ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ನಿರುದ್ಯೋಗಿ ಯುವಜನರಿಗೆ ಉದ್ಯೋಗಾವಕಾಶ, ಖಾಲಿ ಇರುವ ಸರ್ಕಾರಿ ಹುದ್ದೆಗಳ ನೇಮಕಾತಿ, ಅತಿಥಿ ಶಿಕ್ಷಕರು, ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ತಮ್ಮ ಹೋರಾಟಕ್ಕೆ ಪದವೀಧರರು ಚುನಾವಣೆಯಲ್ಲಿ ಬೆಂಬಲಿಸುವ ಮೂಲಕ ಶಕ್ತಿ ತುಂಬುತ್ತಾರೆಂಬ ವಿಶ್ವಾಸವಿದೆ ಎಂದು ಬೆಂಗಳೂರು ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್.ಎಸ್. ಉದಯ್ ಸಿಂಗ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಗದಲ್ಲಿರುವ ಪದವೀಧರರು ತಮ್ಮದೇ ಆದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಕಳೆದ 15 - 20 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವ್ಯಕ್ತಿಗಳು ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನವನ್ನೇ ಮಾಡಿಲ್ಲ. ಅವರಿಗೆಲ್ಲ ಮತದಾರರೇ ತಕ್ಕ ಪಾಠ ಕಲಿಸುತ್ತಾರೆಂಬ ನಂಬಿಕೆ ಇದೆ. ಪದವೀಧರರ ಆತ್ಮಗೌರವ ರಕ್ಷೆ ನನ್ನ ಸಂಕಲ್ಪ ಎಂದರು.
ಪದವೀಧರರ ಕ್ಷೇತ್ರದಿಂದ ಹತ್ತಾರು ವರ್ಷಗಳಿಂದ ಪ್ರತಿನಿಧಿಸುತ್ತಿರುವ ವ್ಯಕ್ತಿಗಳು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರೇ ಆಗಿದ್ದಾರೆ. 2018ರಲ್ಲಿ ಆಯ್ಕೆಯಾದ ಅ.ದೇವೇಗೌಡರು ಈಗ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. 6 ವರ್ಷಗಳ ಕಾಲಾವಧಿಯಲ್ಲಿ ಅವರು ಪದವೀಧರರ ಪರವಾಗಿ ಸದನದಲ್ಲಿ 6 ನಿಮಿಷವೂ ಮಾತನಾಡಿಲ್ಲ.ಇನ್ನು ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡರವರು 18 ವರ್ಷಗಳಿಂದ ಪದವೀಧರರ ಪ್ರತಿನಿಧಿಯಾಗಲು ಹೋರಾಟ ನಡೆಸುತ್ತಿದ್ದಾರೆ.
ಈಗ ಅವರೇ ಗಿಫ್ಟ್ ಹಂಚಲು ಹೋಗಿ ಪದವೀಧರರಿಗೆ ಕಳಂಕರ ತರುವ ಕೆಲಸ ಮಾಡಿದ್ದಾರೆ. ಪದವೀಧರರ ನೈತಿಕತೆಯನ್ನು ಪ್ರಶ್ನಿಸುವ, ಆತ್ಮಗೌರವಕ್ಕೆ ಧಕ್ಕೆ ತರುವುದರ ಜೊತೆಗೆ ಅವರಿಗೆ ಕಳಂಕ ತರುವಂತೆ ನಡೆದುಕೊಂಡಿದ್ದಾರೆ ಎಂದು ಟೀಕಿಸಿದರು.ಈಗಾಗಲೇ ರಾಮೋಜಿಗೌಡ ಅವರಿಗೆ ಸೇರಿದ್ದು ಎನ್ನಲಾದ ಸುಮಾರು 2 ಕೋಟಿ ರುಪಾಯಿ ಬೆಲೆ ಬಾಳುವ ಗಿಫ್ಟ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಪದವೀಧರರಿಗೆ ಕಳಂಕ ತರುವಂತಹ ಕೆಲಸ ಮಾಡಿರುವ ರಾಮೋಜಿಗೌಡರಿಗೆ ಪದವೀಧರ ಮತದಾರರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಚುನಾವಣೆಗಳಲ್ಲಿ ಹಣ, ಗಿಫ್ಟ್ ಹಂಚಿ ಮತದಾರರನ್ನು ಓಲೈಸಿಕೊಳ್ಳುವ ಆಲೋಚನೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇದ್ದಾರೆ. ಪಕ್ಷದ ಚಿಹ್ನೆಯ ಸೆರಗು ಹಿಡಿದುಕೊಂಡು ವೈಯಕ್ತಿಕ ಹಿತಾಸಕ್ತಿಗಾಗಿ ವಿಧಾನ ಪರಿಷತ್ ಸದಸ್ಯರಾಗುತ್ತಿದ್ದಾರೆಯೇ ಹೊರತು ಪದವೀಧರರ ಧ್ವನಿಯಾಗಲು ಅಲ್ಲ. ಇದಕ್ಕೆಲ್ಲ ಪ್ರಜ್ಞಾವಂತ ಪದವೀಧರರೇ ಕಡಿವಾಣ ಹಾಕಬೇಕು ಎಂದು ತಿಳಿಸಿದರು.ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿಯಿದ್ದು, ಅವುಗಳ ಭರ್ತಿ ಆಗಿಲ್ಲ. ಕೆಪಿಎಸ್ಸಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಹಗರಣಗಳಿಂದ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರದಲ್ಲಿ ಮುಳುಗುತ್ತಿದೆ. ಇದಕ್ಕಾಗಿ ಕಳೆದ 18 ವರ್ಷಗಳಿಂದ ಪದವೀಧರರ ಪ್ರತಿನಿಧಿ ಎಂದು ಹೇಳಿಕೊಂಡು ಬರುತ್ತಿರುವ ವ್ಯಕ್ತಿಗಳು ಒಂದೇ ಒಂದು ಹೋರಾಟವನ್ನೂ ಮಾಡಿಲ್ಲ ಎಂದು ಟೀಕಿಸಿದರು.
