ಆಸ್ತಿ ಹಂಚಿಕೆ ವಿಚಾರ: ತಂದೆಯನ್ನೇ ಹೊರದಬ್ಬಿದ ಮಗ- ಸೊಸೆ

| Published : Feb 18 2025, 12:30 AM IST

ಆಸ್ತಿ ಹಂಚಿಕೆ ವಿಚಾರ: ತಂದೆಯನ್ನೇ ಹೊರದಬ್ಬಿದ ಮಗ- ಸೊಸೆ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ತಿ ವಿಚಾರವಾಗಿ ನಿರಂತರವಾಗಿ ನನ್ನ ಮೇಲೆ ಹಲ್ಲೆ ನಡೆಯುತ್ತಿದೆ. ಈ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಗೆ ಐದಾರೂ ಬಾರಿ ದೂರು ನೀಡಿದ್ದೇನೆ. ಪ್ರತಿಯಾಗಿ ನನ್ನ ಮಗನಿಂದ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೇ ವಿನಃ ಯಾವುದೇ ಪ್ರಯೋಜವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ಮಗ - ಸೊಸೆ ಸೇರಿ ತಂದೆಯನ್ನು ಮನೆಯಿಂದ ಹೊರಹಾಕಿದ್ದಾರೆ. ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಪಟ್ಟಣದ ಪತ್ರಿಕಾ ಭವನದಲ್ಲಿ ತಾಲೂಕಿನ ಬೆಳಗೊಳ ಗ್ರಾಮದ 70 ವರ್ಷದ ವಯೋವೃದ್ಧ ಶಿವರಾಮು ತನ್ನ ಮಗಳು ಲಾವಣ್ಯರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಒರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಒಟ್ಟು ಮೂವರು ಮಕ್ಕಳಿದ್ದಾರೆ. ನನಗೆ ಆರೋಗ್ಯ ಸರಿಯಿಲ್ಲ. ಕಾಲು ಗ್ಯಾಂಗ್ರೀನ್, ಮೂರ್ಛೆ ರೋಗ ಸಹ ಇದೆ ಎಂದು ಶಿವರಾಮು ತಿಳಿಸಿದರು.

ಕಳೆದ 9 ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದಾರೆ. ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿ ಸೇರಿದಂತೆ 5 ಎಕರೆ ಜಮೀನಿದ್ದು, ಜೊತೆಗೆ ಬೆಳಗೊಳ ಗ್ರಾಮದಲ್ಲಿ ಮನೆ ಸಹ ನನ್ನ ಹೆಸರಿನಲ್ಲಿದೆ ಎಂದು ಹೇಳಿದರು.

ನನ್ನ ಮಗ ಹರಿಪ್ರಸಾದ, ಸೊಸೆ ರೂಪಿಣಿ ಹಾಗೂ ನಾನು ಕಳೆದ ಐದಾರೂ ವರ್ಷಗಳಿಂದ ಒಂದೇ ಮನೆಯ ಮುಂದಿನ ಭಾಗದಲ್ಲಿ ನಾನು, ಹಿಂದಿನ ಭಾಗದಲ್ಲಿ ಮಗ- ಸೊಸೆ ವಾಸವಾಗಿದ್ದೇವೆ. ಮನೆ ಬೀಗ ಒಡೆದು ಮಗ, ಸೊಸೆ ಮನೆಗೆ ನುಗ್ಗಿ ಚಿನ್ನ ಹಾಗೂ ಹಣ ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ವಿಚಾರಿಸಿದೆ, ನನ್ನ ಮೇಲೆ ಹಲ್ಲೆ ಮಾಡಿ ಮನೆಯಿಂದ ಹೊರಹಾಕಿದ್ದಾರೆ ಎಂದು ದೂರಿದರು.

ಆಸ್ತಿ ವಿಚಾರವಾಗಿ ನಿರಂತರವಾಗಿ ನನ್ನ ಮೇಲೆ ಹಲ್ಲೆ ನಡೆಯುತ್ತಿದೆ. ಈ ಸಂಬಂಧ ಕೆಆರ್‌ಎಸ್ ಪೊಲೀಸ್ ಠಾಣೆಗೆ ಐದಾರೂ ಬಾರಿ ದೂರು ನೀಡಿದ್ದೇನೆ. ಪ್ರತಿಯಾಗಿ ನನ್ನ ಮಗನಿಂದ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೇ ವಿನಃ ಯಾವುದೇ ಪ್ರಯೋಜವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಕಳೆದ 11 ದಿನಗಳಿಂದೀಚೆಗೆ ಸಂಪೂರ್ಣವಾಗಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೆ ಸ್ಥಳೀಯ ಗ್ರಾಪಂ, ತಾಪಂ ಸದಸ್ಯರ ಮಾತು ಕೇಳಿಕೊಂಡು ನಮ್ಮ ದೂರುಗಳನ್ನು ಸ್ವೀಕರಿಸುತ್ತಿಲ್ಲ. ಬೇಸತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ನಾಗರಿಕ ವೇದಿಕೆಗೂ ಸಹ ದೂರು ನೀಡಿದ್ದೇನೆ. ಇಲ್ಲೂ ನಮಗೆ ನ್ಯಾಯ ಸಿಗದಿದ್ದಲ್ಲಿ ಜಿಲ್ಲಾಧಿಕಾರಿಗಳಿಂದ ದಯಾಮರಣ ಕೋರಿ ಅರ್ಜಿ ಸಲ್ಲಿಸಲಿದ್ದೇನೆ ಎಂದು ವೃದ್ಧ ಶಿವರಾಮು ತಿಳಿಸಿದರು.