ಸಾರಾಂಶ
- ಮೂರು ಬಾರಿ ಕೊಲೆಗೆ ಯತ್ನಿಸಿರುವ ಮುಬಾರಕ್ ಅಲಿ: ಪತ್ನಿ ಮುಸ್ಕಾನ್ ಬಾನು ಆರೋಪ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ವರದಕ್ಷಿಣೆಗಾಗಿ ದೈಹಿಕ, ಮಾನಸಿಕ ಕಿರುಕುಳ ಕೊಟ್ಟು, ತನ್ನ ಕೊಲೆಗೂ ಪ್ರಯತ್ನಿಸಿರುವ ಸರ್ಕಾರಿ ನೌಕರನಾದ ತನ್ನ ಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ, ತನಗೆ ಹಾಗೂ ಮಗನಿಗೆ ಜೀವನಾಂಶ ಕೊಡಿಸುವಂತೆ ಹೊನ್ನಾಳಿ ತಾಲೂಕು ಕುಂದೂರು ಗ್ರಾಮದ ಮುಸ್ಕಾನ್ ಬಾನು ಪೊಲೀಸ್ ಇಲಾಖೆಗೆ ಮನವಿ ಮಾಡಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ತಾಲೂಕು ಕಾಡಜ್ಜಿ ಗ್ರಾಮದ ಮುಬಾರಕ್ ಅಲಿ ಜತೆ ವಿವಾಹವಾದಿದೆ. ಜಗಳೂರು ಕೃಷಿ ಇಲಾಖೆ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದಾರೆ. ಆದರೆ, ಹೆಚ್ಚಿನ ವರದಕ್ಷಿಣೆ ತರಲು ಹಾಗೂ ತವರು ಮನೆ ಆಸ್ತಿಗಾಗಿ ಎಲ್ಲಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಮೂರು ಸಲ ನನ್ನ ಕೊಲೆಗೆ ಪ್ರಯತ್ನಿಸಿದ್ದಾರೆ. ತಾನು ಹಾಗೂ ತನ್ನ ಮಗ ಇಸ್ಮಾಯಿಲ್ ಜಬೀವುಲ್ಲಾಗೆ ನ್ಯಾಯ ಸಿಗಬೇಕು ಎಂದು ಅಳಲು ತೋಡಿಕೊಂಡರು.
ಮದುವೆ ವೇಳೆ ಮುಬಾರಕ್ ಅಲಿಗೆ ₹2.5 ಲಕ್ಷ ನಗದು ಹಾಗೂ 9 ತೊಲ ಚಿನ್ನಾಭರಣ ಕೊಟ್ಟು, ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಆರಂಭದ 3-4 ತಿಂಗಳಷ್ಟೇ ಚೆನ್ನಾಗಿದ್ದ ಅವರು, ನಂತರ ಹೆಚ್ಚಿನ ವರದಕ್ಷಿಣೆ ತರುವಂತೆ, ತವರು ಮನೆಯವರ ಸೈಟ್, ಕಣ ಬರೆದುಕೊಡುವಂತೆ ಕಿರುಕುಳ ನೀಡಲಾರಂಭಿಸಿದರು. ಸಾಕಷ್ಟು ಸಲ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎಂದರು.ಪತಿಯ ದೌರ್ಜನ್ಯ ಇಷ್ಟೇ ಅಲ್ಲ. ತನಗೆ ವಿಷ ಕುಡಿಸಿ ಕೊಲೆ ಮಾಡುವುದಕ್ಕೂ ಪ್ರಯತ್ನಿಸಿದ್ದಾರೆ. ಈ ವೇಳೆ ನನ್ನ ರಕ್ಷಣೆಗೆಂದು ಅಡ್ಡ ಬಂದ ಸ್ವಂತ ತಾಯಿ, ತಂಗಿ, ಮೈದುನನಿಗೂ ಪತಿ ಮುಬಾರಕ್ ಥಳಿಸಿ, ಮನೆಯಿಂದ ಹೊರಹಾಕಿದ್ದರು. ನನ್ನ ಅತ್ತೆ, ಮೈದುನ ರಾತ್ರೋರಾತ್ರಿ ನನಗೆ ತವರು ಮನೆಗೆ ತಂದುಬಿಟ್ಟಿದ್ದಾರೆ.
