ಸಾರಾಂಶ
- ಹೊನ್ನಾಳಿಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಯಿ ಮಗುವಿಗೆ ಜನ್ಮ ನೀಡಿದರೆ, ಆ ಮಗುವಿನ ಜೀವಮಾನದ ಭವಿಷ್ಯ ರೂಪಿಸುವ ಅಗಾಧ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಇಂತಹ ಗುರುಗಳ ಸ್ಥಾನದ ಪಾವಿತ್ರ್ಯತೆಯನ್ನು ಎಲ್ಲ ಶಿಕ್ಷಕರೂ ಕಾಪಾಡುತ್ತ, ಗುಣಮಟ್ಟದ ಸೇವೆ ಸಲ್ಲಿಸಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ಪಟ್ಟಣದ ಶ್ರೀ ಚನ್ನಪ್ಪಸ್ವಾಮಿ ಸಮುದಾಯ ಭವನದಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ 137ನೇ ಜನ್ಮದಿನಾಚರಣೆ ಹಾಗೂ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ 94ನೇ ಜಯಂತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ದೇಶದಲ್ಲಿ ವಿಪರೀತ ಅನಕ್ಷರತೆ, ಬಡತನ, ತುಂಬಿದ್ದವು ಇದನ್ನೆಲ್ಲಾ ಕ್ರಮೇಣ ಹೊಡೆದೊಡಿಸಿ ಇಂದು ಜಗತ್ತಿನ ಎಲ್ಲ ರಾಷ್ಟ್ರಗಳು ಭಾರತದ ಕಡೆಗೆ ನೋಡುವಂತಾಗಿರುವುದು ಈ ದೇಶದಲ್ಲಾದ ಶಿಕ್ಷಣ ಕ್ಷೇತ್ರದ ಕ್ಷಿಪ್ರ ಕಾಂತಿಯಿಂದ. ಇದರ ಕೀರ್ತಿ ದೇಶದ ಶಿಕ್ಷಕ ಸಮುದಾಯಕ್ಕೆ ಸಲ್ಲಬೇಕು. ಬಡತನ, ಹೋಗಲಾಡಿಸಿ ಅಭಿವೃದ್ಧಿ ಸಾಧಿಸಲು ಶೈಕ್ಷಣಿಕ ಕ್ಷೇತ್ರ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.ಅಂದು ಶಿಕ್ಷಣ ಮಂತ್ರಿಯಾಗಿದ್ದ ದಿವಂಗತ ಗೋವಿಂದೇಗೌಡ ಅವರು ಪಾರದರ್ಶಕವಾಗಿ ಶಿಕ್ಷಕ ನೇಮಕಾತಿ ನೆಡಸುವ ಮೂಲಕ ಶಿಕ್ಷಣ ಇಲಾಖೆ ಅಭಿವೃದ್ದಿಗೆ ಅನುಪಮ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 1972ರಲ್ಲಿ ಲಿಂಗೈಕ್ಯ ಗುರುಗಳಾದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಹೊನ್ನಾಳಿ ಹಿರೇಕಲ್ಮಠದಲ್ಲಿ 1972ರಲ್ಲಿ ಪ್ರಥಮವಾಗಿ ಪೀಠಾಧ್ಯರಾಗಿ ಬಂದ ಸಂದರ್ಭ ಹೊನ್ನಾಳಿ ಶಿಕ್ಷಣ ವ್ಯವಸ್ಥೆ ಹಲವು ಕೊರತೆಗಳಿಂದ ಬಳಲುತ್ತಿತ್ತು. ಇಲ್ಲಿನ ಪರಿಸ್ಥಿತಿ ಕಂಡು ಸ್ವಾಮೀಜಿಯವರು ಅನೇಕ ಶಾಲಾ- ಕಾಲೇಜುಗಳನ್ನು ತೆರೆದು ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು ಎಂದರು.