ಸಾರಾಂಶ
- ಭದ್ರಾವತಿ ತಾಲೂಕಿನ ಅರಕೆರೆ ಕುಮಾರ, ಚಿದಾನಂದಪ್ಪ ಬಂಧಿತರು - - -- ಜಮೀನಿನಲ್ಲಿದ್ದ ಅಡಕೆ ಗಿಡಗಳನ್ನು ದ್ವೇಷದಿಂದ ಕಡಿದು ಹಾಕಿದ್ದ ಮಹಿಳೆ
- ಮೇ 9ರಂದು ಕಣಿವೆಬಿಳಚಿ ಬಳಿ ಭದ್ರಾನಾಲೆಯಲ್ಲಿ ಮಹಿಳೆ ಶವ ಪತ್ತೆ - - -ಕನ್ನಡಪ್ರಭ ವಾರ್ತೆ, ದಾವಣಗೆರೆ ಆಸ್ತಿ ಕಲಹದಿಂದ ಜಮೀನಿನಲ್ಲಿ ಅಡಕೆ ಗಿಡಗಳನ್ನು ಕಡಿದಿದ್ದ ಮಹಿಳೆಯನ್ನು ಆಕೆಯ ಸಂಬಂಧಿಕರು ಹತ್ಯೆಗೈದು ಭದ್ರಾನಾಲೆಯಲ್ಲಿ ಎಸೆದಿದ್ದ ಪ್ರಕರಣದಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದ ಎಚ್.ಜಿ. ಕುಮಾರ (50), ಚಿದಾನಂದಪ್ಪ (54) ಬಂಧಿತರು. ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧಕ್ಕೆ ಒಪ್ಪಿಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದ ನೇತ್ರಾವತಿ (47) ಕೊಲೆಯಾಗಿದ್ದ ಮಹಿಳೆ. ಆಸ್ತಿ ಕಲಹದ ದ್ವೇಷದ ಹಿನ್ನೆಲೆ ಎಚ್.ಜಿ. ಕುಮಾರ ಮತ್ತು ಚಿದಾನಂದಪ್ಪ ಅವರ ಜಮೀನಿನಲ್ಲಿದ್ದ ಅಡಕೆ ಗಿಡಗಳನ್ನು ನೇತ್ರಾವತಿ ಕಡಿದು ಹಾಕಿದ್ದರು. ಇದರಿಂದ ಆಕ್ರೋಶಗೊಂಡ ಎಚ್.ಜಿ. ಕುಮಾರ ಹಾಗೂ ಚಿದಾನಂದಪ್ಪ ಏ.20ರಂದು ಜಮೀನಿನಲ್ಲಿಯೇ ನೇತ್ರಾವತಿಯನ್ನು ಹತ್ಯೆಗೈದಿದ್ದರು. ಅನಂತರ ಜಮೀನಿನ ಸಮೀಪದ ಭದ್ರಾ ಚಾನೆಲ್‌ನಲ್ಲಿ ಎಸೆದಿದ್ದರು. ಈ ಬಗ್ಗೆ ಬಂಧಿತರು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ಕಣಿವೆಬಿಳಚಿ ಬಳಿಯ ಭದ್ರಾನಾಲೆಯಲ್ಲಿ ಮೇ 9ರಂದು ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಈ ಬಗ್ಗೆ ಭದ್ರಾ ನಾಲೆಯ ನೀರಗಂಟಿ ವೃತ್ತಿ ಮಾಡುತ್ತಿದ್ದ ಅಣ್ಣಪ್ಪ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆ ಆಗಿರುವ ಬಗ್ಗೆ ದೂರು ದಾಖಲಾಗಿರುವುದು ಪತ್ತೆ ಮಾಡಿದರು. ಆಗ ನೇತ್ರಾವತಿ ಕೊಲೆಯಾದ ಪ್ರಕರಣ ಬೆಳಕಿಗೆ ಬಂದಿದೆ.ಪ್ರಕರಣದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಚನ್ನಗಿರಿ ಉಪವಿಭಾಗ ಡಿವೈಎಸ್‌ಪಿ ಪ್ರಶಾಂತ್ ಮನ್ನೋಳಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಸಂತೆಬೆನ್ನೂರು ಸಿಪಿಐ ಗೋಪಾಲ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡವನ್ನು ರಚಿಸಲಾಗಿತ್ತು. ಸದರಿ ತಂಡವು ನೇತ್ರಾವತಿ ಹಂತಕರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
- - - (-ಸಾಂದರ್ಭಿಕ ಚಿತ್ರ)