ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಎಲ್ಲರೂ ಶಾಂತಿ, ಸಂಯಮ, ಸಂತೋಷ ಹಾಗೂ ಸಹೋದರತ್ವ ಭಾವನೆಯಿಂದ ಬಾಳಬೇಕು ಎಂದು ಪೈಗಂಬರರು ಹೇಳಿದ ಮಾತು ಇಂದಿಗೂ ಪ್ರಸ್ತುತ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.ಈದ್‌ಮಿಲಾದ್ ಹಬ್ಬದ ಅಂಗವಾಗಿ ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಮಸೀದಿಗೆ ಭೇಟಿ ನೀಡಿ ಮುಸ್ಲಿಮ್‌ರಿಗೆ ಹಬ್ಬದ ಶುಭಾಶಯ ಕೋರಿ ಮಾತನಾಡಿದ ಅವರು, ಮಹಮದ್ ಪೈಗಂಬರರು ಇಡೀ ಜಗತ್ತಿಗೆ ಶಾಂತಿಯ ಸಂದೇಶ ಸಾರಿದ್ದರು. ಜಗತ್ತಿನಲ್ಲಿ ಇಸ್ಲಾಂ ಪ್ರವಚನಗಳನ್ನು ನೀಡಿ ಇಸ್ಲಾಂ ಧರ್ಮ ಶಾಂತಿಯನ್ನು ಇಡೀ ಜಗತ್ತಿಗೆ ನೀಡುವ ಧರ್ಮ ಎನ್ನುವುದನ್ನು ಸಾರಿ ಸಾರಿ ಹೇಳಿದ್ದರು ಎಂದರು.
ಶಾಂತಿ ಸಾರುವುದೇ ಈದ್ ಮಿಲಾದ್ ಹಬ್ಬ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಷಫಿ ಅಹಮದ್ ರವರು ನನ್ನ ರಾಜಕೀಯ ಗುರುಗಳು. ನಾನು ಆಸ್ಟ್ರೇಲಿಯಾದಿಂದ ಬಂದ ಮೇಲೆ ಮೊದಲನೇ ಕಾರ್ಯಕ್ರಮ ಮಾಡಿ ಅಂದು ನನ್ನನ್ನು ಗೌರವಿಸಿದ್ದರು ಎಂದು ಸ್ಮರಿಸಿದರು.ಮಾಜಿ ಶಾಸಕ ಷಫಿ ಅಹಮದ್ ಮಾತನಾಡಿ, ರಾಜ್ಯದ ಗೃಹ ಸಚಿವರಾಗಿರುವ ಡಾ. ಜಿ. ಪರಮೇಶ್ವರ್ ಅವರು ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ನಮ್ಮ ಗುರುಗಳು ಪ್ರಾರ್ಥಿಸಿದ್ದಾರೆ ಎಂದರು.
ಮಾಜಿ ಶಾಸಕ ಡಾ. ರಫೀಕ್ ಅಹಮದ್ ಮಾತನಾಡಿ, ನಾಡಿನಾದ್ಯಂತ ಈದ್ ಮಿಲಾದ್ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಹಿಂದೂ ಸಂಪ್ರದಾಯದಂತೆ ಓಣಂ , ಈದ್ ಮಿಲಾದ್ ಹಬ್ಬ ಹಾಗೂ ಶಿಕ್ಷಕರ ದಿನಾಚರಣೆ ಈ ಮೂರು ಹಬ್ಬಗಳು ಒಟ್ಟಾಗಿ ಬಂದಿರುವುದು ನಮ್ಮೆಲ್ಲರ ಅದೃಷ್ಟ ಎಂದು ಭಾವಿಸಿದ್ದೇನೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಸಿಇಒ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಪಾಲಿಕೆ ಮಾಜಿ ಸದಸ್ಯರಾದ ನಯಾಜ್ ಅಹಮದ್, ಮಹೇಶ್, ಅಪ್ತಾಬ್ ಅಹಮದ್, ಜಹೀರ್, ಅಜೀಬ್, ಸುಬಾನ್, ಡಾ. ನಯಾಜ್, ಮೆಹಮದ್ ಪಾಷ, ಆತೀಫ್ ಮತ್ತಿತರರು ಪಾಲ್ಗೊಂಡಿದ್ದರು.