ಹರಪನಹಳ್ಳಿ ಟಿ.ಎಂ.ಎ.ಇ. ಶಿಕ್ಷಣ ಸಂಸ್ಥೆ ನಿವೃತ್ತ ಪ್ರಾಂಶುಪಾಲ ಎಂ. ತಿಮ್ಮಪ್ಪ ಉಪನ್ಯಾಸ ನೀಡಿದರು. ಉಪವಿಭಾಗಾಧಿಕಾರಿ ಅಭಿಷೇಕ್, ಪುರಸಭೆ ಅಧ್ಯಕ್ಷ ಮೈಲಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ್ , ಸಾವಿತ್ರಿ ಬಾಯಿ ಫುಲೆ ಸಂಘದ ಷಹಜಾನ್ ಸೇರಿದಂತೆ ಹೊನ್ನಾಳಿ, ನ್ಯಾಮತಿ ತಾಲೂಕುಗಳ ಶಿಕ್ಷಕರ ವಿವಿಧ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಭಾಗವಹಿಸಿದ್ದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿ ಬಾಯಿ ಪುಲೆ ಭಾವಚಿತ್ರದೊಂದಿಗೆ ಬಿಇಒ ಕಚೇರಿಯಿಂದ ಸಾರೋಟಿನಲ್ಲಿ ವಿವಿಧ ವಾದ್ಯಗಳೊಂದಿಗೆ ಹಿರೇಕಲ್ಮಠದವರೆಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ನಿವೃತ್ತ ಶಿಕ್ಷಕರಿಗೆ ಹಾಗೂ ಸೇವಾವಧಿಯಲ್ಲಿ ನಿಧನರಾದ ಶಿಕ್ಷಕರ ಕುಟುಂಬದವರಿಗೆ ಸನ್ಮಾನಿಸಿ ಗೌರವಿಸಲಾಯಿತು.- - -
(ಬಾಕ್ಸ್) * ಶೀಘ್ರದಲ್ಲೇ 55 ಶಿಕ್ಷಕ ಹುದ್ದೆಗಳು ಇಳಿಕೆ: ಬಿಇಒ ಬೇಸರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ 2022ರಲ್ಲಿ 939 ಇದ್ದ ಶಿಕ್ಷಕ ಹುದ್ದೆಗಳು ಇಂದು 778ಕ್ಕೆ ಇಳಿದಿವೆ. ಕೆಲವೇ ದಿನಗಳಲ್ಲಿ ಇನ್ನೂ 55 ಹುದ್ದೆಗಳು ಕಡಿಮೆಯಾಗಲಿವೆ. ಸುಮಾರು 31 ಸಾವಿರ ಇದ್ದ ಮಕ್ಕಳ ಸಂಖ್ಯೆ ಒಂದೇ ವರ್ಷದಲ್ಲಿ 28 ಸಾವಿಕ್ಕೆ ಇಳಿದಿದೆ. ಸರ್ಕಾರಿ ಪ್ರೌಢಶಾಲೆಗಳಲ್ಲಿದ್ದ 281 ಹುದ್ದೆಗಳು ಇಂದು 245ಕ್ಕೆ ಇಳಿಕೆಯಾಗಿವೆ. ಅನುದಾನಿತ ಶಾಲೆಗಳಲ್ಲಿ 175 ಇದ್ದ ಶಿಕ್ಷಕ ಸಂಖ್ಯೆ 120ಕ್ಕೆ ಇಳಿದಿದೆ. ಇದಕ್ಕೆ ಏನು ಕಾರಣ ಎಂಬುದನ್ನು ಶಿಕ್ಷಕರು, ಅಧಿಕಾರಿಗಳು ಚಿಂತನೆ ಮಾಡಬೇಕಾಗಿದೆ. ಮಗುವಿಗೆ ಸರಿಯಾಗಿ ಶಿಕ್ಷಣ ನೀಡದಿದ್ದರೆ ಅದು ದೇಶದ್ರೋಹಕ್ಕೆ ಸಮಾನ ಎಂದು ಹೇಳಿದರು.- - -
-5ಎಚ್.ಎಲ್.ಐ1.ಜೆಪಿಜಿ:ಕಾರ್ಯಕ್ರಮವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು. ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಇನ್ನಿತರ ಗಣ್ಯರು ಇದ್ದರು.