ಇಲ್ಲಿನ ಪೊಲೀಸ್ ಇಲಾಖೆ ಉಪವಿಭಾಗದ ವ್ಯಾಪ್ತಿಯ ಕಳ್ಳತನ ಪ್ರಕರಣಗಳಲ್ಲಿ ಪತ್ತೆ ಮಾಡಿದ ಸ್ವತ್ತನ್ನು ಮಾಲೀಕರಿಗೆ ನಗರದ ಬಣ್ಣದ ಮಠದಲ್ಲಿ ಎಸ್ಪಿ ದೀಪನ್ ಹಾಗೂ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಶನಿವಾರ ಹಸ್ತಾಂತರಿಸಲಾಯಿತು.
ಕನ್ನಡಪ್ರಭ ವಾರ್ತೆ ಶಿರಸಿ
ಇಲ್ಲಿನ ಪೊಲೀಸ್ ಇಲಾಖೆ ಉಪವಿಭಾಗದ ವ್ಯಾಪ್ತಿಯ ಕಳ್ಳತನ ಪ್ರಕರಣಗಳಲ್ಲಿ ಪತ್ತೆ ಮಾಡಿದ ಸ್ವತ್ತನ್ನು ಮಾಲೀಕರಿಗೆ ನಗರದ ಬಣ್ಣದ ಮಠದಲ್ಲಿ ಎಸ್ಪಿ ದೀಪನ್ ಹಾಗೂ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಶನಿವಾರ ಹಸ್ತಾಂತರಿಸಲಾಯಿತು.ಈ ಸಂದರ್ಭ ಸಿಪಿಐ ಶಶಿಕಾಂತ್ ವರ್ಮಾ, ಪಿಐಗಳಾದ ಶಿರಸಿ ಗ್ರಾಮೀಣ ರಮೇಶ ಹೂಗಾರ, ಯಲ್ಲಾಪುರ ರಮೇಶ ಹಾನಾಪುರ, ಸೀತಾರಾಮ್ ಸಿದ್ದಾಪುರ, ರಂಗನಾಥ್ ನೀಲಮ್ಮನವರ ಮುಂಡಗೋಡ ಹಾಗೂ ಶಿರಸಿ ಉಪ ವಿಭಾಗ ವ್ಯಾಪ್ತಿಯ ಪಿಎಸ್ಐಗಳು, ಎಎಸ್ಐಗಳು ಇತರ ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು.ಸಿಇಐಆರ್ ಪೋರ್ಟಲ್ ನೆರವಿನಿಂದ ಕಳೆದುಹೋದ 157 ಮೊಬೈಲ್ ಪತ್ತೆ!
ಕಳೆದುಹೋದ ಮೊಬೈಲ್ ಪತ್ತೆ ಹಚ್ಚುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯು ಕೇಂದ್ರ ಸರ್ಕಾರದ ''''ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್'''' (CEIR) ಪೋರ್ಟಲ್ ಅನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಇದರ ನೆರವಿನಿಂದ ಕೇವಲ ಆರು ತಿಂಗಳ ಅವಧಿಯಲ್ಲಿ ಬರೋಬ್ಬರಿ 157 ಮೊಬೈಲ್ ಪತ್ತೆ ಹಚ್ಚಿ, ಅವುಗಳ ಮೂಲ ಮಾಲೀಕರಿಗೆ ಒಪ್ಪಿಸುವಲ್ಲಿ ಯಶಸ್ಸು ಕಂಡಿದೆ.