ನಾಡಿನ ನದಿಗಳು ಕೆರೆಗಳು ಮನುಕುಲದ ಉಳಿವಿಗೆ ಬೇಕೇ ಬೇಕು. ಇವುಗಳ ಜಲಾನಯನ ಪ್ರದೇಶ ಸಹ್ಯಾದ್ರಿ ಉಳಿವಿಗೆ ನಿರಂತರ ಎಚ್ಚರ ಬೇಕು.
ಶಿರಸಿ: ಇತ್ತೀಚೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ಅಧ್ಯಯನ ಕೇಂದ್ರದ ಚೌಗು ಭೂಮಿ ಅಧ್ಯಯನ ಸಂಸ್ಥೆ ಹಾಗೂ ಚಾಣಕ್ಯ ವಿಶ್ವವಿದ್ಯಾಲಯ ಬೆಂಗಳೂರು ಇವರ ಆಶ್ರಯದಲ್ಲಿ ವೃಕ್ಷ ಲಕ್ಷ ಆಂದೋಲನ ಸೇರಿದಂತೆ ಹಲವು ಪರಿಸರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಕೆರೆ ಸಮ್ಮೇಳನ ಇತ್ತೀಚೆಗೆ ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ಭಾರತೀ ಸಭಾಂಗಣದಲ್ಲಿ ನಡೆಯಿತು.ಉದ್ಘಾಟನಾ ಸಮಾರಂಭದ ಆರಂಭದಲ್ಲಿ ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ವಿಡಿಯೋ ಸಂದೇಶ ನೀಡಿದರು. ನಾಡಿನ ನದಿಗಳು ಕೆರೆಗಳು ಮನುಕುಲದ ಉಳಿವಿಗೆ ಬೇಕೇ ಬೇಕು. ಇವುಗಳ ಜಲಾನಯನ ಪ್ರದೇಶ ಸಹ್ಯಾದ್ರಿ ಉಳಿವಿಗೆ ನಿರಂತರ ಎಚ್ಚರ ಬೇಕು. ನದಿಗಳ ಸಹಜ ಹರಿವು ತಡೆದು ದಿಕ್ಕು ತಿರುಗಿಸುವ ವಿನಾಶಕಾರಿ, ಯೋಜನೆಗಳ ಬಗ್ಗೆ ಪುನರಿಮರ್ಶೆ ಆಗಲಿ ಎಂದು ಕೆರೆ ಸಮ್ಮೇಳನಕ್ಕೆ ಸ್ವಾಮೀಜಿ ಶುಭ ಹಾರೈಸಿದರು.ಸಮಾರಂಭದ ಮುಖ್ಯ ಅತಿಥಿಗಳಾಗಿ ಜೀವವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಚಾಣಕ್ಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಯಶವಂತ್ ಡೋಂಗ್ರೆ, ವಿಜ್ಞಾನಿಗಳಾದ ಡಾ. ಟಿ.ವಿ. ರಾಮಚಂದ್ರ ಡಾ. ಸುಭಾಸ್ ಚಂದ್ರನ್, ಆಳ್ವಾ ಶಿಕ್ಷಣ ಸಂಸ್ಥೆಯ ವಿವೇಕ ಆಳ್ವಾ, ಸ್ವಾಗತ ಸಮೀತಿ ಅಧ್ಯಕ್ಷ ಪ್ರೊ. ಶ್ರೀಷ್ ಚಿಕ್ಕೋಡಿ ಭಾಗವಹಿಸಿದ್ದರು.ದೇಶದ ಹಲವು ವಿಶ್ವವಿದ್ಯಾಲಯಗಳ ಸಂಶೋಧಕರು ಕೆರೆ ನದಿ ಜಲಮೂಲಗಳು ಸೂಕ್ಷ್ಮ ಅರಣ್ಯಗಳಪರಿಸ್ಥಿತಿ ಬಗ್ಗೆ ಅಧ್ಯಯನ ವರದಿ ಮಂಡಿಸಿದರು ಸುದೀರ್ಘ ಚರ್ಚೆ ಗೋಷ್ಠಿಗಳ ಮುಕ್ತಾಯದಲ್ಲಿ ಸಮಾರೋಪದಲ್ಲಿ ಸಂಚಾಲಕ ಡಾ,ಭರತ್ ನಿರ್ಣಯಗಳನ್ನು ಮಂಡಿಸಿದರು.ಸಮಾರೋಪದಲ್ಲಿ ನಟ ಸುರೇಶ ಹೆಬ್ಳಿಕರ, ಡಾ. ಟಿ.ವಿ. ರಾಮಚಂದ್ರ, ಮುಂಬೈ ಐಐಟಿಯ ಡಾ. ಆಶೋಕ ಮಿಶ್ರಾ, ಪ್ರೊ. ಎಲ್.ಎಂ. ಅರುಣ್, ಗುಲ್ಬರ್ಗಾ ಕೇಂದ್ರಿಯ ವಿಶ್ವವಿದ್ಯಾಲಯದ ಡಾ. ಅಮೀನಾ, ಪಂಜಾಬ್ ವಿಶ್ವ ವಿದ್ಯಾಲಯದ ಡಾ. ಹರ್ಷಿತ ಕೌರ್ ಪಾಲ್ಗೊಂಡಿದ್ದರು.ನಿರ್ಣಯಗಳು: ದೇಶದ ಚೌಗು ಪ್ರದೇಶಗಳು ಬಹು ಸೂಕ್ಷ್ಮ ಪರಿಸರ ಪರಿಸ್ಥಿತಿ ಹೊಂದಿವೆ. ಇವುಗಳ ಸಂರಕ್ಷಣೆಗೆ ಕೇಂದ್ರ- ರಾಜ್ಯ ಸರ್ಕಾರಗಳು ವಿಶೇಷ ಸಂರಕ್ಷಣಾ ಯೋಜನೆ ಪ್ರಕಟಿಸಬೇಕು.ಕೆರೆಗಳ ಜಲಾನಯನ ಪ್ರದೇಶಗಳಾದ ದೇವರಕಾಡು, ಬೆಟ್ಟ, ಕಾನು ಮುಂತಾದ ಗ್ರಾಮ ಸಾಮೂಹಿಕ ಭೂಮಿಗಳು ಅತಿಕ್ರಮಣ ಆಗದಂತೆ ಕಟ್ಟೆಚ್ಚರ ಅವಶ್ಯವಾಗಿದೆ ಎಂದು ಸಮ್ಮೇಳನ ಅಭಿಪ್ರಾಯ ಪಟ್ಟಿದೆ.ನಂದಿ ಬೆಟ್ಟದಲ್ಲಿ ವಿನಾಶಕಾರಿ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಇಲಾಖೆ ತಡೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.