ಸಾರಾಂಶ
ಈ ತಿಂಗಳು ಉರುಸ್, ಮಾರಿ ಜಾತ್ರೆ ಹಿನ್ನೆಲೆ ಪಟ್ಟಣದ ಸ್ಪಚ್ಛತೆಗೆ ಸಹಕರಿಸಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಏ. 30ರೊಳಗೆ ತೆರಿಗೆ ಪಾವತಿ ಮಾಡಿದವರಿಗೆ ನೀಡಲಾಗುತ್ತಿದ್ದ ಶೇ. 5 ರಷ್ಟು ರಿಯಾಯ್ತಿ ಸೌಲಭ್ಯವನ್ನು ಜೂನ್ ತಿಂಗಳ ಅಂತ್ಯವರೆಗೆ ವಿಸ್ತರಿಸಲಾಗಿದೆ. ತೆರಿಗೆ ಪಾವತಿದೇ ಇದ್ದವರು ಇದರ ಸೌಲಭ್ಯ ಪಡೆಯುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿ, ನರಸಿಂಹರಾಜಪುರ ಪಟ್ಟಣವನ್ನು ಸ್ವಚ್ಛ, ಸುಂದರ ನಗರವನ್ನಾಗಿಸುವ ದೃಷ್ಠಿಯಿಂದ ಅವಿರತವಾಗಿ ಶ್ರಮಿಸುತ್ತಿದ್ದೇವೆ. ಆದರೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ, ಅನೇಕ ಖಾಲಿ ನಿವೇಶನಗಳಲ್ಲಿ,ಚರಂಡಿಗಳಲ್ಲಿ ಸಾರ್ವಜನಿಕರು ಕಸ ಹಾಕುತ್ತಿರುವುದು ಕಂಡು ಬರುತ್ತಿದೆ. ಖಾಲಿ ನಿವೇಶನದ ಮಾಲೀಕರು ತಮ್ಮ ಖಾಲಿ ನಿವೇಶನಗಳನ್ನು ಕಾಲ, ಕಾಲಕ್ಕೆ ಸ್ವಚ್ಛಗೊಳಿಸದೆ ಹಾಗೆ ಬಿಟ್ಟಿದ್ದಾರೆ. ಇದರಿಂದ ಖಾಲಿ ನಿವೇಶನದಲ್ಲಿ ಗಿಡ ಗಂಟಿಗಳು ಬೆಳೆದಿದೆ. ಕಸ ಕಡ್ಡಿಗಳು ಸಂಗ್ರಹವಾಗಿ ಸೊಳ್ಳೆ, ನೊಣ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಇದೇ ತಿಂಗಳು ಪಟ್ಟಣದಲ್ಲಿ ಉರುಸ್ ಕಾರ್ಯಕ್ರಮ ಹಾಗೂ ಮಾರಿ ಜಾತ್ರೆ ನಡೆಯಲಿದೆ. ಪರ ಊರುಗಳಿಂದ ಸಾವಿರಾರು ಜನರು ನರಸಿಂಹರಾಜಪುರಕ್ಕೆ ಬರುತ್ತಿದ್ದಾರೆ. ಆದ್ದರಿಂದ ಪಟ್ಟಣದ ಸೌಂದರ್ಯ ಕಾಪಾಡುವುದು ಎಲ್ಲರ ಕರ್ತವ್ಯ ವಾಗಿದೆ. ಆದ್ದರಿಂದ ಪಟ್ಟಣದ ನಾಗರಿಕರು ಎಲ್ಲೆಂದರಲ್ಲಿ ಕಸ ಬಿಸಾಡದೆ ಪ್ರತಿ ದಿನ ಬರುವ ಕಸ ಸಂಗ್ರಹಣಾ ವಾಹನಕ್ಕೆ ಕಸವನ್ನು ನೀಡಬೇಕು. ಖಾಲಿ ನಿವೇಶನದ ಮಾಲೀಕರು ತಮ್ಮ ನಿವೇಶನಗಳಲ್ಲಿ ಬೆಳೆದಿರುವ ಗಿಡ ,ಗಂಟಿ ಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ತಪ್ಪಿದಲ್ಲಿ ಅಂತವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.