ರಾಜ್ಯ ಮಟ್ಟದಲ್ಲಿ ನಡೆದಿರುವ ಬಹುತೇಕ ಕ್ರೀಡಾಕೂಟಗಳ ಪಂದ್ಯಾವಳಿಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸುತ್ತಿದ್ದಾರೆ.
ಹಗರಿಬೊಮ್ಮನಹಳ್ಳಿ: ತಾಲೂಕಿನ ಬಹುತೇಕ ಶಾಲಾ ಕಾಲೇಜುಗಳಲ್ಲಿನ ದೈಹಿಕ ಶಿಕ್ಷಕರ ಕೊರತೆ ನೀಗಿಸಲು ದೈಹಿಕ ಶಿಕ್ಷಕರ ನೇಮಕಕ್ಕೆ ಒತ್ತಾಯಿಸಿ ಅಧಿವೇಶನದಲ್ಲಿ ಪ್ರಸ್ತಾವ ಸಲ್ಲಿಸುವ ಮೂಲಕ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುತ್ತದೆ ಎಂದು ಶಾಸಕ ನೇಮಿರಾಜ್ ನಾಯ್ಕ ತಿಳಿಸಿದರು.
ಪಟ್ಟಣದ ಗಂ.ಭೀ. ತಾಲೂಕು ಕ್ರೀಡಾಂಗಣದಲ್ಲಿ ಜಿಪಂ,ತಾಪಂ ಹಾಗೂ ತಾಲೂಕು ಶಿಕ್ಷಣ ಇಲಾಖೆಯ ಜಂಟಿ ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಕ್ರೀಡಾಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.ರಾಜ್ಯ ಮಟ್ಟದಲ್ಲಿ ನಡೆದಿರುವ ಬಹುತೇಕ ಕ್ರೀಡಾಕೂಟಗಳ ಪಂದ್ಯಾವಳಿಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸುತ್ತಿದ್ದಾರೆ. ಆದರೆ ದೈಹಿಕ ಶಿಕ್ಷಕರ ಕೊರತೆಯ ಪರಿಣಾಮವಾಗಿ ಬಹುತೇಕ ಆಸಕ್ತ ಕ್ರೀಡಾಪಟುಗಳು ಕ್ರೀಡೆಗಳಿಂದ ವಿಮುಖರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ವೈಯಕ್ತಿಕ ಹಾಗೂ ಗುಂಪು ಪಂದ್ಯಾವಳಿಗಳಲ್ಲಿ ಹೆಚ್ಚಿನ ಮಟ್ಟದ ಪ್ರದರ್ಶನ ತೋರಿಸುವ ಮೂಲಕ ತಾಲೂಕು ಮಟ್ಟದಿಂದ ಜಿಲ್ಲಾ ಹಾಗೂ ವಲಯ ಮಟ್ಟದ ಪಂದ್ಯಾವಳಿಗಳಿಗೆ ಆಯ್ಕೆಯಾಗಬೇಕು. ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಪ್ರತಿಭೆ ಗ್ರಾಮೀಣ ವಿದ್ಯಾರ್ಥಿಗಳಲ್ಲಿದೆ ಎಂದು ಆಶಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಛೇಂಬರ್ ಆಫ್ ಕಾಮರ್ಸನ ಅಧ್ಯಕ್ಷ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಬಾದಾಮಿ ಮೃತ್ಯುಂಜಯ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಪ್ರಭಾಕರ್, ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್. ಸೋಮಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಾಜಕುಮಾರ್ ನಾಯ್ಕ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ್, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್. ರವಿಚಂದ್ರನಾಯ್ಕ, ಎಸ್.ಸಿ, ಎಸ್.ಟಿ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಮೀಠ್ಯಾನಾಯ್ಕ, ರಾಜ್ಯ ಗ್ರೇಡ್-೧ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಜಿ. ಬಸವರಾಜ್, ಎಸ್ಸಿ, ಎಸ್ಟಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ. ಸೋಮಶೇಖರ್, ಎನ್.ಪಿ.ಎಸ್. ನೌಕರ ಸಂಘದ ಅಧ್ಯಕ್ಷ ಮೋಹನ್ ಅಣಜಿ, ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಕೆ.ಬಿ. ದೀಪಿಕಾ ಹಾಗೂ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಂ ಕಾರೆಡ್ಡಿ ಮತ್ತಿತರರಿದ್ದರು.ಸಂಗೀತ ಶಿಕ್ಷಕಿ ಶಾರದಾ ಮಂಜುನಾಥ್, ಶಿವಲಿಂಗಸ್ವಾಮಿ ಮತ್ತು ಗುರುಬಸವರಾಜ್ ನಿರ್ವಹಿಸಿದರು.