ಮಂಗಳೂರು ಜಿಲ್ಲೆ ಮರುನಾಮಕರಣ ಪ್ರಸ್ತಾಪ: ದಿಶಾ ಸಭೆಯಲ್ಲಿ ನಿರ್ಣಯ, ಸರ್ಕಾರಕ್ಕೆ ಸಲ್ಲಿಕೆ

| Published : Jul 10 2025, 12:45 AM IST

ಮಂಗಳೂರು ಜಿಲ್ಲೆ ಮರುನಾಮಕರಣ ಪ್ರಸ್ತಾಪ: ದಿಶಾ ಸಭೆಯಲ್ಲಿ ನಿರ್ಣಯ, ಸರ್ಕಾರಕ್ಕೆ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡವನ್ನು ‘ಮಂಗಳೂರು ಜಿಲ್ಲೆ’ಯಾಗಿ ಮರು ನಾಮಕರಣಗೊಳಿಸುವ ಬಗ್ಗೆ ದಿಶಾ ಸಮಿತಿ ಸಭೆಯಲ್ಲಿ ಜಿಲ್ಲೆಯ ಶಾಸಕರು, ಸಂಸದರ ಸಮ್ಮತಿಯ ಜಂಟಿ ಪ್ರಸ್ತಾವವನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಕಳುಹಿಸಲು ನಿರ್ಣಯಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡವನ್ನು ‘ಮಂಗಳೂರು ಜಿಲ್ಲೆ’ಯಾಗಿ ಮರು ನಾಮಕರಣಗೊಳಿಸುವ ವಿಷಯ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿಯೂ ಪ್ರಸ್ತಾಪಗೊಂಡಿತಲ್ಲದೆ, ಜಿಲ್ಲೆಯ ಶಾಸಕರು, ಸಂಸದರ ಸಮ್ಮತಿಯ ಜಂಟಿ ಪ್ರಸ್ತಾವವನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಕಳುಹಿಸಲು ನಿರ್ಣಯಿಸಲಾಯಿತು.ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ದಿಶಾ ಸಭೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ವಿಷಯ ಪ್ರಸ್ತಾವಿಸಿದರು.ದ.ಕ. ಜಿಲ್ಲೆಗೆ ಮಂಗಳೂರು ಹೆಸರು ನಾಮಕರಣಗೊಳಿಸುವ ಚರ್ಚೆ ನಡೆಯುತ್ತಿದೆ. ಬೆಂಗಳೂರಿನಂತೆ ಮಂಗಳೂರು ಕೂಡಾ ಜಾಗತಿಕವಾಗಿ ಗುರುತಿಸಿಕೊಂಡಿದೆ. ಆದ್ದರಿಂದ ದಕ್ಷಿಣ ಕನ್ನಡವನ್ನು ಮಂಗಳೂರು ಜಿಲ್ಲೆಯಾಗಿ ಮರು ನಾಮಕರಣಗೊಳಿಸುವ ನಿಣರ್ಯವನ್ನು ಸರ್ಕಾರಕ್ಕೆ ಕಳುಹಿಸುವಂತೆ ಆಗ್ರಹಿಸಿದರು.ನಿಡಿಗಲ್‌ ಬಳಿ ಆನೆ ಕ್ಯಾಂಪ್‌:

