ಬೈಂದೂರು - ಉಳ್ಳಾಲ ನಡುವೆ ಹಡಗು ಯೋಜನೆಗೆ ಪ್ರಸ್ತಾವನೆ: ಕೋಟ

| Published : Oct 08 2025, 01:01 AM IST

ಬೈಂದೂರು - ಉಳ್ಳಾಲ ನಡುವೆ ಹಡಗು ಯೋಜನೆಗೆ ಪ್ರಸ್ತಾವನೆ: ಕೋಟ
Share this Article
  • FB
  • TW
  • Linkdin
  • Email

ಸಾರಾಂಶ

ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್‌ನ ಅಂಗಸಂಸ್ಥೆ ಉಡುಪಿ ಶಿಪ್‌ ಯಾರ್ಡ್‌ನಲ್ಲಿ 70 ಟನ್ ಸಾಮರ್ಥ್ಯದ ಹಡಗನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಲ್ಪೆ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸಮುದ್ರಯಾನ್ ಹಾಗೂ ಮತ್ಸ್ಯ ಸಂಪದ ಯೋಜನೆಯಡಿ ಸುಮಾರು 40,000 ಕೋಟಿ ರು.ಗಳ ಯೋಜನೆಗಳನ್ನು ರೂಪಿಸಲಾಗಿದೆ. ಉಡುಪಿ ಕಡಲಿನಲ್ಲಿ ವಾಟರ್ ಮೆಟ್ರೋ ಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಸೋಮವಾರ ಮಲ್ಪೆಯ ಕೊಚ್ಚಿನ್ ಶಿಪ್ ಯಾರ್ಡ್‌ನ ಅಂಗಸಂಸ್ಥೆ ಉಡುಪಿ ಶಿಪ್‌ ಯಾರ್ಡ್‌ನಲ್ಲಿ 70 ಟನ್ ಸಾಮರ್ಥ್ಯದ ಹಡಗು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಹೊಸ ತಂತ್ರಜ್ಞಾನಗಳಿರುವ ಮೀನುಗಾರಿಕಾ ದೋಣಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕಿದೆ. ಉಡುಪಿ ಜಿಲ್ಲೆಯ ಬೈಂದೂರು ಮತ್ತು ದ.ಕ. ಜಿಲ್ಲೆಯ ಉಳ್ಳಾಲ ನಡುವೆ ಹೆದ್ದಾರಿಗೆ ಪರ್ಯಾಯವಾಗಿ ಸಮುದ್ರ ಮಾರ್ಗದಲ್ಲಿ ಪ್ರಯಾಣಿಕರ ಹಡಗು ಆರಂಭಿಸುವ ಯೋಜನೆ ಕೂಡ ಇದೆ. ಇದಕ್ಕೆ ಕೊಚ್ಚಿನ್ ಶಿಪ್ ಯಾರ್ಡ್‌ನ ಸಹಕಾರ ಬೇಕು ಎಂದರು.ಬೈಂದೂರು- ಉಳ್ಳಾಲ ಹಡಗು ಯೋಜನೆಗೆ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳ್ಳಾಲ - ಕಾರವಾರದ ವರೆಗೆ ಸಮುದ್ರ ತೀರಗಳಲ್ಲಿ ಮೀನುಗಾರಿಕೆಗೆ ಬೇರೆಯೇ ಮಾದರಿಯ ಬೋಟ್‌ಗಳ ಅವಶ್ಯಕತೆಯಿದೆ. ಈಗಿರುವ ಚೆನ್ನೈ, ಪಶ್ಚಿಮ ಬಂಗಾಳದ ಮಾದರಿಯ ಬೋಟುಗಳು ಸೂಕ್ತವಾಗಿಲ್ಲ. ಹಾಗಾಗಿ ಕೊಚ್ಚಿನ್ ಶಿಪ್ ಯಾರ್ಡ್ ಸಂಸ್ಥೆ ಮೀನುಗಾರಿಕಾ ಬೋಟ್ ನಿರ್ಮಾಣಕ್ಕೆ ಮುಂದಾಗಬೇಕು. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡಬೇಕು ಎಂದವರು ಹೇಳಿದರು.ಈ ಕಾರ್ಯಕ್ರಮದಲ್ಲಿ ಎಂ/ಎಸ್ ಓಷನ್ ಸ್ಪಾರ್ಕಲ್ ಲಿಮಿಟೆಡ್‌ನ ಮೆರಿಯಾ ಆನ್ಸನ್ ಮತ್ತು ಪ್ರಶಾಂತ್ ನಾಯರ್ ಉಪಸ್ಥಿತರಿದ್ದರು.ಇನ್ನೂ 8 ಹಡಗುಗಳ ನಿರ್ಮಾಣ:

ಸೋಮವಾರ ಕಡಲಿಗಿಳಿಸಿದ ಎಂ/ಎಸ್ ಓಷನ್ ಸ್ಪಾರ್ಕಲ್ ಲಿಮಿಟೆಡ್‌ಗಾಗಿ ನಿರ್ಮಿಸಲಾದ ಹಡಗು 70 ಟನ್ ಭಾರ ಹೊರುವ ಸಾಮರ್ಥ್ಯ ಹೊಂದಿದ್ದು, 33 ಮೀ. ಉದ್ದ, 12.2 ಮೀ. ಅಗಲ ಮತ್ತು 4.2 ಮೀ. ಆಳವಿದೆ. 1838 ಕಿಲೋವಾಟ್ ಸಾಮರ್ಥ್ಯದ ಎರಡು ಎಂಜಿನ್‌ಗಳು ಮತ್ತು 2.7 ಮೀಟರ್ ಪ್ರೊಪೆಲ್ಲರ್‌ಗಳಿಂದ ಚಾಲಿತವಾಗುತ್ತವೆ. ಈ ಹಡಗಿನ ವಿನ್ಯಾಸವನ್ನು ವಿಶ್ವಖ್ಯಾತಿ ರಾಬರ್ಟ್ ಆಲನ್ ಲಿಮಿಟೆಡ್ ಸಂಸ್ಥೆ ರೂಪಿಸಿದೆ. ಈ ಹಡಗು ಆತ್ಮನಿರ್ಭರ್ ಭಾರತ್ ಯೋಜನೆಯ ಭಾಗವಾಗಿದೆ. ಉಡುಪಿ ಶಿಪ್‌ಯಾರ್ಡ್ ಈ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಇದೇ ಸರಣಿಯಲ್ಲಿ ಇನ್ನೂ 8 ಹಡಗುಗಳ ನಿರ್ಮಾಣ ನಡೆಯಲಿದೆ.