ಸಾರಾಂಶ
- ಜಿಲ್ಲಾಡಳಿತ ನೇತೃತ್ವದಲ್ಲಿ ಡಿ.ದೇವರಾಜ ಅರಸು ಜಯಂತಿಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಾಕೀತು - - -
ಕನ್ನಡಪ್ರಭ ವಾರ್ತೆ ದಾವಣಗೆರೆಸಾಮಾಜಿಕ ಅಸಮಾನತೆ ನಿವಾರಣೆಗಾಗಿ ಡಿ.ದೇವರಾಜ ಅರಸು ಅವರು ಅನುಷ್ಠಾನಗೊಳಿಸಿದ ಯೋಜನೆಗಳು ಸಮರ್ಪಕ ಅನುಷ್ಠಾನಗೊಂಡಾಗ ಮಾತ್ರ ಜನ್ಮ ದಿನಾಚರಣೆ ಸಾರ್ಥಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡಿ. ದೇವರಾಜ ಅರಸು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಯುವಜನತೆ ಗಾಂಧೀಜಿ ಮತ್ತು ಅರಸು ಅವರ ಜೀವನ ಚರಿತ್ರೆ ಅರಿತುಕೊಳ್ಳಬೇಕು. ಅರಸು ಆಡಳಿತ ಅವಧಿಯಲ್ಲಿ ಉಳುವವನೇ ಭೂಮಿ ಒಡೆಯ, ಜೀತ ಪದ್ಧತಿ ನಿರ್ಮೂಲನೆ ಸೇರಿದಂತೆ ಹಲವಾರು ಪ್ರಗತಿಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಲ ಹೊರುವ ಮತ್ತು ಜೀತಪದ್ಧತಿ ನಿರ್ಮೂಲನೆ ಮಾಡಿ ಹಲವಾರು ಕುಟುಂಬಗಳಿಗೆ ಮುಕ್ತಿ ಕಲ್ಪಿಸಿಕೊಟ್ಟರು. ಆದರೆ ದೇವರಾಜ ಅರಸು ಅವರು ಅನುಷ್ಠಾನಗೊಳಿಸಿದ ಕಾಯ್ದೆಗಳು ಇಂದು ಎಷ್ಟರಮಟ್ಟಿಗೆ ಅನಷ್ಠಾನಗೊಂಡಿವೆ ಎಂಬ ಪರಿಶೀಲನೆ ಅಗತ್ಯವಿದೆ ಎಂದರು.
ಪಾಲಿಕೆ ಆಯುಕ್ತೆ ರೇಣುಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಿ.ದೇವರಾಜ ಅರಸು ಸಾಧನೆ ಕೊಡುಗೆ ಅಪಾರ. ಹಿಂದುಳಿದ ವರ್ಗಗಳ ಇಲಾಖೆ ಅವರ ಶ್ರಮದಿಂದ ರಚನೆಯಾಗಿದೆ. ಅವರ ಈ ಕೊಡುಗೆಯಿಂದ ಹಿಂದುಳಿದ ವರ್ಗಗಳ ಇಲಾಖೆ ವಿದ್ಯಾರ್ಥಿಗಳು ಸಹ ಹೆಚ್ಚಿನ ಶಿಕ್ಷಣವಂತರಾಗುತ್ತಿದ್ದಾರೆ. ಶಾಲಾ, ಕಾಲೇಜು ವಿದ್ಯಾರ್ಥಿ ನಿಲಯಗಳ ಸ್ಥಾಪಿಸಿ ಉತ್ತಮ ಕೊಡುಗೆ ನೀಡಿದ್ದಾರೆ ಅಂತಹ ಧೀಮಂತ ನಾಯಕರು ಸಾಧನೆ ನಮಗೆ ಸ್ಫೂರ್ತಿ ಎಂದರು.ಉಪನ್ಯಾಸಕ ಮಾರುತಿ ಶಾಲೆಮನೆ ಮಾತನಾಡಿ, ಸಮಾಜವಾದವನ್ನೇ ಜೀವನದಲ್ಲಿ ಮೇಳೈಸಿದ ವ್ಯಕ್ತಿ ಅರಸು. ಜೀತ ಪದ್ಧತಿಯ ನಿರ್ಮೂಲನೆ ಮಾಡಿದ ಮಹಾನ್ ಮಾನವತಾವಾದಿ. ದೇಶದಲ್ಲಿ ಮಲ ಹೊರುವ ಪದ್ಧತಿ ನಿಷೇಧಿಸಿ 65 ಸಾವಿರ ಕುಟುಂಬಗಳಿಗೆ ಮುಕ್ತಿ ಕಲ್ಪಿಸಿದ್ದಾರೆ. ಅವರು ರಾಜಕೀಯ ಮಾತ್ರವಲ್ಲದೇ ಸ್ವತಃ ಅಧ್ಯಯನಶೀಲ ವ್ಯಕ್ತಿ. ಅವರ ಬದುಕು ಪ್ರತಿಯೊಬ್ಬರಿಗೂ ಆದರ್ಶ. ತನಗಾಗಿ. ತನ್ನ ಕುಟುಂಬಕ್ಕಾಗಿ ಬದುಕು ಕಟ್ಟಿಕೊಳ್ಳದೇ, ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಶೈಕ್ಷಣಿಕವಾಗಿ ಮುನ್ನೆಲೆಗೆ ತಂದವರು ಅರಸು ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸದ್ಭಾವನಾ ದಿನ ಆಚರಣೆ ಮಾಡಲು ಸೂಚನೆ ನೀಡಿ ಪ್ರತಿಜ್ಞಾವಿಧಿ ಬೋಧಿಸಿದರು. ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ, ದೂಡಾ ಆಯುಕ್ತ ಹುಲಿಮನಿ ತಿಮ್ಮಣ್ಣ, ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ ಸೇರಿದಂತೆ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.- - -
(ಬಾಕ್ಸ್)* ಹಾಸ್ಟೆಲ್‌ಗಳಲ್ಲಿ 23 ಸಾವಿರ ಮಕ್ಕಳ ವಿದ್ಯಾಭ್ಯಾಸ ಜಿಲ್ಲೆಯಲ್ಲಿ ವಿವಿಧ ವಿದ್ಯಾರ್ಥಿ ನಿಲಯಗಳಿಂದ 23 ಸಾವಿರ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಅವರಿಗೆ ವಸತಿ ಮೂಲಸೌಕರ್ಯ ವ್ಯವಸ್ಥೆಗೆ 27 ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರದಿಂದ ಜಿಲ್ಲೆಯ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಿಶೇಷ ಶಾಲೆ ಮಂಜೂರು ಮಾಡಲಾಗಿದೆ. ಅಷ್ಟೇ ಅಲ್ಲದೇ, ಕಾರ್ಮಿಕರ ಮಕ್ಕಳಿಗೂ ವಸತಿ ಶಾಲೆ ನಿರ್ಮಿಸಲು ಅನುಮತಿ ನೀಡಿದೆ. ಜಿಲ್ಲಾದ್ಯಂತ ಸುಮಾರು 300 ರಿಂದ 400 ಎಕರೆಯಷ್ಟು ಭೂಮಿಯನ್ನು ಶಾಲಾ-ಕಾಲೇಜು, ವಿದ್ಯಾರ್ಥಿನಿಲಯ ಮತ್ತು ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳು, ಪೋಷಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.- - -
-20ಕೆಡಿವಿಜಿ40.ಜೆಪಿಜಿ:ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮವನ್ನು ಪಾಲಿಕೆ ಆಯುಕ್ತೆ ರೇಣುಕಾ ಉದ್ಘಾಟಿಸಿದರು. -20ಕೆಡಿವಿಜಿ41.ಜೆಪಿಜಿ:
ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸದ್ಭಾವನಾ ದಿನ ಆಚರಣೆ ಮಾಡಲು ಸೂಚನೆ ನೀಡಿ ಪ್ರತಿಜ್ಞಾವಿಧಿ ಬೋಧಿಸಿದರು.