ಮದ್ದೂರಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ಸದನದಲ್ಲಿ ಪ್ರಸ್ತಾಪ:ಶಾಸಕ ಕೆ.ಎಂ.ಉದಯ್

| Published : Dec 09 2024, 12:48 AM IST

ಮದ್ದೂರಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ಸದನದಲ್ಲಿ ಪ್ರಸ್ತಾಪ:ಶಾಸಕ ಕೆ.ಎಂ.ಉದಯ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಂಷಾ ನದಿ ಎಡಭಾಗದ ಬಹುತೇಕ ಜಮೀನುಗಳು ಮಳೆ ಆಶ್ರಿತ ಪ್ರದೇಶಗಳಾಗಿವೆ. ಕೃಷಿಕರು ಬೋರ್ ವೆಲ್ ನೀರು ಬಳಸಿಕೊಂಡು ಪರಿಸ್ಥಿತಿ ನಿರ್ಮಾಣವಾಗಿದೆ. ಶಿಂಷಾ ನದಿ ದಂಡೆ ಎಡಭಾಗದ ಜಮೀನುಗಳಿಗೆ ನೀರಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ಆ ಭಾಗದ ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸಿ ನಿರಂತರವಾಗಿ ನೀರಿನ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಸಚಿವರಿಗೆ ಸದನದಲ್ಲಿ ಮನವಿ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪನೆ ಹಾಗೂ ಮಳೆಯಾಶ್ರಿತ ಪ್ರದೇಶಗಳ ಕೆರೆಗಳ ಅಭಿವೃದ್ಧಿ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ರೇಷ್ಮೆ ಬೆಳೆಗಾರರು ಖಾಸಗಿ ಮಾರಾಟಗಾರರ ಶೋಷಣೆಗೆ ಒಳಗಾಗುತ್ತಿದ್ದಾರೆ. ಅಲ್ಲದೇ, ರೇಷ್ಮೆ ಬೆಳೆ ಮಾರಾಟಕ್ಕಾಗಿ ಬೆಳೆಗಾರರು ರಾಮನಗರ, ಮಳವಳ್ಳಿ ಅಥವಾ ಕೊಳ್ಳೇಗಾಲಕ್ಕೆ ಹೋಗಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ. ಮದ್ದೂರಿನಲ್ಲೇ ಸ್ಥಾಪನೆ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಸಂಬಂಧಪಟ್ಟ ಸಚಿವರನ್ನು ಸದನದಲ್ಲಿ ಒತ್ತಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶಿಂಷಾ ನದಿ ಎಡಭಾಗದ ಬಹುತೇಕ ಜಮೀನುಗಳು ಮಳೆ ಆಶ್ರಿತ ಪ್ರದೇಶಗಳಾಗಿವೆ. ಕೃಷಿಕರು ಬೋರ್ ವೆಲ್ ನೀರು ಬಳಸಿಕೊಂಡು ಪರಿಸ್ಥಿತಿ ನಿರ್ಮಾಣವಾಗಿದೆ. ಶಿಂಷಾ ನದಿ ದಂಡೆ ಎಡಭಾಗದ ಜಮೀನುಗಳಿಗೆ ನೀರಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ಆ ಭಾಗದ ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸಿ ನಿರಂತರವಾಗಿ ನೀರಿನ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಸಚಿವರಿಗೆ ಸದನದಲ್ಲಿ ಮನವಿ ಮಾಡಲಾಗುವುದು ಎಂದರು.

ಮದ್ದೂರು ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರು. ಅನುದಾನ ಕೋರಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಳಗಾವಿ ಅಧಿವೇಶನದಲ್ಲೂ ಸಹ ಅನುದಾನ ಬಿಡುಗಡೆ ಮಾಡುವಂತೆ ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಈ ವೇಳೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಚೆಲುವರಾಜು, ಮನ್ಮುಲ್ ನಿರ್ದೇಶಕರ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಹರೀಶ್, ಮುಖಂಡ ಸಿಪಾಯಿ ಶ್ರೀನಿವಾಸ್ ಇದ್ದರು.

ಪುರಸಭೆಯಲ್ಲಿ ಇ-ಖಾತೆ ಹಗರಣ ಕೈ ಬಿಡುವ ಪ್ರಶ್ನೆ ಇಲ್ಲ: ಕೆ.ಎಂ.ಉದಯ್

ಮದ್ದೂರು:

ಕೃಷಿ ಜಮೀನುಗಳಿಗೆ ಅಕ್ರಮವಾಗಿ ಇ-ಖಾತೆ ಮಾಡಿರುವ ಹಗರಣವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಕೆ.ಎಂ. ಉದಯ್ ಭಾನುವಾರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಹಗರಣದಲ್ಲಿ ಹಿಂದಿನ ಪುರಸಭೆ ಮುಖ್ಯ ಅಧಿಕಾರಿ ಆರ್. ಅಶೋಕ್ ಸೇರಿದಂತೆ ಕೆಲವು ಪುರಸಭಾ ಸದಸ್ಯರ ಕೈವಾಡವಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರಿಂದ ಪುರಸಭೆಗೆ ಕೋಟ್ಯಂತರ ರು. ನಷ್ಟ ಉಂಟಾಗಿದೆ ಎಂದರು.

ಕೃಷಿ ಭೂಮಿಯನ್ನು ಅಕ್ರಮವಾಗಿ ಇ-ಖಾತೆ ಮಾಡಿರೋ ಬಗ್ಗೆ ನಾನು ಈ ಹಿಂದೆ ಪೌರಾಡಳಿತ ಸಚಿವ ರಹೀಮ್ ಖಾನ್ ಹಾಗೂ ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದೆ. ಈ ಹಿನ್ನೆಲೆಯಲ್ಲಿ ನಿರ್ದೇಶನಾಲಯದ ತನಿಖಾ ತಂಡ ಪುರಸಭೆಗೆ ಭೇಟಿ ನೀಡಿ ಅಕ್ರಮ ಇ-ಖಾತೆಗಳ ಕಡತ ಪರಿಶೀಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದರು.

ಇ-ಖಾತೆಯಲ್ಲಿ ಸುಮಾರು 500ಕ್ಕೂ ಹಗರಣಗಳು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ. ಅಕ್ರಮ ಖಾತೆಗಳನ್ನು ರದ್ದು ಮಾಡುವ ಬಗ್ಗೆ ಶಾಸಕರಿಗೆ ಇರುವ ಅಧಿಕಾರವನ್ನು ಬಳಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.