ಕೇರಳದ ಕೊಚ್ಚಿ ವಾಟರ್ ಮೆಟ್ರೋ ಮಾದರಿಯಲ್ಲಿ ಕರ್ನಾಟಕದ ಕರಾವಳಿಯಲ್ಲೂ ವಾಟರ್ ಮೆಟ್ರೋ ನಿರ್ಮಾಣ ಮಾಡುವ ಪ್ರಸ್ತಾವನೆ ಇದ್ದು, ಈ ಸಂಬಂಧ ಕೊಚ್ಚಿ ವಾಟರ್ ಮೆಟ್ರೋ ತಂಡವು ಕರಾವಳಿಯ ಮೂರು ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ.

ಉಡುಪಿ: ಕೇರಳದ ಕೊಚ್ಚಿ ವಾಟರ್ ಮೆಟ್ರೋ ಮಾದರಿಯಲ್ಲಿ ಕರ್ನಾಟಕದ ಕರಾವಳಿಯಲ್ಲೂ ವಾಟರ್ ಮೆಟ್ರೋ ನಿರ್ಮಾಣ ಮಾಡುವ ಪ್ರಸ್ತಾವನೆ ಇದ್ದು, ಈ ಸಂಬಂಧ ಕೊಚ್ಚಿ ವಾಟರ್ ಮೆಟ್ರೋ ತಂಡವು ಕರಾವಳಿಯ ಮೂರು ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಶೀಘ್ರವೇ ಈ ಅಧ್ಯಯನ ವರದಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.

ಗುರುವಾರ ಉಡುಪಿ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘದ ವತಿಯಿಂದ ಗಣ್ಯರೊಂದಿಗೆ ಸಂವಾದ ‘ತಿಂಗಳ ಅಂಗಳ’ ಕಾರ್‍ಯಕ್ರಮದಲ್ಲಿ ಮಾತನಾಡಿದರು.

ಈ ವಾಟರ್ ಮೆಟ್ರೋ ಯೋಜನೆ ಬಗ್ಗೆ ತಾವು ಮೂರು ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಟ್ರಾಫಿಕ್ ಸರ್ವೆ ನಡೆಸಿ, ವಿಸ್ತೃತ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.ವಾಟರ್ ಏರೋಡ್ರಮ್: ಉಡಾನ್ ಯೋಜನೆಯಡಿ ಮಂಗಳೂರು–ಮರವಂತೆ–ಗೋವಾ ಕರಾವಳಿ, ಮಂಗಳೂರು–ಕೊಚ್ಚಿ ಮತ್ತು ಮಂಗಳೂರು– ಮೈಸೂರು (ಕಬಿನಿ ಪ್ರದೇಶ) ಸಂಪರ್ಕಿಸುವ ವಾಟರ್ ಏರೋಡ್ರೋಮ್‌ಗಳಿಗೆ ಅನುಮೋದನೆ ನೀಡಲಾಗಿದೆ. ಭಾರಿ ವಾಹನಗಳ ಸಂಚಾರದಿಂದ ಉಂಟಾಗುವ ನಗರ ಸಂಚಾರ ದಟ್ಟಣೆ ಕಡಿಮೆ ಮಾಡಲು ಟ್ರಕ್‌ಗಳನ್ನು ನದಿ/ಸಮುದ್ರ ಮಾರ್ಗದ ಮೂಲಕ ಸಾಗಿಸುವ ರೋರೋ ಫೆರ್ರಿ ಸೇವೆಗಳನ್ನು ಪರಿಚಯಿಸುವ ಯೋಜನೆ ಇದೆ ಎಂದು ಅವರು ಮಾಹಿತಿ ನೀಡಿದರು.

ಕರಾವಳಿಯ ಮೂರು ಜಿಲ್ಲೆಗಳಲ್ಲಿ ರಾಷ್ಟ್ರಿಯ ಹೆದ್ದಾರಿಗೆ ಪರ್ಯಾಯವಾಗಿ ರಸ್ತೆ ನಿರ್ಮಿಸುವ ಯೋಜನೆ ರೂಪಿಸಲಾಗಿದ್ದು, ಇದನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮೂಲಕ ನಡೆಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ ಎಂದು ಎಂ.ಎ. ಗಫೂರ್ ತಿಳಿಸಿದರು.

100 ಕೋ. ರು.ಗೆ ಮನವಿ: ಮಂಡಳಿಗೆ 100–500 ಕೋಟಿ ರು. ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ. ಮಂಡಳಿ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಮಂಡಳಿಯಲ್ಲಿದ್ದ 10 ಕೋಟಿ ರು. ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಮತ್ತೆ 10 ಕೋಟಿ ರು. ಅನುದಾನ ಒದಗಿಸಲಾಗಿದೆ ಎಂದು ಅವರು ಹೇಳಿದರು.ಜಿಲ್ಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಅಸ್ಟೋ ಮೋಹನ್ ವೇದಿಕೆಯಲ್ಲಿದ್ದರು. ಪ್ರಧಾನ ಕಾರ್‍ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಪತ್ರಕರ್ತ ಅಜಿತ್ ಆರಾಡಿ ವಂದಿಸಿ, ರಹೀಂ ಉಜಿರೆ ನಿರೂಪಿಸಿದರು. ಸನ್ಮತಿ ಮಾಸಿಕ ಬಿಡುಗಡೆ: ಇದೇ ಸಂದರ್ಭ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೊರತರಲಾದ ಮಾಸಿಕ ಪತ್ರಿಕೆ ‘ಸನ್ಮತಿ’ ಇದರ ಮಾರ್ಚ್ ತಿಂಗಳ ಸಂಚಿಕೆಯನ್ನು ಎಂ.ಎ. ಗಫೂರ್ ಬಿಡುಗಡೆ ಮಾಡಿದರು.