ನರಸಿಂಹರಾಜಪುರಮಕ್ಕಳಿಗೆ ಫಾಸ್ಟ್ ಫುಡ್ ನೀಡದೆ ಮನೆಯಲ್ಲೇ ತಯಾರಿಸಿದ ಆಹಾರ ನೀಡಬೇಕು ಎಂದು ಆರೋಗ್ಯ ಇಲಾಖೆ ಶುಶ್ರೂಷಣಾ ಅಧಿಕಾರಿ ಸೋನಾ ಸಲಹೆ ನೀಡಿದರು.

- ಧ.ಗ್ರಾ.ಯೋಜನೆ ಮಂಜುಶ್ರೀ ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಕ್ಕಳಿಗೆ ಫಾಸ್ಟ್ ಫುಡ್ ನೀಡದೆ ಮನೆಯಲ್ಲೇ ತಯಾರಿಸಿದ ಆಹಾರ ನೀಡಬೇಕು ಎಂದು ಆರೋಗ್ಯ ಇಲಾಖೆ ಶುಶ್ರೂಷಣಾ ಅಧಿಕಾರಿ ಸೋನಾ ಸಲಹೆ ನೀಡಿದರು.

ಮಂಗಳವಾರ ತಾಲೂಕಿನ ವರ್ಕಾಟೆ ರಂಗಮಂದಿರದಲ್ಲಿ ಧ.ಗ್ರಾ.ಯೋಜನೆ ಮಂಜುಶ್ರೀ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲರಿಗೂ ಆರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ. ಇದಕ್ಕೆ ಭಯಪಡದೆ ಪ್ರಾರಂಭದಲ್ಲೇ ಸಮಸ್ಯೆ ತಿಳಿದುಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ನಮ್ಮ ಆರೋಗ್ಯವನ್ನು ಚಿಕ್ಕಂದಿನಿಂದಲೇ ಕಾಪಾಡಿಕೊಳ್ಳಬೇಕು. ತಾಯಂದಿರು 6 ತಿಂಗಳವರೆಗೆ ಮಗುವಿಗೆ ಎದೆ ಹಾಲು ನೀಡಬೇಕು. ನಂತರ ಮನೆಯಲ್ಲಿ ತಯಾರಿಸಿದ ಆಹಾರ ನೀಡಬಹುದು. ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರ ನೀಡಬೇಕು. ಸೊಪ್ಪು,ತರಕಾರಿಗಳಿಂದ ಪೋಷಕಾಂಶ ಸಿಗಲಿದೆ. ಕಿತ್ತಲೆ ಹಣ್ಣಿನಲ್ಲಿ ವಿಟವಿನ್ ಸಿ ಇರುತ್ತದೆ. ಸಣ್ಣ ಕಾಯಿಲೆ ಗಳಿಗೆ ಅತಿ ಹೆಚ್ಚು ಮಾತ್ರೆ ತಿನ್ನಬಾರದು. ಮಕ್ಕಳಿಗೆ ಮನೆಯಲ್ಲೇ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು.

ಧ.ಗ್ರಾ.ಯೋಜನೆಯ ಲೆಕ್ಕ ಪರಿಶೋಧಕ ಪ್ರದೀಪ್ ಮಾತನಾಡಿ, ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಮಹಿಳೆಯರಿಗೆ ವಿಭಿನ್ನ ಕಾರ್ಯಕ್ರಮ ನಡೆಸಲಾಗುತ್ತದೆ. ಗೆಳತಿ, ಅಂಕಣ, ವಾತ್ಸಲ್ಯ ಹಾಗೂ ಯೂ ಟ್ಯೂಬ್ ಮೂಲಕವೂ ಕಾರ್ಯಕ್ರಮ ನಡೆಸಲಾಗುತ್ತದೆ. ಗೆಳತಿ ಅಂಕಣದಲ್ಲಿ ಹೆಣ್ಣು ಮಕ್ಕಳಿಗೆ ಸಮಸ್ಯೆ ಇದ್ದರೆ ಅಂತವರಿಗೆ ಆಪ್ತ ಸಮಾಲೋಚನೆ ಮಾಡಿ ಅವರ ಕುಟುಂಬದ ಸಮಸ್ಯೆಗೆ ಪರಿಹಾರ ನೀಡಲಾಗುವುದು. ವಾತ್ಸಲ್ಯ ಕಾರ್ಯಕ್ರಮದಲ್ಲಿ ವಯೋ ವೃದ್ಧರನ್ನು ನೋಡಿ ಕೊಳ್ಳಲು ಯಾರೂ ಇಲ್ಲದೆ ಇರುವಾಗ ನಮ್ಮ ಯೋಜನೆಯಿಂದ ವಾತ್ಸಲ್ಯ ಮನೆ ಕಟ್ಟಿಸಿಕೊಡಲಾಗುವುದು ಎಂದರು.

ಜ್ಞಾನ ವಿಕಾಸ ಕೇಂದ್ರದ ಕೊಪ್ಪ, ಎನ್.ಆರ್.ಪುರ ತಾಲೂಕುಗಳ ಸಮನ್ವಯಾಧಿಕಾರಿ ಉಷಾ ಮಾತನಾಡಿ, ಜನವರಿ 13 ರಂದು ಮಂಜುಶ್ರೀ ಮಹಿಳಾ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ನಡೆಸೋಣ. ಸಂಘದ ಎಲ್ಲಾ ಸದಸ್ಯರಿಗೂ ಆಟೋಟ ಸ್ಪರ್ಧೆ ಇದ್ದು ಎಲ್ಲರೂ ಭಾಗವಹಿಸಬೇಕು ಎಂದರು.

ಸಭೆ ಅಧ್ಯಕ್ಷತೆಯನ್ನು ಮಂಜುಶ್ರೀ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ವಸಂತಮ್ಮ ವಹಿಸಿದ್ದರು. ಸಭೆಯಲ್ಲಿ ಸೇವಾ ಪ್ರತಿನಿಧಿ ಭಾನುಮತಿ, ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸಂಯೋಜಕಿ ಸೀಮಾ ಇದ್ದರು. ರೂಪ ಸ್ವಾಗತಿಸಿದರು. ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು.ಪದ್ಮ ವಂದಿಸಿದರು.