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಳೆದುಹೋದ ಮೊಬೈಲ್‌ಗಳನ್ನು ಹುಡುಕಲು 2025 ರ ಅ. 1 ರಿಂದ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಳೆದ ಆರು ತಿಂಗಳಲ್ಲಿ ವರದಿಯಾದ ಒಟ್ಟು 682 ಮೊಬೈಲ್ ಮಿಸ್ಸಿಂಗ್ ಪ್ರಕರಣಗಳ ಪೈಕಿ 157 ಮೊಬೈಲ್ ಪತ್ತೆಹಚ್ಚಲಾಗಿದೆ. ಉಳಿದ 525 ಮೊಬೈಲ್‌ಗಳ ಪತ್ತೆ ಕಾರ್ಯವು ಭರದಿಂದ ಸಾಗುತ್ತಿದೆ. ಈ ಅತ್ಯುತ್ತಮ ಹಾಗೂ ಯಶಸ್ವಿ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವೈಖರಿಯನ್ನು ಇಲಾಖೆಯು ಮುಕ್ತಕಂಠದಿಂದ ಪ್ರಶಂಸಿಸಿದೆ.CEIR ಪೋರ್ಟಲ್ ತಂತ್ರಜ್ಞಾನದ ಮೂಲಕ ಕಳೆದುಹೋದ ಮೊಬೈಲ್‌ನ IMEI ಸಂಖ್ಯೆಯನ್ನು ಬ್ಲಾಕ್ ಮಾಡುವುದರೊಂದಿಗೆ, ಆ ಮೊಬೈಲ್ ಅನ್ನು ದೇಶದಾದ್ಯಂತ ಎಲ್ಲೇ ಇದ್ದರೂ ಸುಲಭವಾಗಿ ಟ್ರ್ಯಾಕ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ, ಸಾರ್ವಜನಿಕರು ತಮ್ಮ ಮೊಬೈಲ್ ಕಳೆದುಹೋದ ತಕ್ಷಣವೇ ಯಾವುದೇ ವಿಳಂಬ ಮಾಡದೆ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬೇಕು. ಜೊತೆಗೆ, CEIR ಪೋರ್ಟಲ್‌ನಲ್ಲಿ ಅಗತ್ಯ ಮಾಹಿತಿಗಳನ್ನು ನೊಂದಾಯಿಸುವುದರಿಂದ ಆ ಮೊಬೈಲನ್ನು ಬೇರೆಯವರು ಬಳಸಲು ಸಾಧ್ಯವಾಗದಂತೆ ತಡೆಯಬಹುದು ಮತ್ತು ತ್ವರಿತವಾಗಿ ಪತ್ತೆಹಚ್ಚಬಹುದು ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.ಜಿಲ್ಲೆಯಾದ್ಯಂತ ಒಟ್ಟು 23 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಪತ್ತೆಹಚ್ಚಿ ಮಾಲೀಕರಿಗೆ ಮರಳಿಸಲಾಗಿದೆ. ಇದರಲ್ಲಿ ಅತಿ ಹೆಚ್ಚು ಅಂದರೆ ಕುಮಟಾ ಠಾಣಾ ವ್ಯಾಪ್ತಿಯಲ್ಲಿ 20, ದಾಂಡೇಲಿ ನಗರದಲ್ಲಿ 17, ಭಟ್ಕಳ ನಗರದಲ್ಲಿ 15, ಬನವಾಸಿಯಲ್ಲಿ 15 ಹಾಗೂ ಶಿರಸಿ ಎನ್.ಎಂ. ಠಾಣಾ ವ್ಯಾಪ್ತಿಯಲ್ಲಿ 12 ಮೊಬೈಲ್‌ಗಳು ಪತ್ತೆಯಾಗಿವೆ. ಉಳಿದಂತೆ ಕಾರವಾರ ನಗರ ಠಾಣೆ ವ್ಯಾಪ್ತಿಯಲ್ಲಿ 10, ಮುರ್ಡೇಶ್ವರದಲ್ಲಿ 08, ಅಂಕೋಲಾದಲ್ಲಿ 07 ಹಾಗೂ ಜೋಯಿಡಾ ಠಾಣಾ ವ್ಯಾಪ್ತಿಯಲ್ಲಿ 07 ಮೊಬೈಲ್ ಪತ್ತೆಹಚ್ಚುವ ಮೂಲಕ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.