ಅತಿವೃಷ್ಟಿ, ಅನಾವೃಷ್ಟಿ ತಡೆಯಲು ಪರಿಸರ ಸಂರಕ್ಷಿಸಿ
KannadaprabhaNewsNetwork | Published : Oct 10 2023, 01:01 AM IST
ಅತಿವೃಷ್ಟಿ, ಅನಾವೃಷ್ಟಿ ತಡೆಯಲು ಪರಿಸರ ಸಂರಕ್ಷಿಸಿ
ಸಾರಾಂಶ
ಅತಿವೃಷ್ಟಿ, ಅನಾವೃಷ್ಟಿ ತಡೆಯಲು ಪರಿಸರ ಸಂರಕ್ಷಿಸಿ
- ವಿದ್ಯಾರ್ಥಿಗಳಿಗೆ ಸಂಸದೆ ಸುಮಲತಾ ಕರೆ ಕನ್ನಡಪ್ರಭ ವಾರ್ತೆ ಮಳವಳ್ಳಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮಾಡುವ ಮೂಲಕ ಭವಿಷ್ಯದಲ್ಲಿ ಎದುರಾಗುವ ಅತಿವೃಷ್ಟಿ, ಅನಾವೃಷ್ಟಿಯನ್ನು ತಡೆಯಲು ಮುಂದಾಗಬೇಕು ಎಂದು ಸಂಸದೆ ಸುಮಲತಾ ಕರೆ ನೀಡಿದರು. ಪಟ್ಟಣದ ಶಾಂತಿ ಕಾಲೇಜಿನಲ್ಲಿ ಸಂಸದರ ನಿಧಿ ಯೋಜನೆಯಡಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಭವಿಷ್ಯದಲ್ಲಿ ಎದುರಾಗುವಬರವನ್ನು ಹೋಗಲಾಡಿಸಲು ವಿದ್ಯಾರ್ಥಿಗಳು ಇಂದಿನಿಂದಲೇ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಶ್ರದ್ಧೆ ವಹಿಸಬೇಕಿದೆ ಎಂದರು. ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಬೇಕೆನ್ನುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಸ್ವಚ್ಛತೆಗೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳು ಕೆರೆ, ಕಲ್ಯಾಣಿಗಳು ಸೇರಿದಂತೆ ಸುತ್ತ ಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಲು ಮುಂದಾಗಬೇಕು ಎಂದರು. ನಾಲ್ಕು ವರ್ಷದ ರಾಜಕೀಯ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಬೇಕಾಯಿತು. ಆದರೂ ಅಂಬರೀಷ್ ಹಾಕಿಕೊಟ್ಟ ಹಾದಿಯಲ್ಲಿಯೇ ಇಂದಿಗೂ ನಡೆಯುತ್ತಿದ್ದೇನೆ. ಜಿಲ್ಲೆಯ ಜನರ ಅಭಿಮಾನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ವಿವರಿಸಿದರು. ಡಾ.ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ದಡದಪುರ ಶಿವಣ್ಣ ಮಾತನಾಡಿ, ಜಿಲ್ಲೆಯಲ್ಲಿ ಶಂಕರೇಗೌಡ, ಮಾದೇಗೌಡ, ನಾಗೇಗೌಡರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದರಿಂದ ಅವರ ಹೆಸರು ಶಾಶ್ವತವಾಗಿ ಉಳಿಯುವಂತಾಗಿದೆ. ಶಿಕ್ಷಣ ಸಂಸ್ಥೆಗಳ ಸ್ಥಾಪನೆಯಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗುತ್ತಿದೆ ಎಂದರು. ಸಂಸದೆ ಸುಮಲತಾ ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅತ್ಯೂತ್ತಮ ನಟಿ ಆಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಸಂಸದರಿಗೆ ಪದ್ಮಭೂಷಣ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಿದರು. ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಪಡೆದಿರುವ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು ಹಾಗೂ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಸಂಸತ್‌ನಲ್ಲಿ ಚರ್ಚಿಸಿ ಅನುಮತಿ ಕೊಡಿಸಬೇಕು ಎಂದು ಕೋರಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದಾರೆ. ಇದರಿಂದ ನಾಡಿನ ಜನತೆಗೆ ಅನುಕೂಲವಾಗಿದೆ. ತಾನು ಕೂಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಬಸ್‌ಪಾಸ್ ವಿತರಣ, ಪ್ರತಿಭಾ ಪುರಸ್ಕಾರ ಸೇರಿದಂತೆ ಹಲವಾರು ಸೌಲಭ್ಯಗಳನ್ನು ನೀಡಿದ್ದೇನೆಂದು ತಿಳಿಸಿದರು. ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಶಾಂತಿ ಕಾಲೇಜು ಪ್ರಾಂಶುಪಾಲ ಶಿವಪ್ಪ ಸಂಸದರಿಗೆ ಮನವಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಹಾಗೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ನಾಗಮಣಿ ನಾಗೇಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಹಸೀಲ್ದಾರ್ ಕೆ.ಎನ್ ಲೊಕೇಶ್, ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿಗಳಾದ ಎಂ.ಎಚ್ ಕೆಂಪಯ್ಯ, ಪುಟ್ಟರಾಜು, ಮುಖಂಡರಾದ ಯಮದೂರು ಸಿದ್ದರಾಜು, ಬೆಲೂರು ಸೋಮಶೇಖರ್, ಚಿನ್ನಾಳು ಸೇರಿದಂತೆ ಇತರರು ಇದ್ದರು. 9ಕೆಎಂಎನ್ ಡಿ24 ಮಳವಳ್ಳಿ ಶಾಂತಿ ಕಾಲೇಜಿನಲ್ಲಿ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸಂಸ್ಥೆ ಅಧ್ಯಕ್ಷೆ ನಾಗಮಣಿ ನಾಗೇಗೌಡ, ಕಾಲೇಜು ಪ್ರಾಂಶುಪಾಲ ಶಿವಪ್ಪ ಸಂಸದೆ ಸುಮಲತಾಗೆ ಮನವಿ ಸಲ್ಲಿಸಿದರು.