ಧರ್ಮವನ್ನು ಕಾಪಾಡಿ, ಅದು ನಮ್ಮನ್ನು ಕಾಪಾಡುತ್ತದೆ

| Published : Jul 19 2025, 02:00 AM IST

ಸಾರಾಂಶ

ಪ್ರತಿಯೊಬ್ಬರೂ ಧರ್ಮವನ್ನು ಪಾಲನೆ ಮಾಡಬೇಕು. ಧರ್ಮವನ್ನು ನಾವು ರಕ್ಷಣೆ ಮಾಡಿದರೆ, ಧರ್ಮವು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಹನುಮಂತನಾಥಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ಶಿರಾ ಪ್ರತಿಯೊಬ್ಬರೂ ಧರ್ಮವನ್ನು ಪಾಲನೆ ಮಾಡಬೇಕು. ಧರ್ಮವನ್ನು ನಾವು ರಕ್ಷಣೆ ಮಾಡಿದರೆ, ಧರ್ಮವು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀಹನುಮಂತನಾಥಸ್ವಾಮೀಜಿ ನುಡಿದರು.ಅವರು ತಾಲೂಕಿನ ಹುಲಿಕುಂಟೆ ಹೋಬಳಿಯ ನೇಜಂತಿ ಗ್ರಾಮದ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ನಡೆದ ದ್ವಾರಬಾಗಿಲು ಲೋಕಾರ್ಪಣೆ, ಏಕಾದಶಿ ಹಬ್ಬ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಶ್ರೀರಂಗನಾಥಸ್ವಾಮಿಯ ಯಾವುದೇ ಕಾರ್ಯಕ್ರಮ ಮಾಡಿಕೊಂಡರೂ ಸರಿ ನಮ್ಮ ಶ್ರೀಮಠದಿಂದ ೧೦೦ ಚೀಲ ಸಿಮೆಂಟ್, ೨೫ ಸಾವಿರ ರು.ಆರ್ಥಿಕ ನೆರವನ್ನು ನೀಡುತ್ತೇನೆ. ದೇವಸ್ಥಾನದ ಆಸ್ತಿ ೧೫ ಎಕರೆ ಇದ್ದು ಮುಂದೆ ಇದೊಂದು ಯಾತ್ರಿ ನಿವಾಸವಾಗಲಿದೆ. ಇಲ್ಲಿ ಒಂದು ಸಮುದಾಯ ಭವನ ನಿರ್ಮಾಣ ಮಾಡಿಕೊಂಡರೆ ಸಣ್ಣ, ಪುಟ್ಟ ಕಾರ್ಯಕ್ರಮ ಮಾಡಿಕೊಳ್ಳಲು ಸಹಾಯವಾಗಲಿದೆ. ನಾನು ಪ್ರಚಾರಕ್ಕೆ ಬಂದವನಲ್ಲ. ನಮ್ಮ ಕುಂಚಿಟಿಗರ ೪೮ ಕುಲಗಳ ದೇವಸ್ಥಾನಗಳು ಸುಣ್ಣ, ಬಣ್ಣ ಕಾಣುವಂತಹ ಕೆಲಸ ಆಗಬೇಕೆಂಬ ಅಭಿಲಾಷೆ ಇದೆ. ಈಗಾಗಲೇ ೨೭ ದೇವಸ್ಥಾನಗಳು ಜೀರ್ಣೋದ್ದಾರವಾಗಿವೆ. ನನ್ನ ಜೀವಿತಾವಧಿಯಲ್ಲಿ ಎಲ್ಲಾ ದೇವಸ್ಥಾನಗಳು ಸುಣ್ಣ, ಬಣ್ಣ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದರು. ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ ಗ್ರಾಮ ಚಿಕ್ಕದಾದರೂ ಸಹ ಶ್ರೀರಂಗನಾಥಸ್ವಾಮಿಯ ದೇವತಾ ಕಾರ್ಯಕ್ರಮಕ್ಕೆ ಜಾತ್ಯತೀತವಾಗಿ ಸಾವಿರಾರು ಭಕ್ತರ ಸಮಾಗಮನದಲ್ಲಿ ಯಶಸ್ಸು ಕಂಡಿದೆ. ಗ್ರಾಮದಲ್ಲಿ ಒಂದು ಹಾಲಿನ ಡೈರಿ ಮಾಡಬೇಕೆಂದು ನನ್ನ ಮೇಲೆ ಜನರ ಒತ್ತಡವಿದೆ. ಗ್ರಾಮದ ಎಲ್ಲರ ಸಹಕಾರವಿದ್ದರೆ ಸಹಕಾರ ಸಂಘವನ್ನು ಸ್ಥಾಪಿಸಲು ಪ್ರಯತ್ನಿಸುತ್ತೇನೆಂದು ಭರವಸೆ ನೀಡಿದರು. ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಸತ್ಯಪ್ರಕಾಶ್ ಮಾತನಾಡಿ, ಎಲ್ಲಾ ಮುಖಂಡರೂ ಸೇರಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಇಂದಿನ ಈ ಧಾರ್ಮಿಕ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಿದ ಯುವ ಮುಖಂಡ ಅಭಿಲಾಷ್‌ ಗೌಡರಿಗೆ ಶ್ರೀರಂಗನಾಥಸ್ವಾಮಿ ಇನ್ನಷ್ಟು ಧಾರ್ಮಿಕ ಕಾರ್ಯಕ್ರಮ ಮಾಡುವ ಚೈತನ್ಯ ನೀಡಲೆಂದು ಆಶಿಸಿದರು.ಜೆಡಿಎಸ್ ಮುಖಂಡ ಆರ್.ಉಗ್ರೇಶ್, ಸಮಾಜ ಸೇವಕ ಕಲ್ಕೆರೆ ರವಿಕುಮಾರ್ ಮಾತನಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಮುದುಮಡು ರಂಗಶ್ಯಾಮಯ್ಯ, ಹಂಜಿನಾಳು ರಾಜಣ್ಣ, ತಾಲೂಕು ಜೆಡಿಎಸ್ ಯುವ ಮುಖಂಡ ಗೋಪಿಕುಂಟೆ ಪುನೀತ್‌ಗೌಡ, ಅಭಿಲಾಷ್‌ ಗೌಡ, ಎಸ್.ರಾಮಕೃಷ್ಣಪ್ಪ, ನಗರ ಸಭೆ ಸದಸ್ಯ ರಾಮು, ಕೃಷ್ಣೇಗೌಡ, ಪರಮೇಶ್‌ಗೌಡ, ಉದಯ ಶಂಕರ್, ಶಿಕ್ಷಕ ರಾಮಣ್ಣ, ನಿಡಗಟ್ಟೆ ಚಂದ್ರಶೇಖರ್, ರಂಗಸ್ವಾಮಿ ಗೌಡ, ಟಿ.ಡಿ.ನರಸಿಂಹ ಮೂರ್ತಿ, ಮುದ್ದು ಗಣೇಶ್ ಸೇರಿದಂತೆ ಹಲವರು ಹಾಜರಿದ್ದರು.