ಪತಿ ಮುಬಾರಕ್ ಅಲಿ ನನಗೆ, ಮಗನ ಜೀವಕ್ಕೆ ಯಾವುದೇ ಅಪಾಯ ಇಲ್ಲವೆಂಬುದನ್ನು ಖಾತ್ರಿಪಡಿಸಿದರೆ ಈಗಲೂ ಅವರ ಜೊತೆಗೆ ಜೀವನ ನಡೆಸಲು ಸಿದ್ಧಳಿದ್ದೇನೆ. ಆದರೆ, ಅಂತಹ ಪರಿಸ್ಥಿತಿಯಲ್ಲಿ ಪತಿ ಇಲ್ಲ. ನನ್ನ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾಗ, ನನ್ನ ಎಡಗೈನ 2 ಇಂಚಿಗೂ ಅಧಿಕ ಚಾಕುಬಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಪೊಲೀಸರಿಗೆ ದೂರು ನೀಡಿದರೆ, ಸರ್ಕಾರಿ ನೌಕರನೆಂಬ ಕಾರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿ, ನನಗೆ ಹಾಗೂ ಮಗನಿಗೆ ನ್ಯಾಯದ ಜೊತೆಗೆ ಜೀವನಾಂಶ ನೀಡಬೇಕು ಎಂದು ಮುಸ್ಕಾನ್ ಬಾನು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ಥೆ ಸಹೋದರ ಮಹಮ್ಮದ್ ಅತಾವುಲ್ಲಾ, ಮಹಮ್ಮದ್ ಸುಲೇಮಾನ್ ಇತರರು ಇದ್ದರು.
- - -ಕೋಟ್ ತನ್ನ ಪತಿ ಮುಬಾರಕ್ ಅಲಿ ಮೂರು ಸಲ ತಲಾಖ್ ಹೇಳಿ, ಈಗ ತಲಾಖ್ ನೀಡಿಯೇ ಇಲ್ಲವೆಂದು ಹೇಳುತ್ತಾರೆ. ನಮ್ಮ ಸಮಾಜದ ಹಿರಿಯರು, ಮುಖಂಡರು ಸಾಕಷ್ಟು ಸಲ ಪಂಚಾಯಿತಿ ಮಾಡಿ, ಬುದ್ಧಿ ಹೇಳಿದರೂ ಅವರು ತಿದ್ದಿಕೊಂಡಿಲ್ಲ. ನನ್ನ ಸಹೋದರ, ಕುಟುಂಬ ವರ್ಗಕ್ಕೂ ಬೆದರಿಕೆ ಕರೆ ಹಾಕಿದ್ದಾರೆ
- ಮುಸ್ಕಾನ್ ಬಾನು, ಸಂತ್ರಸ್ತ ಗೃಹಿಣಿ- - - -29ಕೆಡಿವಿಜಿ5.ಜೆಪಿಜಿ:
ಪತಿಯ ದೌರ್ಜನ್ಯ ವಿರುದ್ಧ ನ್ಯಾಯ ದೊರಕಿಸುವಂತೆ ದಾವಣಗೆರೆಯಲ್ಲಿ ಬುಧವಾರ ಹೊನ್ನಾಳಿ ತಾಲೂಕು ಕುಂದೂರು ಗ್ರಾಮದ ಮುಸ್ಕಾನ್ ಬಾನು ಸುದ್ದಿಗೋಷ್ಟಿಯಲ್ಲಿ ಅಳಲು ತೋಡಿಕೊಂಡರು.