ಸಿಎಂ ವಿರುದ್ಧ ಪ್ರಾಸಿಕ್ಯೂಷನ್ - ರಾಜ್ಯಪಾಲರೇ ತಪ್ಪಿತಸ್ಥರು: ಶಿಕ್ಷಣ ಸಚಿವ ಮಧು ಬಂಗಾರಪ್ಪ

| Published : Aug 31 2024, 01:43 AM IST / Updated: Aug 31 2024, 12:06 PM IST

ಸಿಎಂ ವಿರುದ್ಧ ಪ್ರಾಸಿಕ್ಯೂಷನ್ - ರಾಜ್ಯಪಾಲರೇ ತಪ್ಪಿತಸ್ಥರು: ಶಿಕ್ಷಣ ಸಚಿವ ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮತ್ತು ಜೆಡಿಎಸ್ ನಾಯಕರು ವ್ಯಾಪಾರದ ರಾಜಕಾರಣ ಮಾಡುತ್ತಿದ್ದಾರೆ. ಈ ಎರಡು ಪಕ್ಷಗಳ ಅಧಿಕಾರವಧಿಯಲ್ಲಿ ಈಗಾಗಲೇ ಶೇ.40 ಪರ್ಸೆಂಟ್ ಕಮಿಷನ್ ಗಿರಾಕಿಗಳೆಂದು ಖ್ಯಾತಿ ಹೊಂದಿದ್ದಾರೆ.  

 ಮದ್ದೂರು :  ಮುಡಾ ನಿವೇಶನ ಹಂಚಿಕೆ ಹಗರಣದ ಬಗ್ಗೆ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರೇ ತಪ್ಪಿತಸ್ಥರು ಹೊರತು ಸಿದ್ದರಾಮಯ್ಯನವರಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶುಕ್ರವಾರ ಗಂಭೀರ ಆರೋಪ ಮಾಡಿದರು.

ತಾಲೂಕಿನ ನಿಡಘಟ್ಟ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಯಾವುದೇ ಪಾತ್ರವಿಲ್ಲ. ಆದರೆ, ಈ ವಿಚಾರದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಮೂಲಕ ಕೇಂದ್ರ ಸರ್ಕಾರದ ಕೈ ಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಮತ್ತು ಜೆಡಿಎಸ್ ನಾಯಕರು ತಮ್ಮ ಸ್ವಾರ್ಥಕ್ಕಾಗಿ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸಂವಿಧಾನದ ಕಗ್ಗೊಲೆ ಮಾಡುತ್ತಿದ್ದಾರೆ. ಇದು ರಾಜ್ಯಪಾಲರು ರಾಜ್ಯದ ಜನರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಜರಿದರು.

ಬಿಜೆಪಿ ಮತ್ತು ಜೆಡಿಎಸ್ ನಾಯಕರು ವ್ಯಾಪಾರದ ರಾಜಕಾರಣ ಮಾಡುತ್ತಿದ್ದಾರೆ. ಈ ಎರಡು ಪಕ್ಷಗಳ ಅಧಿಕಾರವಧಿಯಲ್ಲಿ ಈಗಾಗಲೇ ಶೇ.40 ಪರ್ಸೆಂಟ್ ಕಮಿಷನ್ ಗಿರಾಕಿಗಳೆಂದು ಖ್ಯಾತಿ ಹೊಂದಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಬಡವರ ಸರ್ಕಾರವೆಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಸಹಿಸದ ವಿರೋಧ ಪಕ್ಷಗಳ ನಾಯಕರು ಹೊಟ್ಟೆಕಿಚ್ಚುಪಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮುಡ ಹಗರಣದ ಬಗ್ಗೆ ಮೈಸೂರಿನವರೆಗೆ ಪಾದಯಾತ್ರೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹಗರಣದ ಸಂಪೂರ್ಣ ಜಾತಕ ನನ್ನ ಬಳಿ ಇದೆ. ಆತ ಅವರ ತಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಹೆಸರಿನಲ್ಲಿ ಚೋಟಾ ಸಹಿ ಮಾಡಿ ಕೊನೆಗೆ ಹಗರಣದಲ್ಲಿ ಅವರ ತಂದೆಯನ್ನೇ ಸಿಲುಕಿಸುವ ಮೂಲಕ ಜೈಲಿಗೆ ಕಳುಹಿಸಿದ ಮಹಾನುಭಾವ ಎಂದು ಸಚಿವರು ಆರೋಪಿಸಿದರು.

ಶಾಸಕರಾದ ಕೆ.ಎಂ.ಉದಯ್, ಪಿ.ರವಿಕುಮಾರ್ ಇದ್ದರು.