ದೇಶ, ಸಂವಿಧಾನ ರಕ್ಷಣೆ ನಮ್ಮ ಹೊಣೆ: ಪ್ರಕಾಶ ಕುದರಿ

| Published : Jan 28 2024, 01:16 AM IST

ಸಾರಾಂಶ

ಗಣರಾಜೋತ್ಸವದಲ್ಲಿ ಬಸವಕಲ್ಯಾಣ ಉಪ ವಿಭಾಗದ ಸಹಾಯಕ ಆಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ನಮ್ಮ ದೇಶದ ಸಂವಿಧಾನ ಬಹಳ ಅರ್ಥಪೂರ್ಣವಾಗಿದ್ದು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಕ್ಕೆ ಬಹಳ ಮಹತ್ವವಿದೆ ಸಂವಿಧಾನದಂತೆ ನಾವು ನಿವೆಲ್ಲರೂ ನಡೆದುಕೊಳ್ಳಬೇಕು ದೇಶ ಮತ್ತು ಸಂವಿಧಾನ ರಕ್ಷಣೆ ನಮ್ಮ ಹೊಣೆ ಎಂದು ಬಸವಕಲ್ಯಾಣ ಉಪ ವಿಭಾಗದ ಸಹಾಯಕ ಆಯುಕ್ತ ಪ್ರಕಾಶ ಕುದರಿ ನುಡಿದರು.

ಗಣರಾಜೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಥೇರ ಮೈದಾನದ ಸಭಾಭವನದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್‌ ನಮ್ಮ ದೇಶಕ್ಕೆ ಒಳ್ಳೆಯ ಸಂವಿಧಾನ ನೀಡಿದ್ದಾರೆ. ಹೀಗಾಗಿ ದೇಶದಲ್ಲಿ ಸಂವಿಧಾನದ ಆಚರಣೆಯಿಂದ ನಮ್ಮ ರಾಷ್ಟ್ರ ಜಗತ್ತಿನಲ್ಲಿ ಪ್ರಜಾಪ್ರಭುತ್ವ ಯಶಸ್ವಿ ರಾಷ್ಟ್ರವಾಗಿದೆ ಎಂದರು.

ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಸ್ವತಂತ್ರ ಚಳುವಳಿಯಲ್ಲಿ ಮುಖ್ಯ ಪಾತ್ರ ವಹಿಸಿದ ಸ್ವತಂತ್ರ ಸೇನಾನಿಗಳಾದ ಸುಭಾಷ್‌ಚಂದ್ರ ಬೋಸ್‌, ಸಂಗೋಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಭಗತಸಿಂಗ್‌, ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್‌ ಮುಂತಾದವರನ್ನು ಸ್ಮರಿಸಬೇಕು. ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ ದೇಶದ ಪ್ರಗತಿ ಮತ್ತು ಅಭಿವೃದ್ಧಿಯಲ್ಲಿ ಮುಖ್ಯಪಾತ್ರ ವಹಿಸಬೇಕೆಂದರು.

ಗಣರಾಜೋತ್ಸವ ಅಂಗವಾಗಿ ಕೋಟೆಯಿಂದ ಸಭಾಭವನದ ವರೆಗೆ ಶಾಲಾ ಕಾಲೇಜುಗಳು ಮಕ್ಕಳು ಗಣ್ಯರು ಅಧಿಕಾರಿಗಳು ಸ್ಕಾಟ್ಸ್‌ ಅಂಡ್‌ ಗೈಡ್ಸ್‌ ಮುಂತಾದವರು ಸೇರಿ ಭವ್ಯ ಮೆರವಣಿಗೆ ನಡೆಸಿದರು.

ಈ ಮೆರವಣಿಗೆಯಲ್ಲಿ ಸಹಾಯಕ ಆಯುಕ್ತ ಪ್ರಕಾಶ ಕುದರಿ, ಶಾಸಕ ಶರಣು ಸಲಗರ, ತಹಸೀಲ್ದಾರ್‌ ಶಾಂತನಗೌಡ, ಸಿಪಿಐ ಅಲಿಸಾಬ, ಧನರಾಜ ತಾಳಂಪಳ್ಳಿ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಅರ್ಜುನ ಕನಕ, ಚಂಧ್ರಕಾಂತ ಮೇತ್ರೆ, ತಾಪಂ ಇಒ ಮಹಾದೇವ ಬಾಬಳಗೆ ಪೌರಾಯುಕ್ತ ಮನೋಜ ಕಾಂಬಳೆ, ಶಿವಕುಮಾರ ಜಡಗೆ ಮುಂತಾದವರು ಭಾಗವಹಿಸಿದರು.