ಸುಳ್ಯದಲ್ಲಿ ಆನೆ ಹಾಗೂ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಏನು ಕ್ರಮವಾಗಿದೆ ಎಂದು ಶಾಸಕಿ ಭಾಗೀರಥಿ ಮರುಳ್ಯ ಪ್ರಶ್ನಿಸಿದರು.ಸಂಸದರು ಈ ಬಗ್ಗೆ ಎರಡು ಬಾರಿ ಸಭೆ ನಡೆಸಿದ್ದಾರೆ. ದುಬಾರೆ ಕ್ಯಾಂಪ್‌ನಿಂದ ಆನೆ ತರಿಸಿ ಕನಕಮಜಲುವಿನಲ್ಲಿ ಪ್ರತಿರೋಧ ಚಟುವಟಿಕೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದಾಗ, ಸೋಲಾರ್‌ ಬೇಲಿ, ಕಂದಕಗಳನ್ನು ನಿರ್ಮಿಸಲು ವಿಶೇಷ ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.ನಿಡಿಗಲ್‌ ಬಳಿ ಆನೆ ಕ್ಯಾಂಪ್‌ ತೆರೆದರೆ ಆನೆಗಳ ಹಾವಳಿಯನ್ನು ತಪ್ಪಿಸಲು ಸಾಧ್ಯವಾಗಲಿದೆ. ಜತೆಗೆ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ ಎಂದು ಶಾಸಕ ಶಾಸಕ ಹರೀಶ್‌ ಪೂಂಜಾ ಹೇಳಿದಾಗ, ಅಲ್ಲಿ ಮಂಕಿ ಪಾರ್ಕ್ ಕೂಡಾ ಆಗಲಿ ಎಂದು ಶಾಸಕಿ ಭಾಗೀರಥಿ ದನಿಗೂಡಿಸಿದರು.ಹೆದ್ದಾರಿ ಗುಂಡಿ ಮುಚ್ಚಿಸಿ: ಹೊನ್ನಕಟ್ಟೆ, ಕೂಳೂರು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರೀ ಗಾತ್ರದ ಗುಂಡಿಗಳಾಗಿದ್ದು, ಅವುಗಳನ್ನು ಮುಚ್ಚಿಸುವ ಕಾರ್ಯ ಹೆದ್ದಾರಿ ಇಲಾಖೆಯಿಂದ ಆಗಬೇಕು ಎಂದು ಶಾಸಕ ಡಾ. ಭರತ್‌ ಶೆಟ್ಟಿ ಆಗ್ರಹಿಸಿದರು.ಸಂಸದ ಕ್ಯಾ. ಬ್ರಿಜೇಶ್‌ ಚೌಟರವರು, ರಾ.ಹೆದ್ದಾರಿ ರಸ್ತೆಗಳಲ್ಲಿನ ಅತಿಕ್ರಮಣ ತೆರವುಗೊಳಿಸುವ ಬಗ್ಗೆ ಕ್ರಮ ವಹಿಸುವಂತೆ ರೆ. ಹೆದ್ದಾರಿ ಹಾಗೂ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.ಕೆತ್ತಿಕಲ್‌ ತಡೆಗೋಡೆ ಅವೈಜ್ಞಾನಿಕ: ಕೆತ್ತಿಕಲ್‌ನಲ್ಲಿ ನಿರ್ಮಾಣವಾದ ತಡೆಗೋಡೆ ಅವೈಜ್ಞಾನಿಕವಾಗಿದ್ದು, ಮೊದಲಿಗಿಂತಲೂ ಈ ಬಾರಿ ಹೆಚ್ಚು ಭೂಕುಸಿತವಾಗಿದೆ. ಅಲ್ಲಲ್ಲಿ ಮಾಡಲಾಗಿರುವ ನೀರು ಹರಿದುಹೋಗುವ ಒಳಚರಂಡಿಗಳಿಂದ ಅಲ್ಲಿನ ಕೆಳಭಾಗದ ಮನೆ, ದೇವಸ್ಥಾನಕ್ಕೆ ನೀರು ಹರಿಯುತ್ತಿದೆ ಎಂದು ನಾಮನಿರ್ದೇಶಿತ ಸದಸ್ಯ ರಾಜೀವ್‌ ಶೆಟ್ಟಿ ಆಕ್ಷೇಪಿಸಿದರು.ಕೆತ್ತಿಕಲ್‌ನ ಸಮಸ್ಯೆ ಕುರಿತಂತೆ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ರಾಕ್‌ ಮೆಕ್ಯಾನಿಕ್ಸ್‌ (ಎನ್‌ಐಆರ್‌ಎಂ)ನ ತಜ್ಞರು ಪರಿಶೀಲನೆ ನಡೆಸಿದ್ದು, ಅವರ ಸೂಚನೆಯಂತೆ ಎನ್‌ಎಚ್‌ಎಐ ಇಳಿಜಾರು ಸ್ಥಿರೀಕರಣ ಮತ್ತು ರಕ್ಷಣಾ ಕಾರ್ಯ ಆರಂಭಿಸಲಾಗಿದೆ ಎಂದು ರಾ.ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ತಿಳಿಸಿದರು.

