ಸಾರಾಂಶ
ಸೊರಬ: ಪುರಸಭೆ ವ್ಯಾಪ್ತಿಯ ರಸ್ತೆಗಳ ಇತರೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ೫೫ ಕೋಟಿ ರು.ಗಳ ಅನುದಾನ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ಪುರಸಭೆ ಅವರಣದಲ್ಲಿ ಪುರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣ ವ್ಯಾಪ್ತಿಯ ವಾರ್ಡ್‌ಗಳು ಸೇರಿದಂತೆ ಪುರಸಭೆ ರಚನೆಯಾದ ಮೇಲೆ ಸೇರ್ಪಡೆಗೊಂಡ ಗ್ರಾಮಗಳಿಗೆ ಸಮರ್ಪಕವಾಗಿ ಅನುದಾನ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪುರಸಭೆ ಮತ್ತು ಸೇರಿದ ಗ್ರಾಮಗಳನ್ನು ಒಳಗೊಂಡ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪುರಸಭೆಯಿಂದ ಈಗಾಗಲೇ ಸದಸ್ಯರು ೧೦೦ ಕೋಟಿ ರು.ಗಳ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಮತ್ತಷ್ಟು ಅನುದಾನಕ್ಕೆ ಖುದ್ದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇನೆ ಎಂದು ತಿಳಿಸಿದರು.ಪಟ್ಟಣದ ಸ.ನಂ. ೧೧೩ರ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಎ ಖಾತ ಪಡೆಯಲು ನಿವಾಸಿಗಳಿಂದ ಬೇಡಿಕೆ ಹೆಚ್ಚಿದೆ. ಆದರೆ ಕಾನೂನಿನಲ್ಲಿ ತೊಡಕಿದ್ದು ಅದನ್ನು ನಿವಾರಿಸಲು ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಬೇಕಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಚರ್ಚೆಸುತ್ತೇನೆ ಮತ್ತು ಇತರೆ ನಿವೇಶನದಾರರಿಗೆ ಸಂಬಂಧಿಸಿದಂತೆ ಎ ಖಾತ ಹೊಂದಲು ಜನರೊಂದಿಗೆ ಜಾಗೃತಿ ಆಂದೋಲನ ಏರ್ಪಡಿಸುವಂತೆ ಪುರಸಭೆ ಮುಖ್ಯಾಧಿಕಾರಿ ಚಂದನ್‌ಗೆ ಸೊಚಿಸಿದರು. ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪ್ರಭುಮೇಸ್ತ್ರಿ, ಉಪಾಧ್ಯಕ್ಷೆ ಶ್ರೀರಂಜಿನಿಕ, ಸಾಗರ ಉಪ ವಿಭಾಗಧಿಕಾರಿ ವೀರೇಶ್‌ಕುಮಾರ್, ಮುಖ್ಯಾಧಿಕಾರಿ ಚಂದನ್, ಸದಸ್ಯರಾದ ಎಂ.ಡಿ.ಉಮೇಶ್, ಈರೇಶ್ ಮೇಸ್ತ್ರಿ, ಪ್ರಸನ್ನ ಕುಮಾರ್ ದೊಡ್ಮನೆ, ಮಧುರಾಯ ಜಿ.ಶೇಟ್, ನಟರಾಜ ಉಪ್ಪಿನ, ಜಯಲಕ್ಷ್ಮಿ, ಪ್ರೇಮಾ ಟೋಕಪ್ಪ ಇತರರಿದ್ದರು.