ಗೌರವಧನ ಹೆಚ್ಚಳಕ್ಕೆ ಸದನದಲ್ಲಿ ಪ್ರಸ್ತಾಪ: ತಮ್ಮಯ್ಯ

| Published : Feb 12 2024, 01:35 AM IST

ಸಾರಾಂಶ

ತಮ್ಮ ವೃತ್ತಿಯನ್ನು ಸೇವೆ ಎಂದು ಪರಿಗಣಿಸಿ ದುಡಿಯುತ್ತಿರುವ ಅಕ್ಷರದಾಸೋಹ (ಬಿಸಿಯೂಟ) ಕಾರ್ಯಕರ್ತರ ಗೌರವಧನ ಹೆಚ್ಚಿಸುವಂತೆ ಸದನದಲ್ಲಿ ಗಟ್ಟಿ ದನಿಯಲ್ಲಿ ಕೇಳಲಿದ್ದೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.

- ಅಕ್ಷರ ದಾಸೋಹ ಕಾರ್ಯಕರ್ತೆಯರ ಗೌರವಧನ ಹೆಚ್ಚಳಕ್ಕೆ ಒತ್ತಾಯ । ಬಿಸಿಯೂಟ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುತಮ್ಮ ವೃತ್ತಿಯನ್ನು ಸೇವೆ ಎಂದು ಪರಿಗಣಿಸಿ ದುಡಿಯುತ್ತಿರುವ ಅಕ್ಷರದಾಸೋಹ (ಬಿಸಿಯೂಟ) ಕಾರ್ಯಕರ್ತರ ಗೌರವಧನ ಹೆಚ್ಚಿಸುವಂತೆ ಸದನದಲ್ಲಿ ಗಟ್ಟಿ ದನಿಯಲ್ಲಿ ಕೇಳಲಿದ್ದೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.