ನಂದಿನಿ ನದಿಗೆ ಕಲುಷಿತ ನೀರು, ಪರಿಶೀಲಿಸಿ ಅಗತ್ಯ ಕ್ರಮಇತಿಹಾಸ ಪ್ರಸಿದ್ಧ ಖಂಡೇವು ನಂದಿನಿ ನದಿಗೆ ಸಮೀಪದ ಮೆಡಿಕಲ್‌ ಕಾಲೇಜು ಹಾಗೂ ಪಾಲಿಕೆಯ ಚೇಳ್ಯಾರು ತ್ಯಾಜ್ಯ ಘಟಕ (ಎಸ್‌ಟಿಪಿ)ದಿಂದ ಕೊಳಚೆ ನೀರು ಸೇರುತ್ತಿದ್ದು, ಈ ಬಗ್ಗೆ ಸಾಕಷ್ಟುಪ್ರತಿಭಟನೆ ನಡೆದಿದೆ. 2016ರಿಂದ ಐದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಸಮಸ್ಯೆ ಪರಿಹಾರವಾಗಿಲ್ಲ. ನೀವಾದರೂ ಪರಿಹಾರ ಒದಗಿಸಿ ಎಂದು ನಾಮ ನಿರ್ದೇಶಿತ ಸದಸ್ಯ ರಾಜೀವ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.ಶಾಸಕ ಉಮಾನಾಥ ಕೋಟ್ಯಾನ್‌ ದನಿಗೂಡಿಸಿ, ಪರಿಸರ ನಿಯಂತ್ರಣ ಮಂಡಳಿಯವರು ಕೇವಲ ನೋಟೀಸು ನೀಡುತ್ತಾರೆ. ಆದರೆ ಅಲ್ಲಿನ ಮೆಡಿಕಲ್‌ ಕಾಲೇಜಿನವರು ಕ್ಯಾರೇ ಮಾಡುವುದಿಲ್ಲ. ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಆ ಕಾಲೇಜಿನವರ ಮೇಲೆ ಶಿಸ್ತು ಕ್ರಮ ವಹಿಸಬೇಕು. ಇಲ್ಲವಾದರೆ, ಅದನ್ನು ಮುಚ್ಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌ ಮಾತನಾಡಿ, ಮುಂಚೂರಿನಲ್ಲಿರುವ ಪಾಲಿಕೆಯ ಹಳೆ ಎಸ್‌ಟಿಪಿಯಲ್ಲಿ ವಿದ್ಯುತ್‌ ಸಮಸೆಯ ಇತ್ತು. ಇದೀಗ 500 ಕೆವಿಯ ಹೊಸ ಟೆಂಡರ್‌ ಹಾಕಲು ಟೆಂಡರ್‌ ಆಗಿದೆ. ಅಲ್ಲಿ ಸುಮಾರು 1 ಕಿ.ಮೀ. ವ್ಯಾಪ್ತಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ ಎಂದರು. ಮಂಗಳೂರಿಗೆ ಶೀಘ್ರವೇ ಬರಲಿದೆ ಟಿ55 ಟ್ಯಾಂಕರ್‌

ಸುಮಾರು 70 ಟನ್‌ಗಳ ಟಿ55 ಮಿಲಿಟರಿ ಟ್ಯಾಂಕರ್‌ ಮಂಗಳೂರಿಗೆ ಪುಣೆಯಿಂದ ಶೀಘ್ರವೇ ಬರಲಿದ್ದು, ಇಲ್ಲಿ ಅದರ ಪ್ರದರ್ಶನ ನಡೆಯಲಿದೆ. ಸರ್ಕ್ಯೂಟ್‌ ಹೌಸ್‌ ಬಳಿಯ ಯೋಧರ ಸ್ಮಾರಕದ ಬಳಿ ಇದನ್ನು ಪ್ರದರ್ಶನಕ್ಕೆ ಇರಿಸಲು ನಿರ್ಧರಿಸಲಾಗಿದೆ. ಪುಣೆಯಿಂದ ಇಲ್ಲಿಗೆ ತರಿಸಲು ಸುಮಾರು 1.5 ಲಕ್ಷ ರು. ವೆಚ್ಚವಾಗಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್‌ ಚೌಟ ತಿಳಿಸಿದರು.