ಪ್ರವಾದಿ ಪೈಗಂಬರ್ ಅವರ ಜನ್ಮ ದಿನಾಚರಣೆ

| Published : Sep 06 2025, 01:00 AM IST

ಸಾರಾಂಶ

ಪ್ರವಾದಿ ಮುಹಮ್ಮದ ಪೈಗಂಬರ್‌ ಅವರ 1500ನೇ ಜನ್ಮ ದಿನಾಚರಣೆ ಅಂಗವಾಗಿ ಈದ್‌ ಮಿಲಾದ್‌ ನಿಮಿತ್ತ ಶುಕ್ರವಾರ ಮುಸ್ಲಿಂ ಬಾಂಧವರಿಂದ ನಗರದಲ್ಲಿ ಭವ್ಯ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಪ್ರವಾದಿ ಮುಹಮ್ಮದ ಪೈಗಂಬರ್‌ ಅವರ 1500ನೇ ಜನ್ಮ ದಿನಾಚರಣೆ ಅಂಗವಾಗಿ ಈದ್‌ ಮಿಲಾದ್‌ ನಿಮಿತ್ತ ಶುಕ್ರವಾರ ಮುಸ್ಲಿಂ ಬಾಂಧವರಿಂದ ನಗರದಲ್ಲಿ ಭವ್ಯ ಮೆರವಣಿಗೆ ನಡೆಸಿದರು.

ನಗರದ ಮಹ್ಮದ್‌ ಗಾವಾನ್‌ ಮದರಸಾದಿಂದ ಆರಂಭವಾದ ಭವ್ಯ ಮೆರವಣಿಗೆ ಶಾಹ್‌ ಗಂಜ್‌, ಡಾ.ಅಂಬೇಡ್ಕರ್‌ ವೖತ್ತ, ಬಸವೇಶ್ವರ ವೖತ್ತದ ಮೂಲಕ ಚೌಬಾರಾ ಹತ್ತಿರದ ಜಾಮಾ ಮಸದಿಗೆ ತಲುಪಿ ಸಮಾರೋಪಗೊಂಡಿತ್ತು.

ಮೆರವಣಿಗೆಯಲ್ಲಿ ಪೌರಾಡಳಿತ ಹಾಗೂ ಹಜ್‌ ಸಚಿವ ರಹೀಮ್‌ ಖಾನ್‌, ರಾಜ್ಯ ಹಜ್‌ ಕಮಿಟಿ ಸದಸ್ಯ ಮನ್ಸೂರ ಅಹ್ಮದ ಖಾನ್‌, ನಗರ ಸಭೆ ಸದಸ್ಯರು ಸೇರಿದಂತೆ ಸಮಾಜದ ಅನೇಕ ಪ್ರಮುಖರು ಭಾಗವಹಿಸಿದ್ದರು.

ಈ ವರ್ಷ ಮೆರವಣಿಗೆಯಲ್ಲಿ ಯಾವುದೇ ರೀತಿಯ ಡಿಜೆ ಹಾಗೂ ಬೈಕ್‌ಗಳಿಗೆ ಅನುಮತಿ ನೀಡಿಲ್ಲ ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಯುವಕರು ಪಾದಯಾತ್ರೆಯ ಮೂಲಕವೇ ಕೈಯಲ್ಲಿ ಹಸಿರು ಧ್ವಜ ಹಿಡಿದು ಪಾಲ್ಗೊಂಡು ಜಯಘೋಷಗಳನ್ನು ಕೂಗುತ್ತ ಮೆರವಣಿಗೆ ನಡೆಸಿದರು.

ಈದ್‌ ಮಿಲಾದ್‌ ಹಬ್ಬದ ನಿಮಿತ್ತ ನಗರದ ಹಳೆ ಭಾಗದ ಗಾವಾನ್‌ ವೃತ್ತ ಸೇರಿದಂತೆ ಇನ್ನಿತರ ಕಡೆಗಳಲ್ಲಿ ವಿದ್ಯುತ್‌ ದೀಪಗಳಿಂದ ಹಾಗೂ ಹಸಿರು ಬಣ್ಣದ ಫರಾರಿಯಿಂದ ಸಿಂಗಾರಗೊಳಿಸಲಾಗಿತ್ತು. ನಗರದ ಅನೇಕ ಬಡಾವಣೆಗಳಲ್ಲಿ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ನಗರದ ನೂರಖಾನ್‌ ತಾಲೀಮ್‌, ಫತ್ತೇಹ ದರವಾಜಾ, ಮುಲ್ತಾನಿ ಕಾಲೋನಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಗುರುವಾರ ಸಂಜೆಯಿಂದಲೇ ನಗರದ ವಿವಿಧ ಬಡಾವಣೆಗಳಲ್ಲಿ ಮಹ್ಮದ್‌ ಪೈಗಂಬರ್‌ ಅವರ ಕುರಿತು ಅನೇಕ ಪ್ರಮುಖರಿಂದ ಪ್ರವಚನ ನಡೆದವು.