ಸಾರಾಂಶ
- ಬಾಂಗ್ಲಾ ಹಿಂಸಾಚಾರ ಘಟನೆ ವಿರುದ್ಧ ಪ್ರತಿಭಟನೆಯಲ್ಲಿ ಅವಧೂತ ಚಂದ್ರಹಾಸ ಒತ್ತಾಯ
- ಇಸ್ಕಾನ್ ಸಂತ ಚಿನ್ಮಯ ಕೃಷ್ಣದಾಸ ಬಿಡುಗಡೆಗೆ ಒತ್ತಾಯಿಸಿ ರಸ್ತೆ ತಡೆ, ಸರ್ಕಾರಕ್ಕೆ ಮನವಿ - - - ಕನ್ನಡಪ್ರಭ ವಾರ್ತೆ ದಾವಣಗೆರೆಬಾಂಗ್ಲಾ ದೇಶದಲ್ಲಿ ಹಿಂಸಾಚಾರ ಉಂಟಾಗಿದ್ದು, ಅಲ್ಲಿನ ಅಲ್ಪಸಂಖ್ಯಾತ ಹಿಂದು ಸಮುದಾಯಕ್ಕೆ ರಕ್ಷಣೆ ನೀಡಬೇಕು, ಮತಾಂಧರಿಂದ ನಾಶಗೊಂಡ ಹಿಂದುಗಳ ಮನೆ, ಮಂದಿರಗಳನ್ನು ಪುನಃ ನಿರ್ಮಿಸಲು ಬಾಂಗ್ಲಾ ಸರ್ಕಾರದ ಮೇಲೆ ಭಾರತ ಸೇರಿದಂತೆ ವಿಶ್ವ ಸಮುದಾಯಗಳು ಒತ್ತಡ ಹೇರುವಂತೆ ಒತ್ತಾಯಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಹಳೇ ಪಿ.ಬಿ. ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟಿಸಲಾಯಿತು.
ನಗರದ ಶ್ರೀ ಜಯದೇವ ವೃತ್ತದ ಬಳಿ ಬಾಂಗ್ಲಾ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾ, ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ, ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.ದಾವಣಗೆರೆಯ ಇಸ್ಕಾನ್ ದೇವಾಲಯದ ಮುಖ್ಯಸ್ಥ ಅವಧೂತ ಚಂದ್ರಹಾಸ ಅವರು ಮಾತನಾಡಿ, ಬಾಂಗ್ಲಾ ದೇಶದ ಹಿಂದುಗಳ ರಕ್ಷಣೆ, ಸುರಕ್ಷತೆಗಾಗಿ, ಅಲ್ಲಿ ಮಾನವ ಹಕ್ಕುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಬೇಕಿರುವುದು ವಿಶ್ವ ಸಮುದಾಯಗಳ ಜವಾಬ್ದಾರಿ. ವಿಶ್ವಾದ್ಯಂತ ಕಿರುಕುಳಕ್ಕೆ ಒಳಗಾದ ವಲಸಿಗರಿಗೆ ಭಾರತವು ಆಶ್ರಯ ಕಲ್ಪಿಸಿ, ಸಹಾಯ ಮಾಡಿಕೊಂಡು ಬಂದ ದೇಶ. ಈಗ ಬಾಂಗ್ಲಾದಲ್ಲಿ ಹಿಂದುಗಳೇ ಸಂಕಷ್ಟ ಎದುರಿಸುವಂತಾಗಿದೆ. ಅವರ ರಕ್ಷಣೆಗಾಗಿ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು ಎಂದರು.
