ಸಾರಾಂಶ
ಜಿಲ್ಲಾಸ್ಪತ್ರೆಯನ್ನು 300 ಹಾಸಿಗೆಯಿಂದ 500 ಹಾಸಿಗೆಗೆ ಮೇಲ್ದರ್ಜೆಗೇರಿಸಲಾಗಿದೆ. ಕುಡಿಯುವ ನೀರಿನ 3 ಯೋಜನೆಗಳ ಪೈಕಿ ಆಣೂರು ಹಾಗೂ ತಡಸ ಕಾಮಗಾರಿಗಳ ಒಂದು ಸುತ್ತಿನ ಟ್ರಯಲ್ ಮಾಡಲಾಗಿದೆ.
ಹಾವೇರಿ: ಹಾವೇರಿ ಮೆಡಿಕಲ್ ಕಾಲೇಜಿನಲ್ಲಿ 300 ಹಾಸಿಗೆಗಳ ಆಸ್ಪತ್ರೆ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೆಡಿಕಲ್ ಕಾಲೇಜಿನ ಕಾಮಗಾರಿ ಶೇ. 95ರಷ್ಟು ಪೂರ್ಣಗೊಂಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಶೀಘ್ರದಲ್ಲೇ ವೈದ್ಯಕೀಯ ಕಾಲೇಜು ಉದ್ಘಾಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಸ್ಪತ್ರೆಯನ್ನು 300 ಹಾಸಿಗೆಯಿಂದ 500 ಹಾಸಿಗೆಗೆ ಮೇಲ್ದರ್ಜೆಗೇರಿಸಲಾಗಿದೆ. ಕುಡಿಯುವ ನೀರಿನ 3 ಯೋಜನೆಗಳ ಪೈಕಿ ಆಣೂರು ಹಾಗೂ ತಡಸ ಕಾಮಗಾರಿಗಳ ಒಂದು ಸುತ್ತಿನ ಟ್ರಯಲ್ ಮಾಡಲಾಗಿದೆ. ಹಂಸಭಾವಿ ಕಾಮಗಾರಿ ಮಾತ್ರ ಅರಣ್ಯ ಇಲಾಖೆ ಅನುಮತಿ ಕಾರಣ ಬಾಕಿ ಇದೆ. ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಬೇಸಿಗೆಯಲ್ಲಿ ಯಾವುದೇ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು. ಬೇಡ್ತಿ- ವರದಾ ನದಿ ಡಿಪಿಆರ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾತಿ ಬಂದ ನಂತರ ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಕ್ರೀಡಾಂಗಣಕ್ಕೆ ₹10 ಕೋಟಿ: ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ₹10 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬರುವ ದಿನಗಳಲ್ಲಿ ಕ್ರೀಡಾಂಗಣದ ಅಭಿವೃದ್ಧಿಗೆ ಅಗತ್ಯ ಕ್ರಮ ವಹಿಸಲಾಗುವುದು. ಸುಗಮ ಸಂಚಾರ ಕಲ್ಪಿಸುವ ಹಿನ್ನೆಲೆ ವಿಶೇಷ ಅನುದಾನದಲ್ಲಿ ಸಿಗ್ನಲ್‌ಗಳ ಅಭಿವೃದ್ಧಿಗೆ ₹1 ಕೋಟಿ ಅನುದಾನ ಪೊಲೀಸ್ ಇಲಾಖೆಗೆ ನೀಡುವಂತೆ ಸ್ಥಳೀಯ ಶಾಸಕರಿಗೆ ನಿರ್ದೇಶನ ನೀಡಲಾಗಿದೆ ಎಂದರು.ರಾಜ್ಯದಲ್ಲೇ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ವಿಷಾದ ವ್ಯಕ್ತಪಡಿಸಿದ ಅವರು, ರೈತರು ಯಾವುದೇ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಈ ವಿಷಯವಾಗಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದರು.ದೂರು ನೀಡಿದರೆ ₹5 ಲಕ್ಷ ಬಹುಮಾನ: ದೇಶದಲ್ಲಿ ಕಬ್ಬು ಅರೆಯುವಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. 81 ಶುಗರ್ ಫ್ಯಾಕ್ಟರಿಗಳಿದ್ದು, ಮೊದಲು ಆರು ತಿಂಗಳು ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿದ್ದವು. ಈಗ ಮೂರು ತಿಂಗಳಲ್ಲಿ ಕಬ್ಬು ಖಾಲಿಯಾಗುತ್ತದೆ. ಶುಗರ್ ಫ್ಯಾಕ್ಟರಿಗಳಲ್ಲಿ ನಿಯಮಕ್ಕಿಂತ ಹೆಚ್ಚಿನ ವೇಸ್ಟೇಜ್ ಕಟಾವು ಮಾಡುತ್ತಿದ್ದರೆ, ಸಂಬಂಧಪಟ್ಟ ರೈತರು ದೂರು ನೀರಿದರೆ ಅವರಿಗೆ ₹5 ಲಕ್ಷ ಬಹುಮಾನ ನೀಡಲಾಗುವುದು ಹಾಗೂ ನಿಯಮ ಉಲ್ಲಂಘಿಸಿದ ಕಾರ್ಖಾನೆಯ ಕಬ್ಬು ಅರೆಯುವ ಲೈಸೆನ್ಸ್ ರದ್ದು ಮಾಡಲಾಗುವುದು ಎಂದರು. ಜಿಲ್ಲಾಸ್ಪತ್ರೆ ವಾಹನ ನಿಲುಗಡೆ ಸಮಸ್ಯೆ, ಹೂವು ಮಾರುಕಟ್ಟೆ ಸ್ಥಳಾಂತರ, ಹಾನಗಲ್ಲ- ಹಾವೇರಿ ರಸ್ತೆ ದುರಸ್ತಿ, ಗುರುವಾರ ದನದ ಮಾರುಕಟ್ಟೆ ವಾಹನ ಸಂಚಾರ ಸಮಸ್ಯೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲವನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ. ಹಿರೇಮಠ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಗೋಡಿ ಇತರರಿದ್ದರು.