ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಹು ಅಮೂಲ್ಯವಾದ ಜೀವರಕ್ಷಣೆ ಅವಶ್ಯವಾಗಿದ್ದು, ಪ್ರತಿಯೊಬ್ಬ ಬೈಕ್ ಸವಾರ ಹೆಲ್ಮೆಟ್ ಧರಿಸಿ, ಕಾರು ಚಾಲಕರು ಸೀಟ್ ಬೆಲ್ಟ್ ಕಡ್ಡಾಯವಾಗಿ ಬಳಸಬೇಕೆಂದು ಶಾಸಕ ಎಚ್.ವೈ. ಮೇಟಿ ಹೇಳಿದರು.ವಿದ್ಯಾಗಿರಿಯ ಕಾಲೇಜು ವೃತ್ತದಲ್ಲಿ ಆಯೋಜಿಸಿದ್ದ 10 ಪೊಲೀಸ್ ದ್ವಿಚಕ್ರ ವಾಹನ ಲೋಕಾರ್ಪಣೆ ಹಾಗೂ ಹೆಲ್ಮೆಟ್ ಕಡ್ಡಾಯ ಅಭಿಯಾನ ಪ್ರಯುಕ್ತ ಉಚಿತ ಹೆಲ್ಮೆಟ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ನಡೆದ ಬೈಕ್ ಅಪಘಾತದಲ್ಲಿ ಹೆಚ್ಚಿನ ಜನ ತೆಲೆಗೆ ಪೆಟ್ಟು ಬಿದ್ದು ಸಾವಿಗೀಡಾಗಿದ್ದಾರೆ. ಹೆಲ್ಮೆಟ್ ಬಳಸಿದ್ದರೆ ಜೀವಹಾನಿ ತಪ್ಪಿಸಬಹುದಿತ್ತು ಎಂದು ಹೇಳಿದರು.
ಹಿಂದೆ ಹೆಲ್ಮೆಟ್ ಕಡ್ಡಾಯ ಇಲ್ಲದ ಸಮಯದಲ್ಲಿ ಕೂಡ ಹೆಲ್ಮೆಟ್ ಇದ್ದಿದ್ದರಿಂದ ತಲೆ ಬಿಟ್ಟು ಉಳಿದೆಲ್ಲ ಕಡೆ ಗಾಯಗಳಾಗಿದ್ದನ್ನು ನಾನು ಮರೆತಿಲ್ಲ.ಕಾರಿನಲ್ಲಿ ಹೋಗುವಾಗ ಸೀಟ್ ಬೆಲ್ಟ್ ಧರಿಸದ ಕಾರಣ ಅಪಘಾತದಲ್ಲಿ ಗಾಯಗಳಾಗಿ 25 ದಿನಗಳವರೆಗೆ ಆಸ್ಪತ್ರೆಗೆ ದಾಖಲಾಗಿದ್ದರ ಬಗ್ಗೆ ನೆನಪಿಸಿಕೊಂಡರು. ಪ್ರತಿಯೊಬ್ಬ ಸವಾರನ ಹಿಂದೆ ಕುಟುಂಬ ಅವಲಂಬಿತವಾಗಿದ್ದು, ಅವಲಂಬಿತರ ರಕ್ಷಣೆ ನಿಮ್ಮದಾಗಿದ್ದು, ಜವಾಬ್ದಾರಿಯುತವಾಗಿ ಹಾಗೂ ಸುರಕ್ಷಿತವಾಗಿ ವಾಹನ ಚಲಾಯಿಸಿ ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ದೇಶದಲ್ಲಿ ಪ್ರತಿ ವರ್ಷ ₹ 1.60 ಲಕ್ಷಕ್ಕೂ ಅಧಿಕ ಜನರು ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ವರ್ಷಕ್ಕೆ 1200-1500ರವರೆಗೆ ಅಪಘಾತಗಳು ಸಂಭವಿಸುತ್ತಿದ್ದು, ಅದರಲ್ಲಿ ಕನಿಷ್ಟ 400 ಜನ ಸಾವಿಗೀಡಾಗುತ್ತಿದ್ದಾರೆ. ಈ 400 ಜನರಲ್ಲಿ 300 ಜನ ಹೆಲ್ಮೆಟ್ ಬಳಸದ್ದರಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಿದರು.
ಈ ಎಲ್ಲ ಪ್ರಕರಣ ಗಮನಿಸಿದಾಗ ನಾವು ನಿವೇಲ್ಲ ಈಗ ಸುರಕ್ಷಿತರಾಗಿದ್ದೇವೆ. ಆದರೆ ಹೆಲ್ಮೆಟ್ ಬಳಸದೆ ಅಪಘಾತಕ್ಕೊಳಗಾಗಿ ಮರಣ ಹೊಂದಿದ, ಅಂಗವೈಕಲ್ಯ ಹೊಂದಿದವರನ್ನು ಸಂಪರ್ಕಿಸಿದಾಗ ಅವರಿಂದ ಬರುವ ಮಾತು ನಾವು ಹೆಲ್ಮೆಟ್ ಬಳಸದೇ ಇದ್ದುದರಿಂದ ಈ ಅಪಘಾತ ಸಂಭವಿಸಿತು ಎಂದು ಹೇಳುತ್ತಾರೆ. ಸಮಯ ಮುಗಿದು ಹೋಗಿರುತ್ತದೆ. ಇದನ್ನೆಲ್ಲ ನೆನಪಿನಲ್ಲಿಟ್ಟುಕೊಂಡು ಪ್ರತಿಯೊಬ್ಬ ಬೈಕ್ ಸವಾರ ಹೆಲ್ಮೆಟ್, ಕಾರ್ ಸವಾರ ಸೀಟ್ ಬೆಲ್ಟ್ ಧರಿಸಿ ಚಲಾಯಿಸಲು ತಿಳಿಸಿದರು.ಮಾಧ್ಯಮದವರಿಗೆ ಹಾಗೂ ಸಾರ್ವಜನಿಕರಿಗೆ ಸಾಂಕೇತಿಕವಾಗಿ ಹೆಲ್ಮೆಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಹಾಂತೇಶ್ವರ ಜಿಡ್ಡಿ, ಡಿಎಸ್ಪಿಗಳಾದ ಪಂಪನಗೌಡ, ಪ್ರಭು ಪಾಟೀಲ ಇತರರು ಉಪಸ್ಥಿತರಿದ್ದರು.