ಸಾರಾಂಶ
ಹುಬ್ಬಳ್ಳಿ: ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪದವಿಪೂರ್ವ (ಯುಜಿ) ಕೋರ್ಸ್‌ಗಳಿಗೆ 800 ಮತ್ತು ಸ್ನಾತಕೋತ್ತರ ಪದವಿ (ಪಿಜಿ) ವೈದ್ಯಕೀಯ ಕೋರ್ಸ್‌ಗಳಿಗೆ 700 ಹೆಚ್ಚುವರಿ ಸೀಟು ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಪ್ರಸ್ತಾವ ಸಲ್ಲಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಇಲ್ಲಿನ ಕೆಎಂಸಿಆರ್‌ಐನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚುವರಿ ಸೀಟು ಮಂಜೂರಾದರೆ ಪ್ರತಿ ವೈದ್ಯಕೀಯ ಕಾಲೇಜಿಗೆ 50 ಸೀಟುಗಳು ಹೆಚ್ಚುವರಿಯಾಗಿ ಸಿಗಲಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜ್, ಸುಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ ಇರಬೇಕು ಎಂಬುದು ನಮ್ಮ ಸರ್ಕಾರದ ಸಂಕಲ್ಪ. ಇದರಿಂದ ಬಡವರಿಗೆ ಅನುಕೂಲವಾಗುತ್ತದೆ. ಈಗಿರುವ ಮೆಡಿಕಲ್ ಕಾಲೇಜ್‌ಗಳಿಗೆ ಅಗತ್ಯಕ್ಕೆ ತಕ್ಕಂತೆ ಸೌಲಭ್ಯಗಳನ್ನು ನೀಡಲಾಗುವುದು ಎಂದರು.
ರಾಯಚೂರಿಗೆ ಏಮ್ಸ್: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು (ಏಮ್ಸ್) ರಾಯಚೂರಿಗೆ ನೀಡಬೇಕೆಂಬುದು ನಮ್ಮ ಬಹುದಿನದ ಬೇಡಿಕೆ. ಅದಕ್ಕೆ ತಕ್ಕಂತೆ ನಮ್ಮ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ಮೂರು ಬಾರಿ ಕೇಂದ್ರ ಸರ್ಕಾರವನ್ನು ಭೇಟಿ ಮಾಡಿದ್ದೇವೆ. ಒಂದು ಬಾರಿ ಎಲ್ಲ ಪಕ್ಷಗಳ ಶಾಸಕರೊಂದಿಗೆ ಭೇಟಿ ಮಾಡಿ ಕೇಳಿಕೊಂಡಿದ್ದೇವೆ. ಆದರೆ, ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.ಯಾವುದೇ ರಾಜ್ಯ ಅಭಿವೃದ್ಧಿಯಾಗಬೇಕಾದರೆ ಆರೋಗ್ಯ ಸೌಲಭ್ಯಗಳು ಸಮರ್ಪಕವಾಗಿರಬೇಕು. ಹೀಗಾಗಿಯೇ ಎಲ್ಲ ಜಿಲ್ಲೆಗಳಲ್ಲೂ ಆರೋಗ್ಯ ಸೇವೆ ಸಮಾನವಾಗಿ ಹಂಚಿಕೆಯಾಗಬೇಕು. ಏಮ್ಸ್ ಅನ್ನು ರಾಯಚೂರಿಗೆ ಮಂಜೂರು ಮಾಡಬೇಕು. ಇದರಿಂದ ಹಿಂದುಳಿದಿರುವ ಜಿಲ್ಲೆಗೆ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಇದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವು. ಇದಕ್ಕೆ ಎಲ್ಲ ರೀತಿಯಿಂದಲೂ ಸರ್ಕಾರ ಸಹಕಾರ ನೀಡುತ್ತದೆ ಎಂದರು.