ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ ಕಾಸರಗೋಡು ಮತ್ತು ಕಯ್ಯಾರರ ಕುಟುಂಬ ಜಂಟಿ ಆಶ್ರಯದಲ್ಲಿ ಕಯ್ಯಾರರ ಇಂಞಕ್ಕ ನಿವಾಸದಲ್ಲಿ ಕಯ್ಯಾರರ 109ನೇ ಜನ್ಮ ದಿನಾಚರಣೆಯನ್ನು ಶನಿವಾರ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ ದೀಪ ಬೆಳಗಿಸಿ ಪುಷ್ಪಾರ್ಚನೆ ನೆರವೇರಿಸಿದರು.ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯ ಸುಕುಮಾರ್ ಕುದ್ರೆಪಾಡಿ ಮಾತನಾಡಿ, ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈಯವರ ಬದುಕು ಹಾಗೂ ಬರಹ ಅನುಸ್ಮರಣೀಯ. ರಾಜಕೀಯ, ಸಾಮಾಜಿಕ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ತೋರಿದ ಅಸಾಮಾನ್ಯ ಸಾಧನೆ ಇಂದಿನ ಮಕ್ಕಳಿಗೆ, ಯುವಜನರಿಗೆ ಮಾದರಿಯಾಗಬೇಕು. ಕಯ್ಯಾರರ ಬಗ್ಗೆ, ಅವರ ರೀತಿ ನೀತಿಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕನ್ನಡಿಗರು ಕನ್ನಡಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿತ್ವವನ್ನು ಸದಾ ಸ್ಮರಿಸಬೇಕು. ಅವರು ತೋರಿದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.
ಬದಿಯಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್ ಮಾತನಾಡಿ, ಮುಚ್ಚಿರುವ ಕಯ್ಯಾರರ ಹೆಸರಲ್ಲಿರುವ ಬದಿಯಡ್ಕ ಪಂಚಾಯ್ತಿ ಪುಸ್ತಕಾಲಯವನ್ನು ತೆರೆದು, ಇನ್ನಷ್ಟು ಸುಸಜ್ಜಿತಗೊಳಿಸಿ ಅದರ ಪ್ರಯೋಜನ ಓದುಗರಿಗೆ ಲಭ್ಯವಾಗುವಂತೆ ಮಾಡುವಂತೆ ಪಂಚಾಯ್ತಿಯನ್ನು ಒತ್ತಾಯಿಸಲಾಗುವುದೆಂದು ಹೇಳಿದರು.ಸಂಚಾಲಕ ಪ್ರೊ. ಶ್ರೀನಾಥ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಶ್ಯಾಂ ಪ್ರಸಾದ್ ಮಾನ್ಯ, ಕುಂಬ್ಡಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಗೋಸಾಡ, ತುಳು ಸಂಘಟಕ ಕೃಷ್ಣ ಬೇಲಿಂಜ,, ನಿರಂಜನ್ ರೈ ಪೆರಡಾಲ, ಬದಿಯಡ್ಕ ರೋಟರಿ ಕ್ಲಬ್ ನ ಪ್ರತಿಕ್ ಆಳ್ವ, ಕಯ್ಯಾರರ ಕುಟುಂಬದ ಪ್ರದೀಪ್ ರೈ, ಆರತಿ ಮತ್ತಿತರರಿದ್ದರು.
ಚಂದ್ರಹಾಸ ಮಾಸ್ಟರ್, ವಸಂತ ಬಾರಡ್ಕ ಕಯ್ಯಾರರು ರಚಿಸಿದ ಕವನ ವಾಚಿಸಿದರು. ಧನರಾಜ್ ಪೆರ್ಲ ಸ್ವಾಗತಿಸಿದರು. ಸುಷ್ಮಿತಾ ಗೋಸಾಡ ವಂದಿಸಿದರು. ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ನಿರೂಪಿಸಿದರು. ಕಳೆದ ಒಂಬತ್ತು ವರ್ಷಗಳಿಂದ ನಾಡೋಜ ಕಯ್ಯಾರ ಕಿಂಞಣ್ಣ ರೈಗಳ ಹುಟ್ಟುಹಬ್ಬವನ್ನು ಕಯ್ಯಾರರ ಕುಟೀರದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯು ಹಮ್ಮಿಕೊಳ್ಳುತ್ತಾ ಬಂದಿದೆ. ಮುಂದಿನ ವರ್ಷ 10ನೇ ಜನ್ಮದಿನವನ್ನು ಜಿಲ್ಲಾ ಮಟ್ಟದಲ್ಲಿ ವಿಜೃಂಭಣೆಯಿಂದ ಕುಟುಂಬದ ಸಹಕಾರದೊಂದಿಗೆ ನಡೆಸಲಾಗುವುದು. ಈಗಾಗಲೇ ಕಯ್ಯಾರರ ಭವನ ನಿರ್ಮಾಣದತ್ತ ಸರ್ಕಾರ ಕಾಲಿಟ್ಟಿದ್ದು ಆದಷ್ಟು ಬೇಗ ಕಾಮಗಾರಿ ಆರಂಭಗೊಂಡು ಕಾರ್ಯ ಪ್ರವೃತ್ತವಾಗಲಿ ಎಂದು ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಪ್ರಾಸ್ತಾವಿಕದಲ್ಲಿ ಹೇಳಿದರು. ----------------ಜೂ.11ರಂದು ಕಯ್ಯಾರ ಜನ್ಮದಿನಾಚರಣೆ, ಪ್ರಶಸ್ತಿ ಪ್ರದಾನ
ಮಂಗಳೂರು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ, ಕಾಸರಗೋಡು ಹಾಗೂ ಕಲ್ಕೂರ ಪ್ರತಿಷ್ಠಾನದ ಸಹಯೋಗದೊಂದಿಗೆ ಜೂನ್ 11ರಂದು ಬೆಳಗ್ಗೆ 10 ಗಂಟೆಗೆ ಕಯ್ಯಾರಿನ ಶ್ರೀ ರಾಮಕೃಷ್ಣ ಎ.ಎಲ್.ಪಿ.ಶಾಲೆಯಲ್ಲಿ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಯವರ ಜನ್ಮ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಲಿದೆ.ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡಮಿ, ಕಾಸರಗೋಡು ಇದರ ಸಂಸ್ಥಾಪಕ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭವನ್ನು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಕನ್ನಡ ಏಕೀಕರಣ ಹೋರಾಟಗಾರ್ತಿ ಹಾಗೂ ಸಾಹಿತ್ಯ ಸಂಘಟಕಿ ಅಯಿಷಾ ಪೆರ್ಲ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಪ್ರಶಸ್ತಿ ಪ್ರದಾನ ಮಾಡುವರು. ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಫಾತಿಮತ್ ಝೌರ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀಧರ ಹೊಳ್ಳ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ, ಮಂಜೇಶ್ವರ ಉಪಜಿಲ್ಲಾ ಪ್ರಭಾರ ವಿದ್ಯಾಧಿಕಾರಿ ಜೀತೇಂದ್ರ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.-------------