ಉಡುಪಿಯನ್ನು ಮಹಾನಗರಪಾಲಿಕೆ ಮಾಡುವ ಪ್ರಸ್ತಾಪ ಸ್ವಾಗತಾರ್ಹ: ಕಿಶೋರ್ ಕುಮಾರ್ ಕುಂದಾಪುರ

| Published : Feb 08 2025, 12:33 AM IST

ಉಡುಪಿಯನ್ನು ಮಹಾನಗರಪಾಲಿಕೆ ಮಾಡುವ ಪ್ರಸ್ತಾಪ ಸ್ವಾಗತಾರ್ಹ: ಕಿಶೋರ್ ಕುಮಾರ್ ಕುಂದಾಪುರ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ನಗರಸಭೆ ಮಹಾ ನಗರಪಾಲಿಕೆಯಾಗಿ ರೂಪುಗೊಳ್ಳುವ ಪ್ರಕ್ರಿಯೆಯಿಂದ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿಯಂತಹ ಯೋಜನೆಗಳು ಹಾಗೂ ಬೃಹತ್ ಮೊತ್ತದ ಅನುದಾನಗಳು ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಪ್ರಕ್ರಿಯೆ ಅತಿ ಶೀಘ್ರವಾಗಿ ಕಾರ್ಯಗತಗೊಂಡು ಉಡುಪಿ ಮಹಾ ನಗರಪಾಲಿಕೆ ಅಸ್ತಿತ್ವಕ್ಕೆ ಬರುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗುವಂತಾಗಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರತಿಷ್ಠಿತ ಉಡುಪಿ ನಗರಸಭೆಯನ್ನು ಮಹಾ ನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ. ಉಡುಪಿ ನಗರಸಭೆ, ಮಹಾ ನಗರಪಾಲಿಕೆಯಾಗಿ ಪರಿವರ್ತಿತವಾದಲ್ಲಿ ಉಡುಪಿ ನಗರದ ಸಹಿತ ನಗರಕ್ಕೆ ಹೊಂದಿಕೊಂಡಿರುವ ಹಲವಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮೂಲಸೌಕರ್ಯ ವೃದ್ಧಿ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಿದಂತಾಗುವುದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.ಮೂಲತಃ ಸಿಟಿ ಮುನ್ಸಿಪಲ್ ಕೌನ್ಸಿಲ್ ನಂತರ ಪುರಸಭೆಯಾಗಿದ್ದ ಉಡುಪಿ ನಗರಸಭೆ 1996ರಲ್ಲಿ ಮಲ್ಪೆ (ಕೊಡವೂರು), ಪುತ್ತೂರು, ಶಿವಳ್ಳಿ, 76 ಬಡಗಬೆಟ್ಟು ಮತ್ತು ಹೆರ್ಗ ಗ್ರಾಮಗಳ ಸೇರ್ಪಡೆಯೊಂದಿಗೆ ನಗರಸಭೆಯ ಸ್ಥಾನಮಾನವನ್ನು ಪಡೆದಿದೆ. 2010ರಲ್ಲಿ 75ನೇ ವರ್ಷಾಚರಣೆಯನ್ನು ನಡೆಸಿರುವ ಉಡುಪಿ ನಗರಸಭೆಗೆ ಪ್ರಸಕ್ತ 90ನೇ ವರ್ಷ ತುಂಬುತ್ತಿರುವ ಸುಸಂದರ್ಭದಲ್ಲಿ ಮಹಾ ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪ ಪ್ರಗತಿಯಲ್ಲಿರುವುದು ಹರ್ಷದಾಯಕವಾಗಿದೆ. ಈಗಾಗಲೇ ಹಲವಾರು ವಿನೂತನ ಯೋಜನೆಗಳೊಂದಿಗೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಉಡುಪಿ ನಗರಸಭೆಗೆ ಮಹಾ ನಗರಪಾಲಿಕೆಯ ಸ್ಥಾನಮಾನ ವರದಾನವಾಗಿ ಪರಿಣಮಿಸಲಿದೆ.ಉಡುಪಿ ನಗರಸಭೆ ಮಹಾ ನಗರಪಾಲಿಕೆಯಾಗಿ ರೂಪುಗೊಳ್ಳುವ ಪ್ರಕ್ರಿಯೆಯಿಂದ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿಯಂತಹ ಯೋಜನೆಗಳು ಹಾಗೂ ಬೃಹತ್ ಮೊತ್ತದ ಅನುದಾನಗಳು ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಪ್ರಕ್ರಿಯೆ ಅತಿ ಶೀಘ್ರವಾಗಿ ಕಾರ್ಯಗತಗೊಂಡು ಉಡುಪಿ ಮಹಾ ನಗರಪಾಲಿಕೆ ಅಸ್ತಿತ್ವಕ್ಕೆ ಬರುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗುವಂತಾಗಲಿ ಎಂದು ಕಿಶೋರ್ ಕುಮಾರ್ ಕುಂದಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.