ಸಾರಾಂಶ
ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಾರೋಪ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕಡೂರುಪಟ್ಟಣದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ಅಗತ್ಯದ ಜೊತೆ ವಿವಿಧ ಕ್ರೀಡೆಗಳನ್ನು ಅಭ್ಯಾಸ ಮಾಡಲು ರಾಜ್ಯ ಸರ್ಕಾರಕ್ಕೆ ₹5 ಕೋಟಿ ಅನುದಾನಕ್ಕಾಗಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಮಾಹಿತಿ ನೀಡಿದರು.
ಶನಿವಾರ ಕಡೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕೃತಿಕ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾನು ಇದೇ ಶಾಲೆ, ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿ ಇಲ್ಲೇ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮಾಡಿದ್ದೇನೆ. ವಿದ್ಯಾರ್ಥಿ ಜೀವನ ಗೋಲ್ಡನ್ ಲೈಫು ಎಂಬುದು ಸತ್ಯ. ಆದರೆ ಮೊಬೈಲ್ ಗೀಳು ಬಿಟ್ಟು ಕಠಿಣ ಶ್ರಮದಿಂದ ಅಭ್ಯಾಸ ಮಾಡಿ ಶಾಲೆಗೆ ಮತ್ತು ಪೋಷಕರಿಗೆ ಹೆಸರು ತರಬೇಕು ಎಂದು ಕವಿಮಾತು ಹೇಳಿದರು.ಪುಸ್ತಕಗಳ ಜೊತೆ ಸಾಂಸ್ಕೃತಿಕ ಚಟುವಟಿಕೆಗಳನ್ನೂ ಕೂಡ ಮೈಗೂಡಿಸಿಕೊಳ್ಳಬೇಕು. ಪಿಯುಸಿ ನಂತರ ಭವಿಷ್ಯವನ್ನು ನಿರ್ಧರಿಸುವ ದಿನಗಳು ನಿಮ್ಮ ಎದುರಿಗೆ ಬರುತ್ತವೆ. ಓದಲು ಇರುವ ದಿನಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ಗುರಿ ತಲುಪಬೇಕು ಎಂದರು.
ಈ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಂಡು ಉನ್ನತ ಸ್ಥಾನದಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಇಡೀ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಿಗಿಂತ ನಮ್ಮ ಸರಕಾರದ ಮೊರಾರ್ಜಿ ಶಾಲೆಯಲ್ಲಿ ಓದಿರುವ ನಮ್ಮ ವಿದ್ಯಾರ್ಥಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದರೆ ಸರ್ಕಾರದ ಶಿಕ್ಷಣ ಗುಣಮಟ್ಟದ್ದು ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ನಮ್ಮ ಈ ಕಾಲೇಜಿನ ವಿದ್ಯಾರ್ಥಿಗಳು ಶೇ. 95ರಷ್ಟು ಫಲಿತಾಂಶ ತರಬೇಕು ಎಂದು ಮನವಿ ಮಾಡಿದರು.₹ 1.75 ಕೋಟಿ ಮತ್ತು ₹ 1.25 ಕೋಟಿ ವೆಚ್ಚದಲ್ಲಿ ತಲಾ ಎರಡು ಕೊಠಡಿಗಳ ನಿರ್ಮಾಣ ಆಗಿವೆ. ಶೀಘ್ರದಲ್ಲೇ ಹೈಟೆಕ್ ಶೌಚಾಲಯ ನಿರ್ಮಾಣ ಮತ್ತು ಕಾಲೇಜಿನ ಪ್ರಾಂಗಣಕ್ಕೆ ಸಿಸಿ ರಸ್ತೆ ಅಥವಾ ಪಾರ್ಕಿಗೆ ಟೈಲ್ಸ್ ಹಾಕಿಸಿ ಕೊಡುವುದಾಗಿ ತಿಳಿಸಿದ ಅವರು, ಈಗಾಗಲೇ ರಾಜ್ಯ ಸರ್ಕಾರದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಆನ್ಲೈನ್ ನಲ್ಲಿ ಪಾಠಗಳನ್ನು ಆರಂಭಿಸಲಾಗಿದೆ ಎಂದರು.