ಪದವೀಧರರು ಕೇವಲ 8 - 10 ಸಾವಿರ ವೇತನಕ್ಕಾಗಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು ಸುತ್ತಮುತ್ತಲೂ ಕೈಗಾರಿಕಾ ಪ್ರದೇಶವಿದೆ. ಆದರೂ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಸಿಗುತ್ತಿಲ್ಲ. ಖಾಸಗಿ ವಲಯದಲ್ಲಿ ಉದ್ಯೋಗ ಅರಸುವ ಪದವೀಧರರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಕಲ್ಪಿಸಬೇಕಿದೆ.ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿನ ನಿರಂತರ ಅಕ್ರಮ, ಭ್ರಷ್ಟಾಚಾರ, ಅವ್ಯವಸ್ಥೆ, ಪ್ರತಿಭಾವಂತ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕಿದೆ. ಶಿಕ್ಷಕರ ಮೇಲಿನ ಶೈಕ್ಷಣಿಕ ವಿಚಾರಗಳಾಚೆಗಿನ ಬಾಹ್ಯ ಒತ್ತಡಗಳನ್ನು ಇಳಿಸಬೇಕಿದೆ. ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಕನಿಷ್ಠ ವೇತನದ ಜೊತೆಗೆ ಉದ್ಯೋಗ ಖಾತ್ರಿ ಒದಗಿಸಲು ನಾನು ಹೋರಾಟ ನಡೆಸುತ್ತೇನೆ. ಪದವೀಧರರ ಆತ್ಮಗೌರವ ಕಾಪಾಡುವ ಉದ್ದೇಶದಿಂದ ಸ್ಪರ್ಧೆ ಮಾಡಿರುವ ನನಗೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಬೆಂಬಲ ವ್ಯಕ್ತವಾಗುತ್ತಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಉದಯ್ ಸಿಂಗ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ್ ಮತ್ತಿತರರು ಇದ್ದರು.‘ನಾನು ಯಾವ ರಾಜಕಾರಣಿಗಳ ಸಂಬಂಧಿಯಲ್ಲ. ಹಣ ಸುರಿದು ಎಂಎಲ್ಸಿಯಾಗಿ 6 ವರ್ಷ ಅಧಿಕಾರದಲ್ಲಿ ವಿಜೃಂಭಿಸಲು ಸ್ಪರ್ಧೆ ಮಾಡುತ್ತಿಲ್ಲ. ಪದವೀಧರರ ಸಮಸ್ಯೆಗಳಿಗೆ ಪರಿಹಾರ ಕೊಡಿಸುತ್ತೇನೆಂದು ಮತ ಪಡೆದು ಗೆದ್ದವರು ಒಂದು ದಿನವೂ ಅಹವಾಲುಗಳಿಗೆ ಸ್ಪಂದಿಸಿಲ್ಲ. ಹಾಗಾಗಿ ಪದವೀಧರರ ಧ್ವನಿಯಾಗಲು, ಸ್ವಾರ್ಥ ಮತ್ತು ಭ್ರಷ್ಟಾಚಾರದ ವ್ಯವಸ್ಥೆಯ ಸುಧಾರಣೆಗಾಗಿ ಕಣದಲ್ಲಿದ್ದೇನೆ.‘- ಆರ್ .ಎಸ್ .ಉದಯ್ ಸಿಂಗ್ , ಪಕ್ಷೇತರ ಅಭ್ಯರ್ಥಿ, ಬೆಂಗಳೂರು ಪದವೀಧರ ಕ್ಷೇತ್ರ.