್ಕಳು ಭವಿಷ್ಯ ಕಟ್ಟಿಕೊಳ್ಳುವ ಸಂಗತಿಗಳಿಗೆ ಆದ್ಯತೆ ನೀಡೋಣ. ಎಲ್ಲ ಕಾಲಕ್ಕೂ ಸಲ್ಲುವ ವಿಜ್ಞಾನದ ಸಂಗತಿಗಳು ನಮ್ಮ ಬದುಕಿನ ನಿತ್ಯ ಅಧ್ಯಯನಗಳಾಗಬೇಕು ಎಂದರು.ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ, ಬಿಜಿವಿಎಸ್ ತಾಲೂಕು ಅಧ್ಯಕ್ಷ ಎಸ್.ವಿ. ಹೊಸಮನಿ, ಉಪಾಧ್ಯಕ್ಷ ಗಿರೀಶ ದೊಡ್ಡಮನಿ, ಪ್ರೊ. ಸಿ. ಮಂಜುನಾಥ, ಡಾ. ಎಂ. ಪ್ರಸನ್ನಕುಮಾರ, ಅಶೋಕ ದಾಸರ, ಎಚ್.ಎನ್. ಪಾಟೀಲ, ಕೃಷ್ಣಪ್ಪ ಆಲದಕಟ್ಟಿ, ಈರಣ್ಣ ಬೆಳವಡಿ, ಪೃಥ್ವಿರಾಜ ಬೆಟಗೇರಿ ಮೊದಲಾದವರು ವೇದಿಕೆಯಲ್ಲಿದ್ದರು.ಕುಮಾರ ಬಡಿಗೇರ ಪ್ರಾರ್ಥನೆ ಹಾಡಿದರು. ನಾಗರಾಜ ಸಿಂಗಾಪೂರ ಸ್ವಾಗತಿಸಿದರು. ಸಿದ್ದು ಗೌರಣ್ಣನವರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಚಿಕ್ಕಮಠ ವಂದಿಸಿದರು.