ವಿಶ್ವಕ್ಕೆ ಶಾಂತಿ ಸಾರಿದ ಮಹನೀಯರು ಪ್ರವಾದಿ ಮಹಮ್ಮದ್

| Published : Sep 17 2024, 12:48 AM IST

ಸಾರಾಂಶ

ಈದ್ ಮಿಲಾದ್ ಅಂಗವಾಗಿ ಬಳ್ಳಾರಿಯ ದೊಡ್ಡ ಮಾರ್ಕೆಟ್ ಬಳಿಯ ಖಾಜಿ ಗುಲಾಂ ಮೊಹಾಮೀದ್ ಸಿದ್ದಿಕಿ ಅವರ ನಿವಾಸದ ಎದುರು ಖಾಜಿ ಅವರು ಮದೀನಾ ಚಿತ್ರ ಇರುವ ಹಸಿರು ಧ್ವಜದ ಧ್ವಜಾರೋಹಣ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಬಳ್ಳಾರಿ: ಮೌಲ್ಯಗಳೇ ಇಲ್ಲದ, ಸದಾ ಸಂಘರ್ಷ ತುಂಬಿದ್ದ ಅಸಮಾನ ಸಮಾಜದಲ್ಲಿ ಸಮತೆಯ ದೀಪ ಹಚ್ಚಲು ಜಗತ್ತಿಗೆ ಬಂದ ಪ್ರವಾದಿ ಮಹಮ್ಮದರು ಪ್ರಾತಃಸ್ಮರಣೀಯರು ಎಂದು ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ, ತೆರಿಗೆ ನಿರ್ಧರಣೆ ಹಾಗೂ ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ. ನೂರ್ ಮೊಹಮ್ಮದ್ ಹೇಳಿದರು.

ಬಳ್ಳಾರಿ ನಗರದ ನಾಲಾ ಗಡ್ಡ ಮಸೀದಿ ತಲುಪಿದ ಈದ್ ಮಿಲಾದ್ ಪ್ರಯುಕ್ತ ನಡೆದ ಮೆರವಣಿಗೆಯ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು. ಹೆಣ್ಣಿನ ಮೇಲೆ ಇನ್ನಿಲ್ಲದ ಶೋಷಣೆ ನಡೆಯುತ್ತಿತ್ತು, ಹೆಣ್ಣನ್ನು ಸೋದರಿ, ತಾಯಿ, ಪತ್ನಿ ಎನ್ನದೇ ಹಿಂಸೆ ನೀಡಲಾಗುತ್ತಿತ್ತು, ಅಂತಹ ಒಂದು ಕಾಲದಲ್ಲಿ ಸ್ತ್ರೀಯರ ರಕ್ಷಕರಾಗಿ ಪ್ರವಾದಿ ಮಹಮ್ಮದ್ ಅವರು ಜಗತ್ತಿಗೆ ಶಾಂತಿ ಸಂದೇಶ ನೀಡಿದರು. ಅಂತಹ ಮಹನೀಯರ ಜಯಂತಿ ಆಚರಿಸುವ ನಾವು ಭಾಗ್ಯಶಾಲಿಗಳು ಎಂದರು.

ಜಗತ್ತಿನಲ್ಲಿ ಜನರು ಪರಸ್ಪರರನ್ನು ಅನುಮಾನಿಸಿ, ವಿಚಾರ ಭಿನ್ನತೆಗಳಿಂದ ಪರಸ್ಪರರನ್ನು ಕೊಲ್ಲುವ ಸಂದರ್ಭ ಪ್ರವಾದಿಯವರು ಶಾಂತಿ ಸಂದೇಶ ನೀಡಿದರು ಎಂದ ನೂರ್ ಮೊಹಮ್ಮದ್, ಪ್ರವಾದಿ ಅವರು ಕೇವಲ ಇಸ್ಲಾಂನ ಅನುಯಾಯಿಗಳಿಗೆ ಸೀಮಿತ ಅಲ್ಲ, ಅವರು ಎಲ್ಲರಿಗೂ ಸೇರಿದವರೆಂಬ ಮಹಾತ್ಮ ಗಾಂಧೀಜಿ ಹೇಳಿಕೆಯನ್ನು ಉಲ್ಲೇಖಿಸಿದರು.

ಇದಕ್ಕೂ ಮುನ್ನ ದೊಡ್ಡ ಮಾರ್ಕೆಟ್ ಬಳಿಯ ಖಾಜಿ ಗುಲಾಂ ಮೊಹಾಮೀದ್ ಸಿದ್ದಿಕಿ ಅವರ ನಿವಾಸದ ಎದುರು ಖಾಜಿ ಅವರು ಮದೀನಾ ಚಿತ್ರ ಇರುವ ಹಸಿರು ಧ್ವಜದ ಧ್ವಜಾರೋಹಣ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ತದನಂತರ ಗ್ರಹಂ ರಸ್ತೆ, ಬ್ರೂಸ್‌ಪೇಟೆ ಠಾಣೆ ರಸ್ತೆ ಮಾರ್ಗವಾಗಿ ಜಾಮಿಯಾ ಮಸೀದಿ ತಲುಪಿ, ಅಲ್ಲಿ ಫಾತೆಹಾ ಮಾಡಲಾಯಿತು. ಈ ವೇಳೆ ಧಾರ್ಮಿಕ ಗೀತೆಗಳನ್ನು (ನಾತ್) ಹಾಡಲಾಯಿತು. ಮದೀನಾ ಮೆಕ್ಕಾದ ಪ್ರತಿಕೃತಿಗಳನ್ನು ಮೆರೆಸಲಾಯಿತು. ಮೆರವಣಿಗೆಯುದ್ದಕ್ಕೂ ಧಾರ್ಮಿಕ ಘೋಷಣೆಗಳನ್ನು ಕೂಗಲಾಯಿತು. ನಾಲಾ ಗಡ್ಡಾ ಮಸೀದಿ ಬಳಿ ಮೆರವಣಿಗೆ ಸಮಾರೋಪಗೊಂಡಿತು.

ಟ್ರಂಕ್ ನೂರ್, ಸಿಲಾರ್ ಹಾಗೂ ನೂರಾರು ಜನ ಯುವಕರು, ಪ್ರವಾದಿಯವರ ಅಭಿಮಾನಿಗಳು ಹಾಜರಿದ್ದರು.