ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ರಸ್ತೆ ಚರಂಡಿ, ಕುಡಿವ ನೀರು ಸೇರಿದಂತೆ ಮೌಲ್ಯ ಸೌಕರ್ಯ ಕಲ್ಪಿಸಿಕೊಟ್ಟರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ. ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ರಸ್ತೆಗಳು ಹಾಳಾಗಿವೆ. ಎಲ್ಲಾ ಹಳ್ಳಿಗಳಿಗೂ ದೀರ್ಘಕಾಲ ಬಾಳಿಕೆ ಬರುವಂತೆ ಗುಣಮಟ್ಟದ ರಸ್ತೆ ಮಾಡಿಸಿಕೊಡಬೇಕೆಂಬ ಉದ್ದೇಶ ನನ್ನದಾಗಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನಲ್ಲಿ ಜವಳಿ ಪಾರ್ಕ್, ವಿದ್ಯುತ್ ಉಪಕೇಂದ್ರ, ಅಂಬೇಡ್ಕರ್ ಭವನ ಸೇರಿದಂತೆ ವಿದ್ಯಾರ್ಥಿ ವಸತಿ ನಿಲಯಗಳನ್ನು ನಿರ್ಮಿಸಲು ಜಾಗ ಮೀಸಲಿರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಗಂಗವಾಡಿ ಚಿಣ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ತಾಲೂಕಿನ ಜನರು ಬಹಳ ಕಷ್ಟಪಟ್ಟು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಜನರ ಋಣ ತೀರಿಸುವ ಸಲುವಾಗಿ ಇಷ್ಟೊಂದು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವುದಾಗಿ ಹೇಳಿದರು.

ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ರಸ್ತೆ ಚರಂಡಿ, ಕುಡಿವ ನೀರು ಸೇರಿದಂತೆ ಮೌಲ್ಯ ಸೌಕರ್ಯ ಕಲ್ಪಿಸಿಕೊಟ್ಟರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ. ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ರಸ್ತೆಗಳು ಹಾಳಾಗಿವೆ ಎಂದರು.

ಎಲ್ಲಾ ಹಳ್ಳಿಗಳಿಗೂ ದೀರ್ಘಕಾಲ ಬಾಳಿಕೆ ಬರುವಂತೆ ಗುಣಮಟ್ಟದ ರಸ್ತೆ ಮಾಡಿಸಿಕೊಡಬೇಕೆಂಬ ಉದ್ದೇಶ ನನ್ನದಾಗಿದೆ. ಆದರೆ, ಎಲ್ಲವನ್ನೂ ಒಂದೇ ವರ್ಷದಲ್ಲಿ ಮಾಡಲು ಸಾಧ್ಯವಿಲ್ಲ. ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಮುಂದಿನ ಎರಡು ವರ್ಷದೊಳಗೆ ಬಹುತೇಕ ಹಳ್ಳಿಗಳ ರಸ್ತೆ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಗಂಗವಾಡಿ ಚಿಣ್ಯ ರಸ್ತೆಯು ಹಲವು ವರ್ಷಗಳಿಂದ ಹಾಳಾಗಿ ಈ ಭಾಗದ ಜನರಿಗೆ ಮತ್ತು ವಾಹನ ಚಾಲಕರಿಗೆ ಬಹಳ ತೊಂದರೆಯಾಗಿದ್ದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯ 2 ಕೋಟಿ ರು. ವೆಚ್ಚದಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದ್ದೇನೆ. ಚಿಣ್ಯ ಸರ್ಕಲ್‌ನಲ್ಲಿ ಸೆಸ್ಕಾಂ ಶಾಖಾ ಕಚೇರಿ ಕಟ್ಟಡ ನಿರ್ಮಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ನಂತರ ತಾಲೂಕಿನ ನೆಲ್ಲಿಗೆರೆ ಗ್ರಾಮದಲ್ಲಿ ಆರೋಗ್ಯ ಉಪ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸಚಿವರು ಭೂಮಿಪೂಜೆ ನೆರವೇರಿಸಿದರು.

ಲೋಕೋಪಯೋಗಿ ಇಲಾಖೆ ಎಇಇ ಲಿಂಗರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಣ್ಯ ವೆಂಕಟೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ತಾಪಂ ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ, ಹೊಣಕೆರೆ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜು, ಮುಖಂಡರಾದ ಗಂಗವಾಡಿ ಅಶೋಕ್, ಸತೀಶ್ ಸೇರಿದಂತೆ ಹಲವರು ಇದ್ದರು.