ಸಾರಾಂಶ
ಹೊಸಂಗಡಿಯಿಂದ ಶಿವಮೊಗ್ಗ ಜಿಲ್ಲೆಯ ಗಡಿಯ ತನಕದ ಹುಲಿಕಲ್ ಘಾಟಿಯ ಅಭಿವೃದ್ಧಿಗೆ ರಾಜ್ಯ ಸರ್ಕಾರಕ್ಕೆ ಅಂದಾಜು 39.50 ಕೋಟಿ ರು.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೈಂದೂರು
ಇಲ್ಲಿನ ಹೊಸಂಗಡಿಯಿಂದ ಶಿವಮೊಗ್ಗ ಜಿಲ್ಲೆಯ ಗಡಿಯ ತನಕದ ಹುಲಿಕಲ್ ಘಾಟಿಯ ಅಭಿವೃದ್ಧಿಗೆ ರಾಜ್ಯ ಸರ್ಕಾರಕ್ಕೆ ಅಂದಾಜು 39.50 ಕೋಟಿ ರು.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ತಿಳಿಸಿದ್ದಾರೆ.ಈ ಘಾಟಿಯ ಇಕ್ಕೆಲಗಳಲ್ಲಿ ಅಪಾಯಕಾರಿ ಮರಗಳಿಂದ ಘಾಟಿ ರಸ್ತೆ ಹಾಳಾಗಿರುತ್ತದೆ. ಘಾಟಿಯಲ್ಲಿ ಕೆಲವೆಡೆ ಎರಡು ವಾಹನ ಗಳು ಚಲಿಸುವಷ್ಟು ವಿಶಾಲವಾದ ರಸ್ತೆ ಇಲ್ಲ. ಚರಂಡಿ ವ್ಯವಸ್ಥೆ ಹಾಗೂ ಕೆಲವು ಕಡೆ ತಡೆಗೋಡೆ ಇರುವುದಿಲ್ಲ ಹಾಗೂ ಇದ್ದ ಕಡೆ ದುರ್ಬಲಗೊಂಡಿವೆ. ಅಲ್ಲದೆ ಘಾಟಿ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ ಪಡಿಸುವುದು ಅಗತ್ಯವಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ಪ್ರಸ್ತಾವನೆ ಸಿದ್ದಪಡಿಸಿದ್ದಾರೆ.ಅದರಂತೆ ಕುಂದಾಪುರ ತಾಲೂಕು ತೀರ್ಥ ಹಳ್ಳಿ - ಕುಂದಾಪುರ ರಾಜ್ಯ ಹೆದ್ದಾರಿ 52 ರ ಕಿಮೀ 46.45 ರಿಂದ 50.18 ರವರೆಗಿನ ಸುಮಾರು 11 ಕಿಮೀ ರಸ್ತೆ ಅಭಿವೃದ್ಧಿ ಪಡಿಸಲು 39.50 ಕೋಟಿ ರು. ಅಂದಾಜಿಸಲಾಗಿದ್ದು ಪ್ರಸ್ತಾವನೆಯನ್ನು ತಯಾರಿಸಿ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಗಳಿಗೆ ನೀಡಲಾಗಿದೆ ಎಂದು ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.