ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಉಳವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಕನ್ಯಾ ನಾಯ್ಕ ತಮ್ಮ ಹುಟ್ಟುಹಬ್ಬವನ್ನು ಶಾಲಾ ಆವರಣದಲ್ಲಿ ಮಕ್ಕಳೊಂದಿಗೆ ಗಿಡ ನೆಡುವ ಮೂಲಕ ಆಚರಿಸಿಕೊಂಡು ಸಂಭ್ರಮಿಸಿದರು.ನಂತರ ಮಾತನಾಡಿದ ಶಿಕ್ಷಕಿ ಸುಕನ್ಯಾ ನಾಯ್ಕ, ಗಿಡಗಳನ್ನು ನೆಡುವುದರ ಜೊತೆಗೆ ಅವುಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಿಡಗಳನ್ನು ಬೆಳೆಸಿರುವುದರಿಂದ ಪರಿಸರದ ಸಮತೋಲನ ಕಾಪಾಡಲು ಮತ್ತು ಆಮ್ಲಜನಕವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಗಿಡಗಳನ್ನು ಕಸ, ಕಡ್ಡಿಗಳಿಂದ ರಕ್ಷಿಸುವುದು ಮತ್ತು ಅವುಗಳನ್ನು ಆರೋಗ್ಯಕರವಾಗಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಪ್ರಕೃತಿ ನಮಗೆ ಅಪಾರ ವನಸಂಪತ್ತನ್ನು ನೀಡಿದೆ. ಮನುಷ್ಯ ಜೀವಿತಾವಧಿಯ ಪ್ರತಿ ಹಂತದಲ್ಲೂ ನಮ್ಮ ಸ್ವಾಸ್ಥ್ಯ ಕಾಪಾಡಲು ನೆರವಾಗುತ್ತವೆ. ಪರಿಸರದಲ್ಲಿನ ಪ್ರತಿ ಸಸ್ಯ, ಕೀಟ, ಪ್ರಾಣಿಗಳು ಒಂದಕ್ಕೊಂದು ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತವೆ. ಇವೆಲ್ಲವುಗಳ ಸಮತೋಲನ ಮಾನವನ ಜೀವನಕ್ಕೆ ಅತ್ಯಂತ ಅಗತ್ಯ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದ ಅವರು, ಪ್ರತಿಯೊಬ್ಬರೂ ತಮ್ಮ ಜನ್ಮ ದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದೇ ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ನೆರವಾಗಬೇಕು ಎಂದರು.ಮುಖ್ಯ ಶಿಕ್ಷಕಿ ಗುಳ್ಳಮ್ಮ ಮಾತನಾಡಿ, ಶಾಲೆಯಲ್ಲಿ ಪರಿಸರ ಸಂರಕ್ಷಣೆಯ ಅಭಿಯಾನ ಶುಭಾರಂಭಗೊಂಡಿದ್ದು, ಪೋಷಕರು ಕೈ ಜೋಡಿಸಿ ತಮ್ಮ ಮಕ್ಕಳ ಹುಟ್ಟು ಹಬ್ಬದ ದಿನದಂದು ತಮ್ಮ ತೋಟ, ಗದ್ದೆ, ಮನೆಯ ಹತ್ತಿರ ಒಂದು ಹಣ್ಣಿನ ಗಿಡವನ್ನು ನೆಡಿಸುವುದರ ಮೂಲಕ ಪರಿಸರ ಸಂರಕ್ಷಣೆ ಮತ್ತು ಪರಿಸರಕ್ಕೆ ಕೊಡುಗೆ ನೀಡಬೇಕು ಎಂದರು.
ಶಿಕ್ಷಕಿ ಮಮತಾ ಮತ್ತು ಎನ್. ಲಲಿತಾ ಮಾತನಾಡಿದರು. ಈ ಸಂದರ್ಭದಲ್ಲಿ ಸಪೋಟ, ಪೇರಲ ಸೇರಿದಂತೆ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಮಕ್ಕಳೊಂದಿಗೆ ಶಾಲಾ ಆವರಣದಲ್ಲಿ ನೆಡಲಾಯಿತು.
-------
ಫೋಟೊ:೨೨ಕೆಪಿಸೊರಬ-೦೨ :ಸೊರಬ ತಾಲೂಕಿನ ಉಳವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಕನ್ಯಾ ನಾಯ್ಕ ತಮ್ಮ ಹುಟ್ಟುಹಬ್ಬವನ್ನು ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನಡುವ ಮೂಲಕ ಆಚರಿಸಿಕೊಂಡರು.