ಅಕ್ಷರ ದಾಸೋಹ (ಬಿಸಿಯೂಟ) ಕಾರ್ಯಕರ್ತರ ಫೆಡರೇಶನ್ ನಗರದ ರಂಗಣ್ಣನವರ ಛತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಬಿಸಿಯೂಟ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ನಮ್ಮ ಸರಕಾರ ಗೌರವಧನ ಹೆಚ್ಚಳ ಮಾಡುವುದಾಗಿ ಹೇಳಿದ್ದು ನಿಜ. ಆದರೆ, ಜನಸಾಮಾನ್ಯರಿಗೆ ಅನುಕೂಲ ಆಗುವ ಗ್ಯಾರಂಟಿ ಯೋಜನೆ ಗಳಿಂದ ಸರಕಾರಕ್ಕೆ 59 ಸಾವಿರ ಕೋಟಿ ವ್ಯಯವಾಗುತ್ತಿದೆ. ಈ ಆದಾಯವನ್ನು ಸರಿದೂಗಿಸಿದ ನಂತರ ಬಿಸಿಯೂಟ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ವೇತನ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಅವರ ಬಳಿ ಖಾಸಗಿಯಾಗಿಯೂ ಮಾತಾಡುತ್ತೇನೆ. ಸದನದಲ್ಲಿ ಅರ್ಜಿ ಸಲ್ಲಿಸಿ ಗಟ್ಟಿಯಾಗಿ ಮಾತನಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಫೆಡರೇಶ್‌ನ್ ಜಿಲ್ಲಾ ಕಾರ್ಯದರ್ಶಿ ಎಸ್.ವಿಜಯ್‌ಕುಮಾರ್ ಮಾತನಾಡಿ, ಕಳೆದ 23 ವರ್ಷಗಳಿಂದ ಬಿಸಿಯೂಟ ಕಾರ್ಯಕರ್ತರಾಗಿ ದುಡಿಯುತ್ತಿದ್ದು ಆರಂಭದಲ್ಲಿ ದಿನಕ್ಕೆ 10 ರು. ವೇತನ ಇತ್ತು. ಹೋರಾಟದ ಫಲವಾಗಿ ಈಗ 3600 ರು.ಹೆಚ್ಚಾಗಿದೆ. ಗೌರವಧನವನ್ನು ಕೇಂದ್ರ ಸರಕಾರ ಶೇ.60, ರಾಜ್ಯ ಶೇ.40 ರಷ್ಟು ಭರಿಸಬೇಕಿದೆ. ಆದರೆ, ಆರಂಭದಲ್ಲಿ ಒಂದು ಸಾವಿರ ರು.ಇದ್ದಾಗ ಕೇಂದ್ರ ಕೊಡುತ್ತಿದ್ದ 600 ರು.ಗಳನ್ನು ಈಗಲೂ ನೀಡುತ್ತಿದ್ದು ಉಳಿದ 3 ಸಾವಿರ ರು.ಗಳನ್ನು ರಾಜ್ಯ ಭರಿಸುತ್ತಿದೆ. ಓರ್ವ ಮಹಿಳೆಯಾಗಿ ಸಂಸದೆ ಈ ಬಗ್ಗೆ ದನಿ ಎತ್ತಿಲ್ಲ. ಇನ್ನಾದರೂ ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದರು. ಅಡುಗೆ ಮಾಡುವಾಗ ಅವಘಡ ನಡೆದರೆ ಇವರಿಗೆ ವೈದ್ಯಕೀಯ ವೆಚ್ಚ ಇಲ್ಲ. ಇತರೆ ನೌಕರರಂತೆ ಇವರಿಗೆ ನಿವೃತ್ತಿ ವೇತನ ಇಲ್ಲ. ಹೀಗಾಗಿ ನಿವೃತ್ತಿಯಾದಾಗ ಕನಿಷ್ಠ 2-3 ಲಕ್ಷ ರು. ಇಡುಗಂಟು ನೀಡಬೇಕು. ಬಿಸಿಎಂ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗೆ ನೀಡುವಂತೆ ಕನಿಷ್ಠ 15 ಸಾವಿರ ರು.ವೇತನ ನೀಡಬೇಕು. ವಾರ್ಷಿಕ 10 ಕಡ್ಡಾಯ ಮಾಸಿಕ 3 ರಜೆ ನೀಡಬೇಕು. ಶಾಲೆಯಲ್ಲಿ ಮಕ್ಕಳಿಲ್ಲದಿದ್ದರೆ ಅಡುಗೆಯವರನ್ನು ತೆಗೆದು ಹಾಕುವ ಪ್ರಕ್ರಿಯೆಗೆ ಕಡಿವಾಣ ಹಾಕಬೇಕು.ಈ ಎಲ್ಲ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಅಕ್ಷರದಾಸೋಹ ಶಿಕ್ಷಣಾಧಿಕಾರಿ ಸುಂದರೇಶ್, ಬಿಸಿಯೂಟ ಕಾರ್ಯಕರ್ತರ ಸೇವೆಯನ್ನು ಸಮಾಜ ಮತ್ತು ಸರಕಾರ ಪ್ರಾಮಾಣಿಕವಾಗಿ ಪರಿಗಣಿಸಲಿ ಎಂದು ಸರಕಾರಕ್ಕೆ ನಿವೇದನೆ ಮಾಡುತ್ತೇವೆ ಎಂದರು. ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷೆ ರಾಧಾ ಸುಂದರೇಶ್ ಮಾತನಾಡಿ, ಒಗ್ಗಟ್ಟು ಗಟ್ಟಿಯಾಗಿದ್ದರೆ ಬೇಡಿಕೆ ಈಡೇರುತ್ತವೆ. ದುಡಿಯುವ ವರ್ಗಕ್ಕೆ ಒಗ್ಗಟ್ಟೇ ಬಲ ಎಂದರು. ಮುಖಂಡ ಎಚ್.ಎಂ.ರೇಣುಕಾರಾಧ್ಯ, ಬಿಸಿಯೂಟ ಕಾರ್ಯಕರ್ತರನ್ನು ಭ್ರಮಾಲೋಕದಲ್ಲಿಟ್ಟು ಪ್ರಜ್ಞಾಪೂರ್ವಕವಾಗಿ ಮೋಸ ಮಾಡುವ ವ್ಯವಸ್ಥೆ ಇದೆ. ಇದರ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದರು. ಫೆಡರೇಶ್‌ನ್ ಅಧ್ಯಕ್ಷ ಜಿ. ರಘು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರಮೇಶ್, ವಸಂತ್, ಶಿವಕುಮಾರ್‌ ಗಟ್ಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಉದಯ್‌ಕುಮಾರ್ ಹಾಗೂ ವಿವಿಧ ತಾಲೂಕು ಫೆಡರೇಶನ್ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. 11 ಕೆಸಿಕೆಎಂ 1ಚಿಕ್ಕಮಗಳೂರಿನ ರಂಗಣ್ಣನವರ ಛತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಬಿಸಿಯೂಟ ಕಾರ್ಯಕರ್ತೆಯರ ಜಿಲ್ಲಾ ಸಮಾವೇಶವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ವಿಜಯಕುಮಾರ್‌, ಜಿ. ರಘು, ರಾಧಾ ಸುಂದರೇಶ್‌, ರೇಣುಕಾರಾಧ್ಯ ಇದ್ದರು.