ಸಾರಾಂಶ
ಕೊಪ್ಪಳ:
ಡ್ರಗ್ಸ್ ದಾಸ್ಯದಿಂದ ಭಯೋತ್ಪಾದನೆ ಹಾಗೂ ಅಪರಾಧ ಕೃತ್ಯ ಹೆಚ್ಚಳವಾಗುತ್ತಿದೆ. ಅದನ್ನು ಪ್ರಾರಂಭದಲ್ಲಿಯೇ ಮಟ್ಟಹಾಕಿ ಯುವಶಕ್ತಿಯನ್ನು ಕಾಪಾಡಬೇಕಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ ಹೇಳಿದರು.ನಗರದ ಮಧುಶ್ರೀ ಗಾರ್ಡ್‌ನಲ್ಲಿ ವಿಶ್ವ ಮಾದಕ ವ್ಯಸನ ವಿರೋಧಿ ದಿನದ ಅಂಗವಾಗಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಜೋನಲ್ ಯುನಿಟ್ ಸಹಯೋಗದೊಂದಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಯುವಜನತೆಗೆ ಡ್ರಗ್ಸ್ ವಿರೋಧಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಏನು ಅರಿಯದ ವಿದ್ಯಾರ್ಥಿಗಳನ್ನು ಡ್ರಗ್ಸ್ ದಾಸ್ಯಕ್ಕೆ ನೂಕಿ ಅವರು ಅಪರಾಧ ಕೃತ್ಯದಲ್ಲಿ ಭಾಗಿಯಾಗುವಂತೆ ಮಾಡಲಾಗುತ್ತಿದೆ. ಈ ಕುರಿತು ವಿದ್ಯಾರ್ಥಿಗಳು ಜಾಗೃತಿ ವಹಿಸಬೇಕು. ಡ್ರಗ್ಸ್‌ನಿಂದ ಮುಂದಾಗುವ ಅನಾಹುತ ಕುರಿತು ಜಾಗೃತಿ ಮೂಡಿಸಿ ಅದರಿಂದ ದೂರವಿರುವಂತೆ ಮಕ್ಕಳನ್ನು ಬೆಳೆಸಬೇಕಿದೆ ಎಂದರು.
ಭಾರತವನ್ನು ನಶೆಮುಕ್ತ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು. ಕೇವಲ ಪೊಲೀಸ್ ಇಲಾಖೆಯಿಂದ ನಿವಾರಿಸಲು ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿರುತ್ತದೆ ಎಂದ ಅವರು, ಈ ಕುರಿತು ಯುವಜನತೆಗೆ ಮಾಹಿತಿ ನೀಡಿ ಅವರನ್ನು ಡ್ರಗ್ಸ್ ದಾಸರಾಗದಂತೆ ತಡೆಯುವ ಮೊದಲ ಮೆಟ್ಟಿಲಾಗಬೇಕು ಎಂದು ಕರೆ ನೀಡಿದರು.ಮಾದಕ ವ್ಯಸನದಿಂದ ಯುವಶಕ್ತಿ ಕಾಪಾಡಿದರೆ ದೇಶದ ಪ್ರಗತಿಯೂ ಆಗುತ್ತದೆ ಎಂದ ಅವರು, ಯಾವುದೇ ಕಾರಣಕ್ಕೂ ಯುವಶಕ್ತಿ ಮಾದಕ ವ್ಯಸನಗಳ ಮೊರೆ ಹೋಗಬಾರದು. ಇದರಿಂದ ನಿಮ್ಮ ಭವಿಷ್ಯ ಹಾಳಾಗುವುದಲ್ಲದೇ ನಿಮ್ಮ ಕುಟುಂಬವು ಸಂಕಷ್ಟ ಎದುರಿಸಲಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕೆಂದು ತಿಳಿಸಿದರು.
ಗಂಗಾವತಿಯಲ್ಲಿ ಮೊದಲ ಬಾರಿಗೆ ಹೈಡ್ರೋ ಗಾಂಜಾ ಪತ್ತೆಯಾಗಿದ್ದು ಇದು ಒಂದು ಗ್ರಾಂಗೆ ₹ ೧೮೦೦ ವರೆಗೆ ಮಾರಾಟವಾಗುತ್ತದೆ. ವಿದೇಶದಲ್ಲಿ ಹೆಚ್ಚು ಬಳಕೆಯಾಗುವ ಈ ಡ್ರಗ್ಸ್ ಜಿಲ್ಲೆಗೂ ಕಾಲಿಟ್ಟಿರುವುದು ಕಳವಳಕಾರಿ ಸಂಗತಿಯಾಗಿದೆ. ನಾವು ಇದರ ಮೂಲ ಪತ್ತೆ ಹಚ್ಚಿ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದೇವೆ. ಹೀಗಾಗಿ ಜಿಲ್ಲೆಯಲ್ಲಿಯೂ ಇದನ್ನು ಮಟ್ಟಹಾಕುವ ಅಗತ್ಯವಿದ್ದು, ಇದಕ್ಕೆ ಸಾರ್ವಜನಿಕರು, ವಿದ್ಯಾರ್ಥಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗಳು ಶಾಲಾ-ಕಾಲೇಜು ಅವಧಿಯ ಪ್ರಾರ್ಥನೆ ವೇಳೆ ಮಾದಕ ವ್ಯಸನಗಳ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲು ಆದ್ಯತೆ ನೀಡಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳಿಗೆ ತರಬೇತುದಾರರ ವಿಕಾಸ ಸಿಂಗ್, ಮನೀಶಕುಮಾರ್ ಡ್ರಗ್ಸ್ ಬಳಕೆಯ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಗದೀಶ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ, ಸೈಬರ್ ಠಾಣೆಯ ಡಿವೈಎಸ್ಪಿ ಯಶವಂತಕುಮಾರ, ಸಿಪಿಐ ಸುರೇಶ ಡಿ. ಇದ್ದರು.