ಹಿಂದುಗಳ ಮೇಲಿನ ಹಲ್ಲೆ ನಿಲ್ಲದಿದ್ದರೆ ಕೇಂದ್ರ ಸರ್ಕಾರವು ಬಾಂಗ್ಲಾ ದೇಶಕ್ಕೆ ನಮ್ಮ ಸೈನಿಕರನ್ನು ನುಗ್ಗಿಸಿ, ರಕ್ಷಣೆ ನೀಡಲಿ. ಬಾಂಗ್ಲಾ ಹಿಂದುಗಳ ಮೇಲೆ ಹಲ್ಲೆ, ದೌರ್ಜನ್ಯ, ಶೋಷಣೆ ತಡೆಯಬೇಕು. ಹಿಂದುಗಳ ಮನೆಗಳು, ದೇವಸ್ಥಾನ, ಮಠಗಳನ್ನು ಪುನಃ ನಿರ್ಮಿಸಬೇಕು. ಅಲ್ಲದೇ, ಬಂಧಿತ ಇಸ್ಕಾನ್ ಸಂತ ಚಿನ್ಮಯ ಕೃಷ್ಣದಾಸ್ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಕೃಷ್ಣದಾಸರ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಮತಾಂಧರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.ಹಿಂದೂ ರಕ್ಷಣಾ ವೇದಿಕೆ ಸಂಚಾಲಕ ಸತೀಶ ಪೂಜಾರಿ ಮಾತನಾಡಿ, ಬಾಂಗ್ಲಾ ಘಟನೆಗಳು ನಮ್ಮ ದೇಶದಲ್ಲಿ ಆಗಬಾರದು. ಅಂತಹ ಅರಾಜಕತೆ ಭಾರತದಲ್ಲಿ ಆಗಬಾರದೆಂದರೆ ದೇಶದೊಳಗೆ ನುಸುಳಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಮೊದಲು ಇಲ್ಲಿಂದ ಒದ್ದು, ಹೊರಗಟ್ಟಬೇಕು ಎಂದರು.
ಹಿಂಜಾವೇ ಮುಖಂಡ, ಮಾಜಿ ಮೇಯರ್ ಎಸ್.ಟಿ.ವೀರೇಶ ಮಾತನಾಡಿ, ಬಾಂಗ್ಲಾ ಸರ್ಕಾರವು ಪ್ರಜಾಪ್ರಭುತ್ವ ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳ ರಕ್ಷಣೆಗೆ ತಕ್ಷಣವೇ ಕಾರ್ಯ ಪ್ರವೃತ್ತರಾಗಬೇಕು. ಹಿಂದುಗಳ ಮೇಲೆ ದಾಖಲಿಸಿರುವ ಸುಳ್ಳು ಕೇಸ್‌ಗಳನ್ನು ಹಿಂಪಡೆಯಬೇಕು. ಪ್ರಧಾನಿ ಮೋದಿ ತಕ್ಷಣವೇ ಹಿಂದುಗಳ ರಕ್ಷಣೆಗೆ ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಬೇಕು. ವಿಶ್ವ ಸಮುದಾಯಗಳೂ ಬಾಂಗ್ಲಾ ದೇಶದ ಸರ್ಕಾರಕ್ಕೆ ಬುದ್ಧಿ ಹೇಳುವ ಮೂಲಕ ಅಲ್ಲಿನ ಅಲ್ಪಸಂಖ್ಯಾತ ಹಿಂದುಗಳ ರಕ್ಷಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಕೆ.ಬಿ. ಶಂಕರ ನಾರಾಯಣ, ಎಸ್.ಎಂ. ವೀರೇಶ ಹನಗವಾಡಿ, ದೂಡಾ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ, ಪಿ.ಸಿ. ಶ್ರೀನಿವಾಸ ಭಟ್, ಪಾಲಿಕೆ ಸದಸ್ಯರಾದ ಆರ್.ಶಿವಾನಂದ, ಆರ್.ಎಲ್. ಶಿವಪ್ರಕಾಶ, ಶಿವನಗೌಡ ಟಿ.ಪಾಟೀಲ, ಶಂಕರಗೌಡ ಬಿರಾದಾರ್, ಟಿ.ಆರ್. ಕೃಷ್ಣಪ್ಪ, ರಾಜು, ವಕೀಲರಾದ ಉಚ್ಚಂಗಿದುರ್ಗ ಬಸವರಾಜ, ಕಾಕನೂರು ಮಂಜಪ್ಪ, ಟಿಂಕರ್ ಮಂಜಣ್ಣ, ಭಾಗ್ಯ ಪಿಸಾಳೆ, ಸವಿತಾ ರವಿಕುಮಾರ ಸೇರಿದಂತೆ ಹಿಂದುಗಳು, ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ಇಸ್ಕಾನ್ ಭಕ್ತರು ಪ್ರತಿಭಟನೆಯಲ್ಲಿ ಇದ್ದರು.
- - - -(ಫೋಟೋ ಇದೆ)