ಬೆಳೆಹಾನಿ ಲೆಕ್ಕಾಚಾರದಲ್ಲಿ ಯಡವಟ್ಟು ಎಂಬ ಶೀರ್ಷಿಕೆಯಡಿ ಕನ್ನಡಪ್ರಭ ಪ್ರಕಟಿಸಿದ್ದ ವಿಶೇಷ ವರದಿಯ ಬೆನ್ನಲ್ಲೇ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೊಪ್ಪಳ: ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆಹಾನಿ ಅಣೆವಾರು ಲೆಕ್ಕಾಚಾರದಲ್ಲಿ ದೋಷವಾಗಿರುವ ಆರೋಪದ ಹಿನ್ನೆಲೆಯಲ್ಲಿ ಮರುಸರ್ವೆ ನಡೆಸಲು ಸರ್ಕಾರದ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

ಬೆಳೆಹಾನಿ ಲೆಕ್ಕಾಚಾರದಲ್ಲಿ ಯಡವಟ್ಟು ಎಂಬ ಶೀರ್ಷಿಕೆಯಡಿ ಕನ್ನಡಪ್ರಭ ಪ್ರಕಟಿಸಿದ್ದ ವಿಶೇಷ ವರದಿಯ ಬೆನ್ನಲ್ಲೇ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬೆಟಗೇರಿ ಗ್ರಾಮದ ಸುತ್ತಮುತ್ತಲಿನ ರೈತರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ, ಬರಗಾಲದಿಂದ ತೀವ್ರ ಬೆಳೆಹಾನಿಯಾಗಿದ್ದರೂ ಅಣೆವಾರು ಲೆಕ್ಕಾಚಾರವನ್ನು ದೋಷಪೂರಿತವಾಗಿ ನಡೆಸಲಾಗಿದೆ ಎಂಬ ರೈತರ ಆರೋಪದ ಕುರಿತು ಚರ್ಚಿಸಲಾಯಿತು. ರೈತರ ಅಭಿಪ್ರಾಯ ಆಲಿಸಿದ ಬಳಿಕ ಮರುಸರ್ವೆ ನಡೆಸಲು ನಿರ್ಧರಿಸಲಾಯಿತು.

ಸರ್ಕಾರದ ಅನುಮತಿ ಕಡ್ಡಾಯ: ಬೆಳೆಹಾನಿ ಲೆಕ್ಕಾಚಾರದ ಕುರಿತು ರೈತರು ತಡವಾಗಿ ಆಕ್ಷೇಪಣೆ ಸಲ್ಲಿಸಿದ್ದರಿಂದ ಜಿಲ್ಲಾ ಹಂತದ ಅಧಿಕಾರಿಗಳ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುವ ಅವಧಿ ಮುಗಿದಿದೆ. ಹೀಗಾಗಿ ಮರುಸರ್ವೆ ನಡೆಸಲು ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

ಲೆಕ್ಕಾಚಾರದಲ್ಲಿ ಲೋಪದ ಆರೋಪ: ರೈತರ ಆರೋಪದ ಪ್ರಕಾರ, ನಿಯಮಾನುಸಾರ ಅಣೆವಾರು ಲೆಕ್ಕಾಚಾರ ನಡೆಸಿಲ್ಲ. ಸರ್ವೆ ಕಾರ್ಯದ ವೇಳೆ ರೈತರ ಉಪಸ್ಥಿತಿ ಇರಲಿಲ್ಲ. ಆಯ್ಕೆಯಾದ ಸರ್ವೆ ನಂಬರ್‌ನ ಜಮೀನಿನಲ್ಲಿ ಬೆಳೆ ಇಲ್ಲದಿದ್ದರೆ ಮುಂದಿನ ಸರ್ವೆ ನಂಬರ್ ಪರಿಗಣಿಸಬೇಕಿತ್ತು. ಆದರೆ, ಮುಂದಿನ ಸರ್ವೆ ನಂಬರ್ ಬದಲಿಗೆ ಹಿಂದಿನ ಸರ್ವೆ ನಂಬರ್ ಪರಿಗಣಿಸಿರುವುದು ಸೇರಿದಂತೆ ಹಲವು ಲೋಪಗಳು ನಡೆದಿವೆ ಎಂದು ರೈತರು ದೂರಿದ್ದಾರೆ. ಈ ಕುರಿತು ಅಧಿಕಾರಿಗಳು ಸಮಜಾಯಿಷಿ ನೀಡಿದ್ದು, ಇದೀಗ ಮರುಸರ್ವೆಗೆ ಮುಂದಾಗಿರುವುದರಿಂದ ರೈತರು ಸಮ್ಮತಿ ಸೂಚಿಸಿದ್ದಾರೆ.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತೂರಾದಿ, ಬೆಟಗೇರಿ ಗ್ರಾಮ ಪಂಚಾಯಿತಿ ಪಿಡಿಒ ಸಂಜಯ ರಾವತ್, ಕೃಷಿ ಅಧಿಕಾರಿ ಪ್ರತಾಪಗೌಡ ನಂದಿನಗೌಡ್ರ, ರೈತರಾದ ವೀರೇಶ ಸಜ್ಜನ, ಹನುಮರಡ್ಡಿ ಬೆಲ್ಲೊಡಗಿ, ಭೀಮಣ್ಣ ಕವಲೂರು, ವೆಂಕಣ್ಣ ಕೊರಣ್ಣವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸದ್ಯಕ್ಕೆ ತಪ್ಪನ್ನು ಒಪ್ಪಿಕೊಂಡು ಪುನಃ ಸರ್ವೆ ಮಾಡುವುದಾಗಿ ಹೇಳಿದ್ದಾರೆ. ಮತ್ತೊಮ್ಮೆಯಾದರೂ ನಿಯಮಾನುಸಾರ ಸರ್ವೆ ನಡೆಸಿ ರೈತರಿಗೆ ನ್ಯಾಯ ಸಿಗುವಂತಾಗಲಿ ಎಂದು ರೈತ ಮುಖಂಡ ವೀರೇಶ ಸಜ್ಜನ ತಿಳಿಸಿದರು.

ರೈತರ ಸಮ್ಮುಖದಲ್ಲಿಯೇ ಸಭೆ ನಡೆಸಿ, ರೈತರಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸುವ ಉದ್ದೇಶದಿಂದ ಪುನಃ ಲೆಕ್ಕಾಚಾರ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರದ ಅನುಮತಿ ಕೋರಿ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ತಹಸೀಲ್ದಾರ್ ಬಸವರಾಜ ಟೆನ್ನಳ್ಳಿ ತಿಳಿಸಿದರು.