ಇಂದು ಹುಡುಗರು ಕತ್ತು ಬಗ್ಗಿಸಿ ಮೊಬೈಲ್ ನೋಡ್ತಿರೋದು ಸಾಮಾನ್ಯವಾಗಿದೆ. ಹಿಂದೆ ಹುಡುಗರು ಇಂದು ಯಾವ ಹುಡುಗಿ ಯಾವ ಡ್ರೆಸ್ ಹಾಕ್ತಾರೆ ಎಂದು ನೋಡುವುದನ್ನು ಬಿಟ್ಟಿದ್ದಾರೆ ಎಂದು ಎಂದು ಶಾಸಕ ಕೆ.ಎಸ್.ಆನಂದ್ ಹಾಸ್ಯ ಚಟಾಕಿ ಹಾರಿಸಿದರು. ಮೊಬೈಲ್ ಅನ್ನು ಉತ್ತಮ ಕಾರ್ಯಕ್ಕೆ ಶೈಕ್ಷಣಿಕವಾಗಿ ಉಪಯೋಗವಾಗುವಂತೆ ಹಾಗು ಬೇಕಾದ ಮಾಹಿತಿ ಪಡೆಯಲು ಮಾತ್ರ ಬಳಸಿದಲ್ಲಿ ಸದುಪಯೋಗ ಆಗುತ್ತದೆ ಎಂದರು.ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ. 1972ರಿಂದ ಆರಂಭಗೊಂಡ ಈ ಕಾಲೇಜಿಗೆ ಹಿಂದೆ ತಾಲೂಕಿನ ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ನಾನು ಕೂಡ ಈ ಶಾಲೆ ವಿದ್ಯಾರ್ಥಿಯಾಗಿದ್ದು ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಗುಣಮಟ್ಟದ ಶಿಕ್ಷಣ ನಮ್ಮ ಕಾಲೇಜಿನಲ್ಲಿ ದೊರೆಯುತ್ತಿದೆ. ಪೋಷಕರು ತಮ್ಮ ಮಕ್ಕಳು ನಮ್ಮಂತೆ ಆಗಬಾರದೆಂದು ಕಷ್ಟಪಟ್ಟು ಓದಿಸುತ್ತಿದ್ದಾರೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಕುಳಿತು ಪಾಠಗಳ ಕುರಿತು ಚರ್ಚಿಸುವುದು ಒಳಿತು ಎಂದು ಸಲಹೆ ಮಾಡಿದರು.
ಶಾಸಕರು ಪ್ರತಿವರ್ಷ ಸಾಧನೆ ಮಾಡಿದ ಮಕ್ಕಳಿಗೆ ನಗದು ಬಹುಮಾನ ಘೋಷಣೆ ಮಾಡಿರುವುದು ಅಭಿನಂದನೀಯ. ಪಟ್ಟಣ ಸ್ವಚ್ಛತೆ ಕಾಪಾಡುವ ನಮ್ಮ ಪೌರ ಕಾರ್ಮಿಕರನ್ನು ಗುರುತಿಸಿ ಗೌರವಿಸುತ್ತಿರುವುದು ಸಂತಸದ ಸಂಗತಿ. ಜಿಮ್ ನಲ್ಲಿ ಸಾಧನೆ ಮಾಡಿರುವ ಚೇತನ್ ಕೋಡಪ್ಪ ನಾಡಿಗೆ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕಾಲೇಜಿನ ಅಭಿವೃದ್ಧಿ ಅಗತ್ಯ ಕೆಲಸಗಳನ್ನು ಮಾಡಿ ಕೊಡುವುದಾಗಿ ಭರವಸೆ ನೀಡಿದರು.ಗೌರವ ಸ್ವೀಕರಿಸಿದ ಅಂತಾರಾಷ್ಟ್ರೀಯ ಜಿಮ್ ಪಟು ಚೇತನ್ ಕೊಡಪ್ಪ ಮಾತನಾಡಿ, ನಾನು ಓದಿದ ಶಾಲೆಯಲ್ಲಿ ನನ್ನ ಸಾಧನೆಗೆ ಗೌರವ ನೀಡುತ್ತಿರುವುದು ನನಗೆ ಹೃದಯ ತುಂಬಿ ಬರುತ್ತಿದೆ. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ತವರಾಜ್ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಶಾಸಕರು, ಪುರಸಭಾ ಅಧ್ಯಕ್ಷರು ಉನ್ನತ ಸ್ಥಾನ ಗಳಿಸಿದ್ದಾರೆ. ಕಾಲೇಜಿನಲ್ಲಿ 4 ಪ್ರಯೋಗಾಲಯ ಕಟ್ಟಡಗಳು ನಿರ್ಮಾಣವಾಗಿವೆ. ರಾಜ್ಯ ಸರ್ಕಾರ ₹22 ಕೋಟಿಯಲ್ಲಿ ಸಿಇಟಿ ತರಬೇತಿ ನೀಡುತ್ತಿದ್ದು ನಮ್ಮ ಶಾಲೆ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದರು.ಪುರಸಭೆ ಆರೋಗ್ಯಾಧಿಕಾರಿ ಶ್ರೀನಿವಾಸಮೂರ್ತಿ, ಮುಖಂಡ ರವಿ, ಜಿಮ್ ಚೇತನ್, ಉಪನ್ಯಾಸಕ ಲೋಕೇಶ್, ಚಂದ್ರಪ್ಪ, ರಾಜಣ್ಮ, ಚಂದ್ರಶೇಖರ್ ಸೇರಿದಂತೆ ಮತ್ತಿತರರು ಹಾಜರಿದ್ದರು. 11ಕೆಕೆಡಿಯು1.
ಕಡೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನುಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು.11ಕೆಕೆಡಿಯು1ಎ..
ಕಡೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಗೌರವಿಸಲಾಯಿತು. ಶಾಸಕ ಕೆ.ಎಸ್.ಆನಂದ್, ಭಂಢಾರಿ ಶ್ರೀನಿವಾಸ್, ತವರಾಜು ಮತ್ತಿತರು ಇದ್ದರು..